ಇಸ್ಲಾಮಾಬಾದ್ (ಪಾಕಿಸ್ತಾನ): ಸರ್ಕಾರದ ದುಬಾರಿ ಉಡುಗೊರೆಗಳನ್ನು ಮಾರಾಟ ಮಾಡಿ ಲಾಭಗಳಿಸಿದ ಗಂಭೀರ ಪ್ರಕರಣದಲ್ಲಿ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಜೈಲು ಶಿಕ್ಷೆ ಅನುಭವಿಸುತ್ತಿದ್ದರೆ, ಇತ್ತ ಅವರ ಆಪ್ತರಾಗಿರುವ ಮಾಜಿ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿಯ ಅವರನ್ನು ಅಧಿಕೃತ ರಹಸ್ಯ ಕಾಯ್ದೆಯಡಿ ಶನಿವಾರ ಅವರ ಮನೆಯಿಂದಲೇ ಪೊಲೀಸರು ಬಂಧಿಸಿದ್ದಾರೆ. 'ರಾಜತಾಂತ್ರಿಕ ಸೋರಿಕೆ' ವಿಚಾರಕ್ಕೆ ಸಂಬಂಧಿಸಿದಂತೆ ಖುರೇಷಿಯನ್ನು ಬಂಧಿಸಲಾಗಿದ್ದು, ಬಳಿಕ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (ಎಫ್‌ಐಎ) ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿದೆ.
67 ವರ್ಷದ ಶಾ ಮೆಹಮೂದ್ ಖುರೇಷಿ ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಉಪಾಧ್ಯಕ್ಷ. ಇವರು ವಿದೇಶಾಂಗ ಸಚಿವರಾಗಿದ್ದಾಗ ಅಮೆರಿಕದಲ್ಲಿರುವ ಪಾಕ್ ರಾಯಭಾರಿ ಕಚೇರಿಗೆ ಕಳುಹಿಸಲಾಗಿದ್ದ ಅಧಿಕೃತ ಗೌಪ್ಯ ರಾಜತಾಂತ್ರಿಕ ರಹಸ್ಯವನ್ನು ಸೋರಿಕೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಹೀಗಾಗಿ ಇವರ ವಿರುದ್ಧ ಪಾಕಿಸ್ತಾನ ದಂಡಸಂಹಿತೆಯ ಸೆಕ್ಷನ್ 5, 34, ಅಧಿಕೃತ ರಹಸ್ಯ ಕಾಯಿದೆಯ 9ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷದ ಮುಖ್ಯಸ್ಥ ಇಮ್ರಾನ್ ಖಾನ್ ವಿರುದ್ಧ 1923ರ ಅಧಿಕೃತ ರಹಸ್ಯ ಕಾಯ್ದೆಯ ಸೆಕ್ಷನ್ 5ರ ಅಡಿಯಲ್ಲಿ ಎಫ್ಐಎರ್ ದಾಖಲಿಸಿದ ನಂತರ ಖುರೇಷಿ ಬಂಧನದ ಬೆಳವಣಿಗೆ ನಡೆದಿದೆ. ಈ ಕುರಿತು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ ಪಕ್ಷವು ಸಾಮಾಜಿಕ ಜಾಲತಾಣ 'X' ಖಾತೆಯಲ್ಲಿ ಪಕ್ಷದ ಉಪಾಧ್ಯಕ್ಷರನ್ನು ಮತ್ತೊಮ್ಮೆ ಅಕ್ರಮವಾಗಿ ಬಂಧಿಸಲಾಗಿದೆ ಎಂದು ಪೋಸ್ಟ್ ಹಾಕಿ ಆಕ್ರೋಶ ವ್ಯಕ್ತಪಡಿಸಿದೆ.
ಇದನ್ನೂ ಓದಿ : Imran Khan: ಇಮ್ರಾನ್ ಖಾನ್ಗೆ ಜೈಲಿನಲ್ಲಿ ವಿಷಪ್ರಾಷನ ಸಾಧ್ಯತೆ... ಪತಿಯ ರಕ್ಷಣೆಗೆ ಪತ್ನಿ ಬುಶ್ರಾ ಬೀಬಿ ಸರ್ಕಾರಕ್ಕೆ ಪತ್ರ
ಗೌಪ್ಯ ರಾಜತಾಂತ್ರಿಕ ವಿಚಾರ ಸೋರಿಕೆಯಾಗಿದೆ ಎಂದು ವರದಿಯಾದಾಗ ಖುರೇಷಿಯು ವಿದೇಶಾಂಗ ಸಚಿವರಾಗಿದ್ದರು. ಕಳೆದ ವರ್ಷ ದಕ್ಷಿಣ ಮತ್ತು ಮಧ್ಯ ಏಷ್ಯಾ ವ್ಯವಹಾರಗಳ ಬ್ಯೂರೋದ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಡೊನಾಲ್ಡ್ ಲು ಮತ್ತು ಪಾಕ್ ರಾಯಭಾರಿ ಅಸದ್ ಮಜೀದ್ ಖಾನ್ ಸೇರಿದಂತೆ ಅಮೆರಿಕ ಸ್ಟೇಟ್ ಡಿಪಾರ್ಟ್ಮೆಂಟ್ ಅಧಿಕಾರಿಗಳ ನಡುವಿನ ಸಭೆಯ ಮಾಹಿತಿ ಸೋರಿಕೆಯಾದ ರಹಸ್ಯ ರಾಜತಾಂತ್ರಿಕ ವಿಚಾರವಾಗಿದೆ.
ಖುರೇಷಿ ಬಂಧನವನ್ನು ಆಂತರಿಕ ವ್ಯವಹಾರಗಳ ಸಚಿವ ಸರ್ಫರಾಜ್ ಬುಗ್ಟಿ ಖಚಿತಪಡಿಸಿದ್ದಾರೆ. ರಾಜತಾಂತ್ರಿಕ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ವಿದೇಶಾಂಗ ಸಚಿವರನ್ನು ಬಂಧಿಸಲಾಗಿದೆ. ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ನಾವು ಕಾನೂನು ಜಾರಿಗೊಳಿಸುತ್ತಿದ್ದೇವೆ. ಈ ಪ್ರಕರಣದಲ್ಲಿ ಯಾರೆಲ್ಲ ಭಾಗಿಯಾಗಿರುವವ ಎಲ್ಲರನ್ನೂ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : ಪಾಕಿಸ್ತಾನದಲ್ಲಿ ಚರ್ಚ್‌ಗಳ ಧ್ವಂಸ - 100 ಕ್ಕೂ ಹೆಚ್ಚು ಮಂದಿ ಬಂಧನ... ಘಟನೆ ಖಂಡಿಸಿದ ಅಮೆರಿಕ, ಶಾಂತಿ ಸ್ಥಾಪನೆಗೆ ಕರೆ