ಅಬುಜಾ (ನೈಜೀರಿಯಾ): ಉತ್ತರ - ಮಧ್ಯ ನೈಜೀರಿಯಾದ ಹಳ್ಳಿಯೊಂದರ ಮೇಲೆ ಬಂದೂಕುಧಾರಿಗಳು ಎರಡು ಬಾರಿ ದಾಳಿ ನಡೆಸಿ ಕನಿಷ್ಠ 50 ಜನರನ್ನು ಕೊಂದಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆ. "ಬೆನ್ಯೂ ರಾಜ್ಯದ ಉಮೊಗಿಡಿ ಗ್ರಾಮದಲ್ಲಿ ಬುಧವಾರ ಬಂದೂಕುಧಾರಿಗಳು 47 ಜನರನ್ನು ಕೊಲೆ ಮಾಡಿದ್ದಾರೆ. ಒಂದು ದಿನದ ಹಿಂದೆ, ಅದೇ ಸ್ಥಳದಲ್ಲಿ ಮೂವರನ್ನು ಕೊಲ್ಲಲಾಗಿತ್ತು" ಎಂದು ಒಟುಕ್ಪೋ ಸ್ಥಳೀಯ ಅಧ್ಯಕ್ಷ ರೂಬೆನ್ ಬಾಕೊ ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ದಾಳಿಕೋರರು ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯ ಉದ್ದೇಶ ಏನೆಂದು ಇದುವರೆಗೂ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ, ಉತ್ತರ - ಮಧ್ಯ ನೈಜೀರಿಯಾದಲ್ಲಿ ಜಮೀನು ವಿವಾದಗಳಿಗೆ ಸಂಬಂಧಿಸಿದಂತೆ ರೈತರೊಂದಿಗೆ ಈ ಹಿಂದೆ ಘರ್ಷಣೆ ಮಾಡಿದ್ದ ಸ್ಥಳೀಯ ಕುರುಬರ ಮೇಲೆ ಅನುಮಾನವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ : ಪ್ರಾರ್ಥನೆ ವೇಳೆ ಗುಂಡು - ಬಾಂಬ್ ದಾಳಿ.. ಚರ್ಚ್‌ನಲ್ಲಿ ಪ್ರಾಣಬಿಟ್ಟ 50ಕ್ಕೂ ಹೆಚ್ಚು ಭಕ್ತಾದಿಗಳು!
ನೈಜೀರಿಯಾದ ಆಹಾರದ ಬುಟ್ಟಿ ಎಂದು ಬೆನ್ಯೂ ರಾಜ್ಯವನ್ನು ಕರೆಯಲಾಗುತ್ತದೆ. ನೈಜೀರಿಯಾದ ವಾಯುವ್ಯ ಮತ್ತು ಮಧ್ಯ ಪ್ರದೇಶಗಳಲ್ಲಿ ಕೃಷಿ ಸಮುದಾಯಗಳು ಮತ್ತು ಅಲೆಮಾರಿಗಳ ನಡುವೆ ದಶಕಗಳಿಂದ ಘರ್ಷಣೆ ನಡೆಯುತ್ತಿದೆ. ಬಹುತೇಕ ಫುಲಾನಿ ಮೂಲದ ಕುರಿಗಾಹಿಗಳು ತಮ್ಮ ಜಮೀನಿನಲ್ಲಿ ಜಾನುವಾರುಗಳನ್ನು ಮೇಯಿಸಿ ಬೆಳೆಗಳನ್ನು ನಾಶಪಡಿಸುತ್ತಿದ್ದಾರೆ ಎಂದು ರೈತರು ಹಿಂದಿನಿಂದಲೂ ಆರೋಪಿಸುತ್ತಿದ್ದಾರೆ. ಹೀಗೆ ಆಗಾಗ್ಗೆ ಘರ್ಷಣೆಗಳಿಂದಾಗಿ ರಾಜ್ಯದಿಂದ ಕೃಷಿ ಇಳುವರಿಯು ಕಡಿಮೆಯಾಗಿದೆ.
ಇದನ್ನೂ ಓದಿ : ನೈಜೀರಿಯಾದಲ್ಲಿ ಮಸೀದಿ ಮೇಲೆ ಬಂದೂಕುಧಾರಿಗಳ ದಾಳಿ, ಕನಿಷ್ಠ 18 ಜನರು ಸಾವು
ಇನ್ನು ಕಳೆದ ವರ್ಷದ ಜನವರಿ ತಿಂಗಳಲ್ಲಿ ಬಂದೂಕುಧಾರಿಗಳು ಭಕ್ತರ ಮೇಲೆ ಗುಂಡು ಹಾರಿಸಿ ಬಾಂಬ್ ದಾಳಿ ನಡೆಸಿದ್ದರು. ನೈರುತ್ಯ ನೈಜೀರಿಯಾದ ಕ್ಯಾಥೋಲಿಕ್ ಚರ್ಚ್‌ನಲ್ಲಿ ಘಟನೆ ನಡೆದಿತ್ತು. ಈ ವೇಳೆ, ಸುಮಾರು 50ಕ್ಕೂ ಹೆಚ್ಚು ಭಕ್ತಾದಿಗಳು ಸಾವನ್ನಪ್ಪಿದ್ದರು. ಒಂಡೋ ರಾಜ್ಯದ ಸೇಂಟ್ ಫ್ರಾನ್ಸಿಸ್ ಕ್ಯಾಥೋಲಿಕ್ ಚರ್ಚ್‌ನಲ್ಲಿ ಕ್ರಿಶ್ಚಿಯನ್ನರಿಗೆ ವಿಶೇಷ ದಿನವಾದ ಪೆಂಟೆಕೋಸ್ಟ್ ಸಂಡೇ ಯಂದು ಯೇಸುವಿನ ಭಕ್ತರು ಪ್ರಾರ್ಥನೆ ಕೈಗೊಂಡಿದ್ದರು. ಭಕ್ತರು ಚರ್ಚ್‌ನಲ್ಲಿ ಜಮಾಯಿಸಿದಂತೆಯೇ ದಾಳಿಕೋರರು ಗುಂಡಿನ ದಾಳಿ ನಡೆಸಿ, ಬಾಂಬ್ ಎಸೆದು ಅಟ್ಟಹಾಸ ಮೆರೆದಿದ್ದರು.
ಇದನ್ನೂ ಓದಿ : 200ಕ್ಕೂ ಹೆಚ್ಚು ಬಂಡುಕೋರರಿಂದ ಗುಂಡಿನ ದಾಳಿ, 43 ಮಂದಿ ನಾಗರಿಕರ ಸಾವು
ಹಾಗೆಯೇ, 2021 ರ ಅಕ್ಟೋಬರ್ ತಿಂಗಳಲ್ಲಿ ಬೈಕ್ಗಳಲ್ಲಿ ಬಂದ ಬಂಡುಕೋರರು ಗುಂಡು ಹಾರಿಸಿ ಸುಮಾರು 43 ಮಂದಿಯನ್ನು ಕೊಂದಿದ್ದ ಘಟನೆ ನೈಜೀರಿಯಾದ ವಾಯವ್ಯ ರಾಜ್ಯವಾದ ಸೊಕೊಟೊದಲ್ಲಿ ನಡೆದಿತ್ತು. ಇದಕ್ಕೂ ಮೊದಲು ಬೇರೊಂದು ಗ್ರಾಮದ ಮಾರುಕಟ್ಟೆಯ ಮೇಲೆ ದಾಳಿ ನಡೆಸಿದ್ದ ಬಂಡುಕೋರರು, 19 ಮಂದಿಯನ್ನು ಕೊಂದಿದ್ದರು. ಸುಮಾರು ವರ್ಷಗಳಲ್ಲಿ ಈ ರಾಷ್ಟ್ರದಲ್ಲಿ ಹಿಂಸಾಚಾರಗಳು ನಡೆಯುತ್ತಿದ್ದು, ಬೋಕೋ ಹರಾಮ್ ಮುಂತಾದ ಬಂಡುಕೋರರು ಇಲ್ಲಿ ಆಗಾಗ ದಾಳಿ ನಡೆಸುತ್ತಿರುತ್ತಾರೆ.
ಇದನ್ನೂ ಓದಿ : ನೈಜೀರಿಯಾದಲ್ಲಿ ಭಯೋತ್ಪಾದಕರಿಂದ ಬಸ್ಗಳ ಮೇಲೆ ದಾಳಿ: 22 ಮಂದಿ ಸಾವು