ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮೇಲಿನ ದಾಳಿ ಒಂದು ನಾಟಕವಾಗಿದೆ. ನಟನಾ ಕೌಶಲ್ಯದಲ್ಲಿ ಬಾಲಿವುಡ್ ತಾರೆಯರಾದ ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್‌ರನ್ನು ಅವರು ಮೀರಿಸಿದ್ದಾರೆ ಎಂದು ಪಾಕಿಸ್ತಾನ ಡೆಮಾಕ್ರಟಿಕ್ ಮೂವ್‌ಮೆಂಟ್ (ಪಿಡಿಎಂ) ಮುಖ್ಯಸ್ಥ ಮೌಲಾನಾ ಫಜ್ಲುರ್ ರೆಹಮಾನ್ ವ್ಯಂಗ್ಯವಾಡಿದ್ದಾರೆ.
ವಜೀರಾಬಾದ್‌ನಲ್ಲಿ ಕಳೆದ ಗುರುವಾರ ನಡೆದ ಮೆರವಣಿಗೆಯ ಸಂದರ್ಭದಲ್ಲಿ ದುಷ್ಕರ್ಮಿಯ ಗುಂಡಿನ ದಾಳಿಗೊಳಗಾಗಿ ಗಾಯಗೊಂಡಿದ್ದ ಖಾನ್ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ನಂತರ ಭಾನುವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಇದೀಗ ಅವರನ್ನು ಲಾಹೋರ್‌ನಲ್ಲಿರುವ ಖಾಸಗಿ ನಿವಾಸಕ್ಕೆ ಸ್ಥಳಾಂತರಿಸಲಾಗಿದೆ.
"ವಜೀರಾಬಾದ್ ಘಟನೆಯ ಬಗ್ಗೆ ಕೇಳಿದ ಮೇಲೆ ನಾನೂ ಕೂಡ ಖಾನ್ ಬಗ್ಗೆ ಸಹಾನುಭೂತಿ ಹೊಂದಿದ್ದೆ. ಆದರೆ ಅದು ಈಗ ನಾಟಕ ಎಂದು ತೋರುತ್ತಿದೆ. ಇಮ್ರಾನ್ ಮೇಲೆ ಗುಂಡು ಹಾರಿಸಲಾಗಿದೆಯೇ? ಗಾಯವು ಒಂದು ಕಾಲಿನ ಮೇಲೆ ಅಥವಾ ಎರಡು ಕಾಲಿನ ಮೇಲೆ ಆಗಿದೆಯೇ ಎಂಬ ಗೊಂದಲಗಳು ಅವರ ಮೇಲೆ ಸಂದೇಹವನ್ನು ಹುಟ್ಟುಹಾಕಿದೆ" ಎಂದು ರೆಹಮಾನ್ ಅನುಮಾನ ವ್ಯಕ್ತಪಡಿಸಿದ್ದಾರೆ.
ಗುರುವಾರ ಗುಕ್ಖರ್‌ನಲ್ಲಿ ನಡೆದ ಮೆರವಣಿಗೆಯಲ್ಲಿ ವ್ಯಕ್ತಿಯೊಬ್ಬ ಹಾರಿಸಿದ ಮುರಿದ ಗುಂಡುಗಳಿಂದ ಖಾನ್ ಗಾಯಗೊಂಡಿದ್ದಾರೆ ಎಂದು ಪಿಟಿಐ ಪಕ್ಷ ಹೇಳಿತ್ತು. ಈ ಹೇಳಿಕೆಯನ್ನು JUI-F ಮುಖ್ಯಸ್ಥರು ಖಂಡಿಸಿದ್ದು, "ಗುಂಡು ಮುರಿಯಲು ಹೇಗೆ ಸಾಧ್ಯ? ನಾವು ಬಾಂಬ್‌ನಿಂದ ಗುಂಡು ತುಂಡಾದನ್ನು ಕೇಳಿದ್ದೇವೆ. ಆದರೆ ಬುಲೆಟ್‌ನಿಂದ ಕೇಳಿಲ್ಲ. ಖಾನ್ ಅವರ ಸುಳ್ಳನ್ನು ಅಂಧರು ಒಪ್ಪಿಕೊಂಡಿದ್ದಾರೆ." ಎಂದಿದ್ದಾರೆ.
ಇಷ್ಟಕ್ಕೂ ಖಾನ್ ಅವರು ಬುಲೆಟ್ ಗಾಯಗಳಿಗೆ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಏಕೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರೆಹಮಾನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಇತರರಿಗೆ ಕಳ್ಳರು ಎಂದು ಹಣೆಪಟ್ಟಿ ಕಟ್ಟುವ ಖಾನ್ ಇಂದು ತಾನೇ ಕಳ್ಳನಾಗಿ ಹೊರಹೊಮ್ಮಿದ್ದಾರೆ. ಇವರ ಸುಳ್ಳುಗಳನ್ನು ತನಿಖೆ ನಡೆಸಲು ಜಂಟಿ ತನಿಖಾ ತಂಡ (ಜೆಐಟಿ) ರಚಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದನ್ನೂ ಓದಿ:ಗುಂಡಿನ ದಾಳಿ ನಡೆದ ಸ್ಥಳದಿಂದಲೇ ಯಾತ್ರೆ ಪುನಾರಂಭ: ಇಮ್ರಾನ್ ಖಾನ್