ಇಸ್ಲಾಮಾಬಾದ್ : ಮುಂಬರುವ ಈದ್ ರಜಾದಿನಗಳಲ್ಲಿ ಲಾಹೋರ್‌ನ ಜಮಾನ್ ಪಾರ್ಕ್‌ನಲ್ಲಿರುವ ತಮ್ಮ ನಿವಾಸದಲ್ಲಿ ತಮ್ಮ ಮೇಲೆ ಮತ್ತೊಂದು ಹತ್ಯೆಯ ಯತ್ನ ನಡೆಯಲಿರುವ ಬಗ್ಗೆ ತಮಗೆ ಖಚಿತ ಮಾಹಿತಿ ಇದೆ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷ ಲಾಹೋರ್‌ನಿಂದ ಇಸ್ಲಾಮಾಬಾದ್‌ವರೆಗೆ ನಡೆದ ಸರ್ಕಾರ ವಿರೋಧಿ ಲಾಂಗ್ ಮಾರ್ಚ್‌ನಲ್ಲಿ ವಜೀರಾಬಾದ್ ದಾಳಿಯ ನಂತರ ಇದು ಎರಡನೇ ಹತ್ಯೆಯ ಪ್ರಯತ್ನವಾಗಲಿದೆ ಎಂದು ಅವರು ಹೇಳಿದ್ದಾರೆ.
ತನ್ನ ವಿರುದ್ಧ ದಾಖಲಾದ ಸುಮಾರು 121 ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಳ್ಳದಂತೆ ಮತ್ತು ಬಂಧಿಸದಂತೆ ಕೋರಿ ಲಾಹೋರ್ ಹೈಕೋರ್ಟ್‌ನಲ್ಲಿ (ಎಲ್‌ಎಚ್‌ಸಿ) ಸಲ್ಲಿಸಿದ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಖಾನ್ ಈ ಆರೋಪಗಳನ್ನು ಮಾಡಿದ್ದಾರೆ. ವಜೀರಾಬಾದ್‌ನಲ್ಲಿ ನಡೆಸಲಾದ ಯೋಜಿತ ದಾಳಿಯಂತೆಯೇ ಅವರು ಮತ್ತೊಂದು ಹತ್ಯೆಯ ಪ್ರಯತ್ನ ಯೋಜಿಸುತ್ತಿದ್ದಾರೆ ಎಂದು ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಮುಖ್ಯಸ್ಥ ಇಮ್ರಾನ್ ಆರೋಪಿಸಿದ್ದಾರೆ.
'ಅವರು' ಎಂದು ಹೇಳುವಾಗ ಇಮ್ರಾನ್ ಸದ್ಯದ ಪಾಕಿಸ್ತಾನ ಸರ್ಕಾರ, ಭದ್ರತಾ ಪಡೆಗಳು ಮತ್ತು ಮಿಲಿಟರಿಯತ್ತ ಬೊಟ್ಟು ಮಾಡಿರುವುದು ಸ್ಪಷ್ಟ. ಇವರೆಲ್ಲರೂ ಸೇರಿಕೊಂಡು ಮೊದಲಿಗೆ ತಮ್ಮ ಸರ್ಕಾರ ಕೆಡವಿದ್ದು, ಈಗ ತಮ್ಮನ್ನು ಮುಗಿಸಲು ಯತ್ನಿಸುತ್ತಿದ್ದಾರೆ ಎಂಬುದು ಇಮ್ರಾನ್ ಖಾನ್ ಆರೋಪವಾಗಿದೆ. ತಮ್ಮ ವಿರೋಧಿಗಳು ರಕ್ತಪಾತ ನಡೆಸಲು ಯೋಜಿಸಿದ್ದಾರೆ. ಹೀಗಾಗಿ ಲಾಹೋರ್ ಹೈಕೋರ್ಟ್ ಮಧ್ಯಪ್ರವೇಶಿಸಿ ತನ್ನನ್ನು ಬಂಧಿಸದಂತೆ ನಿರ್ದೇಶನ ನೀಡಬೇಕು ಎಂದು ಮಾಜಿ ಪ್ರಧಾನಿ ಕೋರಿದ್ದಾರೆ.
ನನ್ನ ಜಮಾನ್ ಪಾರ್ಕ್ ನಿವಾಸದ ಮೇಲೆ ಮತ್ತೆ ಪೊಲೀಸರು ಮತ್ತು ಭದ್ರತಾ ಅಧಿಕಾರಿಗಳು ದಾಳಿ ಮಾಡಿದರೆ ಪರಿಸ್ಥಿತಿ ಹದಗೆಡುತ್ತದೆ. ನನ್ನನ್ನು ಕೊಲ್ಲಲು ಬಯಸುವವರು ಸರ್ಕಾರದಲ್ಲಿ ಕುಳಿತು ರಕ್ತಪಾತ ಬಯಸುತ್ತಿದ್ದಾರೆ. ಅವರು ಯಾವುದೇ ಪರಿಹಾರ ಬಯಸುತ್ತಿಲ್ಲ ಎಂದು ಅವರು ಹೇಳಿದರು. ಮೊಹರಂ ಸಮಯದಲ್ಲಿ ಭಾರತ ಮತ್ತು ಪಾಕಿಸ್ತಾನವು ಕದನ ವಿರಾಮವನ್ನು ಘೋಷಿಸಬಹುದಾದಾಗ, ಈದ್ ರಜಾದಿನಗಳಲ್ಲಿ ಇಮ್ರಾನ್ ಖಾನ್ ಅವರನ್ನು ಬಂಧಿಸದಂತೆ ಪೊಲೀಸ್ ಅಧಿಕಾರಿಗಳಿಗೆ ಏಕೆ ತಡೆಯಲು ಸಾಧ್ಯವಿಲ್ಲ? ಎಂದು ಖಾನ್ ಅವರ ವಕೀಲ ಸಲ್ಮಾನ್ ಸಫ್ದರ್ ನ್ಯಾಯಾಲಯದ ಮುಂದೆ ವಾದಿಸಿದರು.
ಇಮ್ರಾನ್ ಖಾನ್ ಮತ್ತು ಶಹಬಾಜ್ ಗಿಲ್ ಅವರ ಎರಡೂ ಪ್ರಕರಣಗಳಲ್ಲಿ ಪೊಲೀಸ್ ಅಧಿಕಾರಿಗಳು ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಂತೆ ನಿರ್ಬಂಧಿಸಲಾಗಿದೆ. ಆದರೆ ಅಧಿಕಾರಿಗಳು ನ್ಯಾಯಾಲಯದ ಆದೇಶಗಳನ್ನು ಪಾಲನೆ ಮಾಡುತ್ತಿಲ್ಲ ಎಂದು ವಕೀಲರು ಹೇಳಿದರು. ಏತನ್ಮಧ್ಯೆ, ಸರ್ಕಾರಿ ವಕೀಲರು ಖಾನ್ ಅವರ ವಕೀಲರ ವಾದವನ್ನು ತಳ್ಳಿ ಹಾಕಿದರು. ಪೊಲೀಸರು ಅಕ್ರಮವಾಗಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಹೀಗಾಗಿ ಇಮ್ರಾನ್ ಖಾನ್ ಕೋರಿಕೆ ತಿರಸ್ಕರಿಸುವಂತೆ ಮತ್ತು ತನಿಖೆಗೆ ಅಡ್ಡಿಯುಂಟು ಮಾಡುವುದನ್ನು ತಡೆಗಟ್ಟುವಂತೆ ನ್ಯಾಯಾಲಯ ಕೋರಿದರು.
2022ರ ನವೆಂಬರ್ 3 ರಂದು ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಇಮ್ರಾನ್ ಖಾನ್ ಮೇಲೆ ವಜೀರಾಬಾದ್ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದಿತ್ತು. ಮೂವರು ಬಂದೂಕುಧಾರಿಗಳು ಗುಂಡು ಹಾರಿಸಿದ್ದರಿಂದ ಇಮ್ರಾನ್ ಬಲಗಾಲಿಗೆ ಗುಂಡು ತಗುಲಿತ್ತು.
ಇದನ್ನೂ ಓದಿ : ಪಾಕಿಸ್ತಾನದ ಆರ್ಥಿಕತೆಗೆ ಮತ್ತೊಂದು ಹೊಡೆತ: ತಲಾದಾಯ 1,399 ಡಾಲರ್ಗೆ ಇಳಿಕೆ