ಬರ್ಲಿನ್(ಜರ್ಮನಿ): ದಕ್ಷಿಣ ಜರ್ಮನಿಯ ವಸ್ತು ಸಂಗ್ರಾಲಯದಲ್ಲಿ ಕಳ್ಳರು ಒಂಬತ್ತು ನಿಮಿಷದಲ್ಲಿ ನೂರಾರು ಪುರಾತನ ಚಿನ್ನದ ನಾಣ್ಯಗಳನ್ನು ದೋಚಿ ಸಿನಿಮೀಯಾ ರೀತಿಯಲ್ಲಿ ಪರಾರಿಯಾಗಿದ್ದಾರೆ.
ಕಳ್ಳರು ಬರೊಬ್ಬರಿ 483 ಪುರಾತನ ಚಿನ್ನದ ನಾಣ್ಯಗಳನ್ನು ಬಹಳ ವ್ಯವಸ್ಥಿತವಾಗಿ ಲೂಟಿ ಮಾಡಿದ್ದಾರೆ. 1999ರಲ್ಲಿ ಮಂಚಿಂಗ್ ಪಟ್ಟಣದ ಬಳಿ ಉತ್ಖನನ ಮಾಡುವ ಸಂದರ್ಭದಲ್ಲಿ ಈ ಪುರಾತನ ಕಾಲದ ಚಿನ್ನದ ನಾಣ್ಯಗಳು ದೊರೆತ್ತಿದ್ದವು. ನಾಣ್ಯಗಳನ್ನು ವಸ್ತುಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇರಿಸಲಾಗಿತ್ತು.
ಆದರೆ, ಚಿನ್ನದ ನಾಣ್ಯಗಳನ್ನು ಕಳ್ಳರು ಕೇವಲ 9ನಿಮಿಷಲ್ಲಿ ಕದ್ದು ಮಾಯವಾಗಿದ್ದಾರೆ. ಪೊಲೀಸರು ಕಳ್ಳರ ಬೇಟೆಗಾಗಿ ಹುಡುಕಾಟ ಆರಂಭಿಸಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಳ್ಳರನ್ನು ಹುಡುಕಲು ಪ್ರಯತ್ನಿಸುತ್ತಿದ್ದಾರೆ.
ಪೊಲೀಸ್ ತನಿಖೆಯ ಪ್ರಕಾರ ರಾತ್ರಿ 1:26ಕ್ಕೆ ಬಾಗಿಲು ತೆಗದಿರುವುದು ದಾಖಲಾಗಿದೆ. ಸರಿಯಾಗಿ ಒಂಬತ್ತು ನಿಮಿಷದ ನಂತರ 1:36ಕ್ಕೆ ಮತ್ತೆ ಸಂಗ್ರಾಲಯದ ಬಾಗಿಲು ಮುಚ್ಚಿದೆ ಎಂದು ಭದ್ರತಾ ಕೊಠಡಿಯಲ್ಲಿ ದಾಖಲಾಗಿದೆ. ಮ್ಯೂಜಿಯಂನಿಂದ ಸರಿಯಾಗಿ ಒಂದು ಕಿಲೋಮೀಟರ್ ದೂರದಲ್ಲಿ ಕೇಬಲ್ ತುಂಡಾಗಿ ಬಿದಿದ್ದು, ಕಳ್ಳರು ನಾಣ್ಯಗಳನ್ನು ಕದಿಯಲು ಸಾಕಷ್ಟು ಪೂರ್ವಭಾವಿ ಸಿದ್ದತೆ ನಡೆಸಿದ್ದಾರೆ ಎಂದು ಬರ್ಲಿನ್ನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಇದೇ ರೀತಿ ಬರ್ಲಿನ್ ಇನ್ನೊಂದು ಭಾಗದಲ್ಲಿ ಆಭರಣ ಕಳ್ಳತನವಾಗಿದ್ದು, ಈ ಎರಡೂ ದರೋಡೆಗೂ ಲಿಂಕ್ ಇರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಖದೀಮರಿಗಾಗಿ ಬಲೆ ಬೀಸಿದ್ದಾರೆ.
ಭದ್ರತಾ ಲೋಪ: ವಸ್ತುಸಂಗ್ರಾಲಯದಲ್ಲಿ ಕಾವಲುಗಾರರು ಇರಲಿಲ್ಲ ಮತ್ತು ಭದ್ರತಾ ಅಲಾರಂಗಳು ಸಹ ಕೆಲಸ ಮಾಡುತ್ತರಿಲಿಲ್ಲ ಎನ್ನಲಾಗಿದೆ. ಸಂಗ್ರಾಲಯದ ಬವೇರಿಯನ್ ರಾಜ್ಯ ಪುರಾತತ್ವ ಸಂಗ್ರಹಣೆಯ ಮುಖ್ಯಸ್ಥ ರೂಪರ್ಟ್ ಗೆಭಾರ್ಡ್ ಈ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಚಿನ್ನದ ನಾಣ್ಯಗಳು ಸುಮಾರು ಕ್ರಿಸ್ತ ಪೂರ್ವ 100ರಷ್ಟು ಹಿಂದಿನದಾಗಿದ್ದು, ಸರಿಸುಮಾರು 1.6ಮಿಲಿಯನ್ ಯುರೋಗಳಷ್ಟು ಬೆಲೆ ಬಾಳುತ್ತದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಇದನ್ನೂ ಓದಿ: ಸಪ್ತ ಸಾಗರದಾಚೆ ಕನ್ನಡ ಡಿಂಡಿಮ: ಜರ್ಮನಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ