ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370 ನೇ ವಿಧಿ ರದ್ದತಿ ಮಾನ್ಯ ಮಾಡಿದ ಸುಪ್ರೀಂಕೋರ್ಟ್ ತೀರ್ಪಿಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ತೀರ್ಪು ಕಾಶ್ಮೀರ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸುತ್ತದೆ ಎಂದು ಹೇಳಿದ್ದಾರೆ.
ಸದ್ಯ ಪ್ರಕರಣವೊಂದರಲ್ಲಿ ರಾವಲ್ಪಿಂಡಿಯ ಅಡಿಯಾಲಾ ಜೈಲಿನಲ್ಲಿ ಬಂಧಿಯಾಗಿರುವ ಖಾನ್, ತಮ್ಮ ಪಕ್ಷವಾದ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ನ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. 370 ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿರುವುದು, ಈಗಿನ ಸಮಸ್ಯೆಗೆ ಪರಿಹಾರವಲ್ಲ. ಬದಲಾಗಿ ಇನ್ನಷ್ಟು ಸಮಸ್ಯೆ ಉದ್ಭವಿಸುವಂತೆ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ಕಾಶ್ಮೀರಿಗರಿಗೆ ತಮ್ಮ ಬೆಂಬಲ: ಭಾರತದ ಉನ್ನತ ನ್ಯಾಯಾಲಯದ ತೀರ್ಪು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳನ್ನು ಸಂಪೂರ್ಣವಾಗಿ ಉಲ್ಲಂಘನೆ ಮಾಡಿದಂತಾಗುತ್ತದೆ. ಇದು ವಿವಾದಾತ್ಮಕ ಮತ್ತು ಕಾನೂನುಬಾಹಿರ ನಿರ್ಧಾರವಾಗಿದೆ. ಈ ತೀರ್ಪು ದಶಕಗಳ ಕಾಲದ ಸಂಘರ್ಷವನ್ನು ಪರಿಹರಿಸಲು ಸಹಾಯ ಮಾಡುವ ಬದಲು ಕಾಶ್ಮೀರ ಸಮಸ್ಯೆಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತದೆ ಎಂದು ಖಾನ್ ಸ್ಪಷ್ಟಪಡಿಸಿದ್ದಾರೆ. ಆದಾಗ್ಯೂ ತಮ್ಮ ಪಕ್ಷವು ಕಾಶ್ಮೀರಿ ಜನರಿಗೆ ಸಂಪೂರ್ಣ ರಾಜತಾಂತ್ರಿಕ, ನೈತಿಕ ಮತ್ತು ರಾಜಕೀಯ ಬೆಂಬಲ ನೀಡುವುದನ್ನು ಮುಂದುವರಿಸುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದರ ಜೊತೆಗೆ 2019 ರಲ್ಲಿ ಭಾರತ ಸರ್ಕಾರ 370ನೇ ವಿಧಿಯ ಅನ್ವಯ ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಿದಾಗ ತಮ್ಮ ಪಕ್ಷ ವಿರೋಧಿಸಿದ್ದನ್ನು ಪ್ರಸ್ತಾಪಿಸಿದ್ದಾರೆ. ಕಾಶ್ಮೀರ ಸಮಸ್ಯೆಯು ಪಾಕಿಸ್ತಾನ ಮತ್ತು ಭಾರತದ ನಡುವಿನ ವಿವಾದದ ಪ್ರಮುಖ ಅಂಶವಾಗಿದೆ. ಅಂದು ಭಾರತ ಕಾಶ್ಮೀರದ ಸ್ಥಾನಮಾನ ಕಸಿದಾಗ ತಮ್ಮ ನೇತೃತ್ವದ ಪಿಟಿಐ ಸರ್ಕಾರವು ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧಗಳನ್ನು ಮುರಿದುಕೊಂಡಿತ್ತು. ಈ ಮೂಲಕ ಕಾಶ್ಮೀರಿಗರಿಗೆ ಬೆಂಬಲ ನೀಡಿತ್ತು ಎಂದು ಹೇಳಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿಗಳಿಗೆ ಮೊದಲ ಆದ್ಯತೆ ನೀಡುವುದರೊಂದಿಗೆ ಭಾರತದೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಲು ತಾವು ಬಯಸುವುದಾಗಿ ಖಾನ್ ಹೇಳಿದ್ದಲ್ಲದೇ, ಕಾಶ್ಮೀರಿ ಜನರ ಆಕಾಂಕ್ಷೆಗಳಿಗೆ ಸಂಬಂಧಿಸಿದಂತೆ ತಾವು ಯಾರೊಂದಿಗೂ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ.
370 ವಿಧಿಯ ಸುಪ್ರೀಂ ತೀರ್ಪೇನು?: ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವೇ ತಾತ್ಕಾಲಿಕವಾಗಿದೆ. ಕಣಿವೆಯಲ್ಲಿನ ಅಂದಿನ ಪರಿಸ್ಥಿತಿಗೆ ಅನುಗುಣವಾಗಿ ಮಾಡಿಕೊಂಡಿದ್ದ ಮಧ್ಯಂತರ ವ್ಯವಸ್ಥೆಯಾಗಿತ್ತು. ಅದನ್ನು ರದ್ದು ಮಾಡಿರುವುದು ತಪ್ಪಲ್ಲ ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಹಿಂದೆ ರಾಜ್ಯವಾಗಿದ್ದ ಜಮ್ಮು ಮತ್ತು ಕಾಶ್ಮೀರವು ದೇಶದ ಇತರ ರಾಜ್ಯಗಳಿಗಿಂತ ಭಿನ್ನವಾದ ಆಂತರಿಕ ಸಾರ್ವಭೌಮತ್ವವನ್ನು ಹೊಂದಿಲ್ಲ. ದೇಶದ ಸಂವಿಧಾನದ ಎಲ್ಲಾ ನಿಬಂಧನೆಗಳು ಅಲ್ಲಿಗೂ ಅನ್ವಯಿಸುತ್ತವೆ. ಸಂವಿಧಾನದ 370 ನೇ ವಿಧಿ ತಾತ್ಕಾಲಿಕ ವ್ಯವಸ್ಥೆಯಾಗಿದ್ದ ಕಾರಣ, ಅದನ್ನು ಹಿಂತೆಗೆದುಕೊಳ್ಳುವ ಅಧಿಕಾರ ರಾಷ್ಟ್ರಪತಿಗಳಿಗೆ ಇದೆ. ಜಮ್ಮು ಮತ್ತು ಕಾಶ್ಮೀರದಿಂದ ಲಡಾಖ್ ಅನ್ನು ಬೇರ್ಪಡಿಸಿ ಎರಡನ್ನೂ ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಮಾಡಿದ ನಿರ್ಧಾರವೂ ಸಿಂಧುವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನೂ ಓದಿ: ಆರ್ಟಿಕಲ್ 370 ರದ್ದು: ಸುಪ್ರೀಂ ತೀರ್ಪಿನಿಂದ ಏಕ್ ಭಾರತ್ ಶ್ರೇಷ್ಠ್ ಭಾರತ್ ಕಲ್ಪನೆ ಸಾಕಾರ.. ಪ್ರಧಾನಿ ಮೋದಿ