ರಿಯೊ ಡಿ ಜನೈರೊ( ಬ್ರೆಜಿಲ್): ದಕ್ಷಿಣ ಅಮೆರಿಕದ ಬ್ರೆಜಿಲ್‌ನಿಂದ ಹೃದಯ ವಿದ್ರಾವಕ ಘಟನೆಯೊಂದು ಹೊರಹೊಮ್ಮಿದೆ. ಇಬ್ಬರು ಬಂದೂಕುಧಾರಿಗಳು ಪೂಲ್ ಗೇಮ್‌ನಲ್ಲಿ ಸೋತಿದ್ದು, ಅವರನ್ನು ನೋಡಿ ಸಂತೋಷಪಟ್ಟ ಏಳು ಜನರನ್ನು ಗುಂಡಿಕ್ಕಿ ಕೊಂದಿದ್ದಾರೆ. ಮೃತರಲ್ಲಿ 12 ವರ್ಷದ ಬಾಲಕಿಯೂ ಸೇರಿದ್ದಾಳೆ. ಬ್ರೆಜಿಲ್‌ನ ಮಾಟೊ ಗ್ರಾಸೊ ಪ್ರಾಂತ್ಯದ ಸಿನೊಪ್ ನಗರದಲ್ಲಿ ಈ ಘಟನೆ ನಡೆದಿದೆ.
ಮಂಗಳವಾರ ಪೂಲ್ ಹಾಲ್‌ನಲ್ಲಿ ಇಬ್ಬರು ದಾಳಿಕೋರರು ಸತತ ಎರಡು ಪಂದ್ಯಗಳಲ್ಲಿ ಸೋತಿದ್ದಾರೆ. ಅಲ್ಲಿ ನಿಂತಿದ್ದ ಕೆಲವರು ಇವರನ್ನು ನೋಡಿ ನಕ್ಕಿದ್ದಾರೆ ಅಥವಾ ಸಂತೋಷಪಟ್ಟಿದ್ದಾರೆ. ಇದರಿಂದ ಕೋಪಗೊಂಡ ಅವರು ಬಂದೂಕಿನಿಂದ ಜನರ ಮೇಲೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ 12 ವರ್ಷದ ಬಾಲಕಿ ಸೇರಿದಂತೆ ಏಳು ಜನರು ಸಾವನ್ನಪ್ಪಿದ್ದಾರೆ. ಆಘಾತಕಾರಿ ಸಿಸಿಟಿವಿ ದೃಶ್ಯಾವಳಿಗಳು ಹೊರಬಂದಿದ್ದು, ಬಂದೂಕುಧಾರಿಯೊಬ್ಬ ಜನರನ್ನು ಮೇಲೆ ಗುಂಡಿನ ದಾಳಿ ನಡೆಸಿರುವುದು ತೋರಿಸುತ್ತದೆ. ಇನ್ನೊಬ್ಬ ವ್ಯಕ್ತಿ ಪಿಕಪ್ ವಾಹನದಿಂದ ಶಾಟ್‌ಗನ್ ಅನ್ನು ಹೊರ ತಂದು ಗುಂಡಿನ ದಾಳಿ ನಡೆಸುತ್ತಾನೆ. ಕೆಲವೇ ಸೆಕೆಂಡುಗಳಲ್ಲಿ ಪೂಲ್ ಆಟವನ್ನು ಆನಂದಿಸುತ್ತಿದ್ದವರೆಲ್ಲರೂ ಸಾವನ್ನಪ್ಪಿ ನೆಲದ ಮೇಲೆ ಮಲಗಿದ್ದರು.
ಇದಾದ ಬಳಿಕ ಇಬ್ಬರೂ ಬಂದೂಕುಧಾರಿಗಳು ಅಲ್ಲಿಂದ ಓಡಿ ಹೋಗಿದ್ದಾರೆ. ಈ ಸಂದರ್ಭದಲ್ಲಿ, ಅವರು ಪೂಲ್ ಟೇಬಲ್ ಮೇಲೆ ಬಿದ್ದಿದ್ದ ಸ್ವಲ್ಪ ಹಣವನ್ನು ಎತ್ತಿಕೊಂಡು ಹೋಗುತ್ತಿರುವುದು ಮತ್ತು ಮಹಿಳೆಯೊಬ್ಬರ ಪರ್ಸ್ ಅನ್ನು ಸಹ ಕಳ್ಳತನ ಮಾಡುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ದಾಳಿಕೋರರನ್ನು ಎಡ್ಗರ್ ರಿಕಾರ್ಡೊ ಡಿ ಒಲಿವೇರಾ (30) ಮತ್ತು ಎಜೆಕ್ವಿಯಾಸ್ ಸೌಜಾ ರಿಬೇರೊ (27) ಎಂದು ಗುರುತಿಸಲಾಗಿದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ಇಡೀ ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಂಗಳವಾರ ಬೆಳಗ್ಗೆ ಸಿವಿಲ್ ಪೋಲೀಸ್ನ ಪ್ರತಿನಿಧಿ ಬ್ರೌಲಿಯೊ ಜುನ್ಕ್ವೇರಾ ಅವರು ಆರೋಪಿ ಒಲಿವೇರಾ ಜೊತೆ ಪೂಲ್ ಗೇಮ್ ಆಡಿದರು. ಈ ವೇಳೆ, ಆರೋಪಿ ಒಲಿವೇರಾ ಸುಮಾರು 4,000 ರಾಯಗಳನ್ನು (ಬ್ರೆಜಿಲ್ ಕರೆನ್ಸ್) ಕಳೆದುಕೊಂಡಿದ್ದಾರೆ. ಮಧ್ಯಾಹ್ನದ ನಂತರ ಮತ್ತೊಬ್ಬ ಆರೋಪಿಯೊಂದಿಗೆ ವಾಪಸಾದ ಒಲಿವೇರಾ ಎರಡನೇ ಬಾರಿಗೆ ಆಟವಾಡುವಂತೆ ಆ ವ್ಯಕ್ತಿಗೆ ಸವಾಲು ಹಾಕಿದರು. ಪೂಲ್ ಆಟದಲ್ಲಿ ಒಲಿವೇರಾ ಮತ್ತು ಆತನ ಸ್ನೇಹಿತ ರಿಬೇರೊ ಮತ್ತೆ ಸೋಲನ್ನಪ್ಪಿದ್ದರು. ಈ ವೇಳೆ, ಆಟ ನೋಡುತ್ತಿದ್ದ ಕೆಲವರು ಇವರನ್ನು ನೋಡಿ ಹರ್ಷ ವ್ಯಕ್ತಪಡಿಸಿದ್ದಾರೆ.
ಇದರಿಂದ ಸ್ನೇಹಿತರಿಬ್ಬರು ಕೋಪಗೊಂಡಿದ್ದಾರೆ. ರಿಬೇರೊ ಅಲ್ಲಿದ್ದ ಜನರನ್ನು ಬಂದೂಕಿನಿಂದ ಬೆದರಿಸಿ ಸಾಲಾಗಿ ನಿಲ್ಲಿಸಿದಾಗ, ಒಲಿವೇರಾ ಬಂದೂಕಿನಿಂದ ಅವರ ಮೇಲೆ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ. ಈ ಘಟನೆಯಲ್ಲಿ ಪೂಲ್ ಮಾಲೀಕ ಮತ್ತು 12 ವರ್ಷದ ಬಾಲಕಿ ಸೇರಿದಂತೆ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದ್ದಾರೆ. ಪೊಲೀಸ್ ದಾಖಲೆಗಳ ಪ್ರಕಾರ, ಒಲಿವೇರಾ ಈ ಹಿಂದೆ ಕೌಟುಂಬಿಕ ಹಿಂಸಾಚಾರದ ಆರೋಪದ ಮೇಲೆ ಬಂಧಿಸಲಾಗಿತ್ತು.
ಓದಿ: ಇಂಡೋನೇಷ್ಯಾದಲ್ಲಿ ಕಂಪಿಸಿದ ಭೂಮಿ; ಟರ್ಕಿಯಲ್ಲಿ ಮೃತರ ಸಂಖ್ಯೆ 47 ಸಾವಿರಕ್ಕೇರಿಕೆ