ವಿಶ್ವಸಂಸ್ಥೆ: ರಷ್ಯಾದ ದಾಳಿಯಿಂದ ನಲುಗಿರುವ ಉಕ್ರೇನ್ ಬಗ್ಗೆ ಭಾರತ ವಿಶ್ವಸಂಸ್ಥೆಯಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದೆ. ಅಲ್ಲದೇ, ಉಭಯ ರಾಷ್ಟ್ರಗಳ ಮಧ್ಯೆ ನಡೆಯುತ್ತಿರುವ ಯುದ್ಧ ಕೊನೆಗೊಳಿಸುವ ರಾಜತಾಂತ್ರಿಕತೆಯನ್ನು ಭಾರತ ಬೆಂಬಲಿಸಲಿದೆ ಎಂದು ತಿಳಿಸಿದೆ.
ಉಕ್ರೇನ್- ರಷ್ಯಾ ಯುದ್ಧ ಕುರಿತು ನಡೆದ ಸಭೆಯಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿ ಪ್ರತೀಕ್ ಮಾಥುರ್, ಉಕ್ರೇನ್‌ನ ಪರಿಸ್ಥಿತಿಯ ಬಗ್ಗೆ ಭಾರತಕ್ಕೆ ತೀವ್ರ ಕಳವಳವಿದೆ. ಘರ್ಷಣೆಯು ಜನರ ಪ್ರಾಣಹಾನಿ ಮತ್ತು ಲೆಕ್ಕವಿಲ್ಲದಷ್ಟು ಧನಹಾನಿಯನ್ನು ಉಂಟುಮಾಡಿದೆ. ಇದು ವಿಶೇಷವಾಗಿ ಮಹಿಳೆಯರು, ಮಕ್ಕಳು ಮತ್ತು ವೃದ್ಧರ ಮೇಲೆ ಭಾರೀ ಪ್ರಭಾವ ಬೀರಿದೆ ಎಂದು ಹೇಳಿದರು.
ಲಕ್ಷಾಂತರ ಜನರು ನಿರಾಶ್ರಿತರಾಗುತ್ತಿದ್ದಾರೆ. ನೆರೆಯ ದೇಶಗಳಲ್ಲಿ ಆಶ್ರಯ ಪಡೆಯಲು ಅಂಗಲಾಚುತ್ತಿದ್ದಾರೆ. ಮುಗ್ಧ ಜೀವಗಳ ಮೇಲೆ ದಾಳಿ ನಡೆಸಲಾಗುತ್ತಿದೆ. ಎಲ್ಲ ಹಗೆತನಗಳನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬುದು ನಮ್ಮ ಅಭಿಮತ. ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಯುದ್ಧವನ್ನು ಕೊನೆಗಾಣಿಸಬೇಕು ಎಂದು ಅವರು ಪ್ರತಿಪಾದಿಸಿದರು.
ಉಕ್ರೇನ್ ಮತ್ತು ರಷ್ಯಾದ ನಡುವಿನ ಸಂಘರ್ಷವನ್ನು ಮಾತುಕತೆಯ ಮೂಲಕ ಕೊನೆಗೊಳಿಸುವ ಎಲ್ಲ ರಾಜತಾಂತ್ರಿಕ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ. ವಿಶ್ವಸಂಸ್ಥೆಯ ಒಳಗೆ ಮತ್ತು ಹೊರಗೆ ಈ ಸಂಘರ್ಷಕ್ಕೆ ಶೀಘ್ರ ಪರಿಹಾರವನ್ನು ಹುಡುಕುವ ನಿಟ್ಟಿನಲ್ಲಿ ರಚನಾತ್ಮಕವಾಗಿ ಕೆಲಸ ಮಾಡುವುದು ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಪ್ರತೀಕ್ ಮಾಥುರ್ ಅಭಿಪ್ರಾಯಪಟ್ಟರು.
ಇತ್ತೀಚೆಗಷ್ಟೇ ಉಕ್ರೇನ್ ಭಾರತದ ದೂತಾವಾಸ ಅಧಿಕಾರಿಯನ್ನು ವಜಾ ಮಾಡಿತ್ತು. ತನ್ನ ದೇಶದ ವಿರುದ್ಧ ಯುದ್ಧದಲ್ಲಿ ಬೆಂಬಲ ನೀಡುತ್ತಿಲ್ಲ ಎಂಬ ಕಾರಣಕ್ಕಾಗಿ ಅಧ್ಯಕ್ಷ ಜೆಲೆನ್ಸ್ಕಿ ಭಾರತದ ರಾಯಭಾರಿಯನ್ನು ದೇಶದಿಂದ ವಜಾ ಮಾಡಿ ಆದೇಶಿಸಿದ್ದಾರೆ. ಈ ಬೆನ್ನಲ್ಲೇ ಭಾರತ ಉಕ್ರೇನ್ ಪರ ವಿಶ್ವಸಂಸ್ಥೆಯಲ್ಲಿ ಮಾತನಾಡಿದೆ.
ಓದಿ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸದಸ್ಯತ್ವ ಪಡೆಯುವ ಭಾರತದ ಯತ್ನಕ್ಕೆ ಪಾಕಿಸ್ತಾನ ಮತ್ತೆ ಅಡ್ಡಿ