ನವದೆಹಲಿ : ಈಜಿಪ್ಟ್ ಇತ್ತೀಚೆಗೆ ಪ್ರಸ್ತಾಪಿಸಿದ ಹೊಸ ಕದನ ವಿರಾಮ ಯೋಜನೆಯ ಬಗ್ಗೆ ತನ್ನ ಅಭಿಪ್ರಾಯ ಮಂಡಿಸಲು ಹಮಾಸ್ ನಿಯೋಗವೊಂದು ಇಂದು (ಶುಕ್ರವಾರ) ಈಜಿಪ್ಟ್ಗೆ ಭೇಟಿ ನೀಡಲಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಪುನಃ ಮುಂದುವರಿಸಬಹುದಾದ ಕದನ ವಿರಾಮ, ಇಸ್ರೇಲ್ನಲ್ಲಿನ ಪ್ಯಾಲೆಸ್ಟೈನ್ ಕೈದಿಗಳಿಗೆ ಬದಲಾಗಿ ಹಮಾಸ್ ವಶದಲ್ಲಿರುವ ಒತ್ತೆಯಾಳುಗಳ ಬಿಡುಗಡೆ ಮತ್ತು ಅಂತಿಮವಾಗಿ ಸಂಘರ್ಷವನ್ನು ಕೊನೆಗೊಳಿಸುವುದು ಹೀಗೆ ಮೂರು ಹಂತದ ಕದನ ವಿರಾಮದ ಯೋಜನೆಯನ್ನು ಈಜಿಪ್ಟ್ ಮುಂದಿಟ್ಟಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
"ಯುದ್ಧ ಮುಗಿದ ನಂತರ ಗಾಜಾವನ್ನು ಆಳುವ ಮತ್ತು ಪುನರ್ನಿರ್ಮಿಸುವ ಜವಾಬ್ದಾರಿಯನ್ನು ಹೊಂದಿರುವ ಎಲ್ಲಾ ಪ್ಯಾಲೆಸ್ಟೈನ್ ಬಣಗಳನ್ನು ಒಳಗೊಂಡ ಸರ್ಕಾರ ರಚನೆಯ ಯೋಜನೆಯನ್ನು ಸಹ ಇದು ಒಳಗೊಂಡಿದೆ" ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಒತ್ತೆಯಾಳುಗಳ ವಿನಿಮಯದ ವಿವರಗಳು ಮತ್ತು ಇಸ್ರೇಲ್ ತನ್ನ ಮಿಲಿಟರಿಯನ್ನು ಹಿಂತೆಗೆದುಕೊಳ್ಳುವ ಭರವಸೆಗಳು ಸೇರಿದಂತೆ ಪ್ಯಾಲೆಸ್ಟೈನ್ ಬಣಗಳ ಪ್ರತಿಕ್ರಿಯೆಯನ್ನು ನಿಯೋಗವು ಸಭೆಯಲ್ಲಿ ಪ್ರಸ್ತಾಪಿಸಲಿದೆ.
"ಪ್ಯಾಲೆಸ್ಟೈನ್ನಲ್ಲಿ ರಕ್ತಪಾತ ನಿಲ್ಲಿಸುವ ಉದ್ದೇಶದಿಂದ ಸಂಬಂಧಪಟ್ಟ ಎಲ್ಲಾ ಪಕ್ಷಗಳ ಅಭಿಪ್ರಾಯಗಳನ್ನು ಒಟ್ಟುಗೂಡಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ" ಎಂದು ಈಜಿಪ್ಟ್ ಸರ್ಕಾರದ ಮಾಹಿತಿ ಸೇವೆಗಳ ಮುಖ್ಯಸ್ಥೆ ದಿಯಾ ರಶ್ವಾನ್ ಹೇಳಿದರು.
ಸಿರಿಯಾ ಮೇಲೆ ಇಸ್ರೇಲ್ ದಾಳಿ: ದಕ್ಷಿಣ ಸಿರಿಯಾದಲ್ಲಿರುವ ಪ್ರಮುಖ ವಾಯುನೆಲೆಯ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ ಕಡೆಯಿಂದ ಸಿರಿಯಾದ ಮೇಲೆ ರಾಕೆಟ್ ದಾಳಿ ನಡೆಸಲಾಗಿದೆ ಎಂದು ಸಿರಿಯಾ ಮಿಲಿಟಿರಿ ಹೇಳಿದೆ. ಸಿರಿಯಾದ ರಾಜಧಾನಿಯ ಬಳಿ ಮಧ್ಯರಾತ್ರಿಯ ನಂತರ ಇಸ್ರೇಲ್ ಮತ್ತೊಂದು ಸುತ್ತಿನ ದಾಳಿ ನಡೆಸಿದೆ ಎಂದು ಸಿರಿಯನ್ ಸೇನಾ ಮೂಲವನ್ನು ಉಲ್ಲೇಖಿಸಿ ಸರ್ಕಾರಿ ಮಾಧ್ಯಮಗಳು ತಿಳಿಸಿವೆ. ಆದರೆ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿಲ್ಲ.
ಮೊಸ್ಸಾದ್ಗಾಗಿ ಕೆಲಸ ಮಾಡುತ್ತಿದ್ದವರಿಗೆ ಗಲ್ಲು: ಇಸ್ರೇಲ್ನ ಮೊಸ್ಸಾದ್ ಗುಪ್ತಚರ ಸಂಸ್ಥೆಯೊಂದಿಗೆ ರಹಸ್ಯವಾಗಿ ಕೆಲಸ ಮಾಡುತ್ತಿದ್ದ ನಾಲ್ವರನ್ನು ಗಲ್ಲಿಗೇರಿಸಿರುವುದಾಗಿ ಇರಾನ್ ಶುಕ್ರವಾರ ಹೇಳಿದೆ. ಮೊಸ್ಸಾದ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದೇಶದ ಭದ್ರತೆಯ ವಿರುದ್ಧ ಕೆಲಸ ಮಾಡುತ್ತಿದ್ದ ತಂಡದ ನಾಲ್ವರು ಸದಸ್ಯರನ್ನು ಕಾನೂನು ಪ್ರಕ್ರಿಯೆಗಳ ಪ್ರಕಾರ ಇಂದು ಬೆಳಗ್ಗೆ ಗಲ್ಲಿಗೇರಿಸಲಾಯಿತು ಎಂದು ಇರಾನಿನ ಸುದ್ದಿ ಮಾಧ್ಯಮ ವರದಿ ಮಾಡಿದೆ.
ಇದನ್ನೂ ಓದಿ : ಅಮೆರಿಕದ ಗೂಢಚಾರರ ಪತ್ತೆಗೆ ಎಐ ತಂತ್ರಜ್ಞಾನ ತಯಾರಿಸಿದ ಚೀನಾ