ವಾಶಿಂಗ್ಟನ್: 1917ರ ಬೊಲ್ಷೆವಿಕ್ ಕ್ರಾಂತಿಯ ನಂತರ ರಷ್ಯಾ ಇದೇ ಮೊದಲ ಬಾರಿಗೆ ತನ್ನ ವಿದೇಶಿ ಸಾಲಗಳ ಮರುಪಾವತಿ ಮಾಡುವಲ್ಲಿ ವಿಫಲವಾಗಿದೆ. ಇದನ್ನೇ ಅವಕಾಶವಾಗಿ ಬಳಸಿಕೊಂಡು ರಷ್ಯಾವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಹೊಂಚು ಹಾಕುತ್ತಿವೆ.
ಇಂಧನದ ನಂತರ ರಷ್ಯಾದಿಂದ ಅತಿ ಹೆಚ್ಚು ರಫ್ತಾಗುವ ವಸ್ತು ಎಂದರೆ ಚಿನ್ನ. ಸದ್ಯ ರಷ್ಯಾದ ಚಿನ್ನದ ರಫ್ತಿನ ಮೇಲೆ ಅಮೆರಿಕ ಮತ್ತು ಮಿತ್ರರಾಷ್ಟ್ರಗಳು ಕಣ್ಣಿಟ್ಟಿವೆ.
ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ್ದಕ್ಕೆ ಪ್ರತೀಕಾರವಾಗಿ ರಷ್ಯಾ ಮೇಲೆ ಹೊಸ ಆರ್ಥಿಕ ನಿರ್ಬಂಧಗಳನ್ನು ವಿಧಿಸಲು ಸಜ್ಜಾಗಿರುವ ಜಿ7 ರಾಷ್ಟ್ರಗಳು ಅಧಿಕೃತವಾಗಿ ರಷ್ಯಾದ ಚಿನ್ನದ ಮೇಲೆ ನಿರ್ಬಂಧ ಹೇರಲಿವೆ.
ಆರ್ಥಿಕ ನಿರ್ಬಂಧಗಳ ಪರಿಣಾಮಗಳನ್ನು ಕಡಿಮೆ ಮಾಡಲು ರಷ್ಯಾ ಚಿನ್ನವನ್ನು ಕರೆನ್ಸಿಯ ಬೆಂಬಲಕ್ಕೆ ನಿಲ್ಲಿಸಿದೆ. ಚಿನ್ನವನ್ನು ಹೆಚ್ಚಿನ ಪ್ರಮಾಣದ ವಿದೇಶಿ ಕರೆನ್ಸಿಯೊಂದಿಗೆ ಬದಲಾಯಿಸುವುದು ಇದರಲ್ಲೊಂದು ಪ್ರಮುಖ ಮಾರ್ಗವಾಗಿದೆ ಹಾಗೂ ಈ ಪ್ರಕ್ರಿಯೆಯು ಸದ್ಯದ ಆರ್ಥಿಕ ನಿರ್ಬಂಧಗಳ ಅಡಿಯಲ್ಲಿ ಬರುವುದಿಲ್ಲ ಎಂದು ಅಮೆರಿಕ ಹೇಳಿದೆ.
ಆದರೆ ಕೆಲವೇ ಕೆಲ ರಾಷ್ಟ್ರಗಳು ರಷ್ಯಾ ಚಿನ್ನಕ್ಕೆ ನಿರ್ಬಂಧ ಹೇರುತ್ತಿರುವುದರಿಂದ ಈ ಕ್ರಮವು ಸದ್ಯಕ್ಕೆ ಕೇವಲ ಸಾಂಕೇತಿಕವಾಗಿ ಕಾಣಿಸುತ್ತಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ. ರಷ್ಯಾ ಚಿನ್ನದ ಮೇಲಿನ ನಿರ್ಬಂಧದಿಂದ ಆ ದೇಶವು ಇತರ ದೇಶಗಳೊಡನೆ ವ್ಯವಹರಿಸುವುದರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಕೆಲ ವಿಶ್ಲೇಷಕರು ಹೇಳುತ್ತಿದ್ದಾರೆ.
ರಷ್ಯಾ ಬಳಿ ಎಷ್ಟು ಚಿನ್ನವಿದೆ? : 2014 ರಲ್ಲಿ ಕ್ರಿಮಿಯ ಮೇಲೆ ಪುಟಿನ್ ದಾಳಿ ಮಾಡಿದಾಗ ಅಮೆರಿಕ ನಿರ್ಬಂಧ ವಿಧಿಸಿದ ನಂತರ ರಷ್ಯಾ ಚಿನ್ನದ ಖರೀದಿಯನ್ನು ಹೆಚ್ಚಿಸಿದೆ. ಸದ್ಯ ರಷ್ಯಾ 100 ರಿಂದ 140 ಬಿಲಿಯನ್ ಡಾಲರ್ ಮೊತ್ತದ ಚಿನ್ನದ ದಾಸ್ತಾನು ಹೊಂದಿದೆ ಎನ್ನಲಾಗಿದೆ. ಇದು ರಷ್ಯಾದ ಸೆಂಟ್ರಲ್ ಬ್ಯಾಂಕಿನಲ್ಲಿರುವ ಚಿನ್ನದ ಶೇ 20 ರಷ್ಟು ಎಂದು ಹೇಳಲಾಗಿದೆ.
ರಷ್ಯಾಕ್ಕೇನು ತೊಂದರೆಯಾಗಬಹುದು?: ಈಗಾಗಲೇ ರಷ್ಯಾ ಮೇಲೆ ಸಾವಿರಾರು ರೀತಿಯಲ್ಲಿ ಆರ್ಥಿಕ ನಿರ್ಬಂಧಗಳನ್ನು ವಿಧಿಸಲಾಗಿದೆ. ಈಗ ಚಿನ್ನದ ಮೇಲೆ ನಿರ್ಬಂಧ ವಿಧಿಸುವ ಮೂಲಕ ರಷ್ಯಾವನ್ನು ಏಕಾಂಗಿಯಾಗಿ ಮಾಡುವ ತಂತ್ರವಾಗಿದೆ. ವಿಶ್ವ ಆರ್ಥಿಕ ವ್ಯವಸ್ಥೆ ಹಾಗೂ ರಷ್ಯಾ ಆರ್ಥಿಕ ವ್ಯವಸ್ಥೆಯ ಮಧ್ಯದ ಕೊಂಡಿಯನ್ನು ಚಿನ್ನದ ಮೇಲಿನ ನಿರ್ಬಂಧವು ಕಡಿದು ಹಾಕಲಿದೆ ಎನ್ನುತ್ತಾರೆ ವೈಟ್ ಹೌಸ್ ಅಧಿಕಾರಿಯೊಬ್ಬರು.