ಕೊಲಂಬೊ: ಶ್ರೀಲಂಕಾದ ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಮಾಲ್ಡೀವ್ಸ್‌ಗೆ ಹಾರಿರುವ ಅಧ್ಯಕ್ಷ ಗೊಟಬಯ ರಾಜಪಕ್ಸ ಇದೀಗ ಸಿಂಗಾಪುರಕ್ಕೆ ತೆರಳಲು ತಯಾರಿ ನಡೆಸುತ್ತಿದ್ದಾರೆ. ದೇಶಾದ್ಯಂತ ನಿನ್ನೆಯಿಂದ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಪಶ್ಚಿಮ ಪ್ರಾಂತ್ಯದಲ್ಲಿ ಕರ್ಫ್ಯೂ ವಿಧಿಸಲಾಗಿದೆ.
ಇನ್ನೊಂದೆಡೆ, ಮಾಲ್ಡೀವ್ಸ್‌ನ ಮಾಲೆಯಿಂದ ಈಗಾಗಲೇ ಗೊಟಬಯ ರಾಜಪಕ್ಸ ಕುಟುಂಬ ಸಿಂಗಾಪುರಕ್ಕೆ ಪ್ರಯಾಣ ಬೆಳೆಸಬೇಕಿತ್ತು. ಪತ್ನಿ ಐಯೋಮಾ ರಾಜಪಕ್ಸ ಮತ್ತು ಇಬ್ಬರು ಭದ್ರತಾ ಅಧಿಕಾರಿಗಳು ನಿನ್ನೆ ರಾತ್ರಿ ಸಿಂಗಾಪುರಕ್ಕೆ SQ437 ವಿಮಾನದಲ್ಲಿ ತೆರಳುವ ನಿರೀಕ್ಷೆಯಿತ್ತು. ಆದರೆ ಭದ್ರತಾ ಸಮಸ್ಯೆಗಳಿಂದಾಗಿ ವಿಮಾನವೇರಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಮತ್ತೆ ಭುಗಿಲೆದ್ದ ಪ್ರತಿಭಟನೆ: ತುರ್ತು ಪರಿಸ್ಥಿತಿ ಘೋಷಿಸಿದ ಹಂಗಾಮಿ ಅಧ್ಯಕ್ಷ ವಿಕ್ರಮಸಿಂಘೆ
ಹೀಗಾಗಿ, ಇಕ್ಕಟ್ಟಿಗೆ ಸಿಲುಕಿರುವ ಅಧ್ಯಕ್ಷರಿಗೆ ಖಾಸಗಿ ವಿಮಾನ ವ್ಯವಸ್ಥೆ ಮಾಡುವ ಕುರಿತು ಪ್ರಸ್ತುತ ಮಾತುಕತೆಗಳು ನಡೆಯುತ್ತಿವೆ. ಬುಧವಾರ ಶ್ರೀಲಂಕಾ ರಕ್ಷಣಾ ಸಚಿವಾಲಯದ ಸಂಪೂರ್ಣ ಅನುಮೋದನೆಯ ನಂತರ ಜುಲೈ 13 ರಂದು ಬೆಳಗ್ಗೆ ವಾಯುಪಡೆಯ ವಿಮಾನದ ಮೂಲಕ ಗೊಟಬಯ ಕುಟುಂಬಸಮೇತ ಮಾಲ್ಡೀವ್ಸ್‌ಗೆ ಬಂದಿಳಿದಿದ್ದರು.