ಟೆಲ್ ಅವಿವ್ (ಇಸ್ರೇಲ್) : ಇಸ್ರೇಲ್ ಮತ್ತು ಹಮಾಸ್ ಮಧ್ಯೆ ನಡೆಯುತ್ತಿರುವ ಯುದ್ಧ ಹಲವು ಭೀಕರತೆಗಳನ್ನು ಸೃಷ್ಟಿಸುತ್ತಿದೆ. ಹಮಾಸ್ ಉಗ್ರರ ಬಳಿ ವಶದಲ್ಲಿರುವವರ ಪೈಕಿ ಜರ್ಮನ್- ಇಸ್ರೇಲ್ ಮೂಲದ ಯುವತಿ ಸಾವಿಗೀಡಾಗಿದ್ದಾಳೆ. ಇದು ಜರ್ಮನ್ ಆಕ್ರೋಶಕ್ಕೆ ಕಾರಣವಾಗಿದ್ದರೆ, ಇಸ್ರೇಲ್ ದಾಳಿಯಿಂದ ಗಾಜಾದಲ್ಲಿ 3400 ಕ್ಕೂ ಅಧಿಕ ಮಕ್ಕಳು ಬಲಿಯಾಗಿದ್ದಾರೆ ಎಂಬ ಭಯಾನಕ ಅಂಶ ಹೊರಬಿದ್ದಿದೆ.
23 ದಿನಗಳ ಯುದ್ಧದಲ್ಲಿ ಇಸ್ರೇಲ್ ದಾಳಿಗೆ ಗಾಜಾ ಪಟ್ಟಿ ಛಿದ್ರವಾಗುತ್ತಿದೆ. ವಾಯು ದಾಳಿಯ ಜೊತೆಗೆ ಈಗ ನೆಲದ ದಾಳಿಯೂ ಆರಂಭವಾಗಿದ್ದು, ಸಾವಿನ ಸಂಖ್ಯೆ ಏರುತ್ತಲೇ ಇದೆ. ಇದೆಲ್ಲದರ ಮಧ್ಯೆ ಎದೆ ನಡುಗಿಸುವ ವಿಷಯವೆಂದರೆ, ಬಾಂಬ್ ದಾಳಿಗಳಿಗೆ ಸಾವಿರಾರು ಮಕ್ಕಳು ಬಲಿಯಾಗಿದ್ದು. ವಿಶ್ವಸಂಸ್ಥೆಯ ಯುನಿಸೆಫ್ ಪ್ರಕಾರ, ಯುದ್ಧದಲ್ಲಿ 8,300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಶೇ. 66 ರಷ್ಟು ಮಹಿಳೆಯರು ಮತ್ತು ಮಕ್ಕಳು ಇದ್ದಾರೆ. ಸಾವಿರಾರು ಜನರು ಗಾಯಗೊಂಡಿದ್ದಾರೆ.
ಗಾಜಾದ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿಅಂಶಗಳಂತೆ, 3,400 ಕ್ಕೂ ಹೆಚ್ಚು ಮಕ್ಕಳು ಇಸ್ರೇಲ್ ದಾಳಿಗೆ ಪ್ರಾಣ ಕಳೆದುಕೊಂಡಿದ್ದಾರೆ. 6,300 ಕ್ಕೂ ಹೆಚ್ಚು ಗಾಯಗೊಂಡಿದ್ದಾರೆ. ಇದರರ್ಥ ಗಾಜಾದಲ್ಲಿ ಪ್ರತಿದಿನ 420 ಕ್ಕೂ ಹೆಚ್ಚು ಮಕ್ಕಳು ಸಾಯುತ್ತಿದ್ದಾರೆ ಅಥವಾ ಗಾಯಕ್ಕೀಡಾಗುತ್ತಿದ್ದಾರೆ. ಇದು ನಿಜಕ್ಕೂ ಆತಂಕದ ವಿಚಾರವಾಗಿದೆ ಎಂದಿದೆ. 2019 ರಿಂದ ವಿಶ್ವದ ಹಲವೆಡೆ ನಡೆಯುವ ಸಂಘರ್ಷಗಳಲ್ಲಿ ವಾರ್ಷಿಕವಾಗಿ ಸಾವಿಗೀಡಾದ ಮಕ್ಕಳ ಸಂಖ್ಯೆಯನ್ನು ಇದು ಮೀರಿಸುತ್ತಿದೆ.
ಒತ್ತೆಯಾಳು ಜರ್ಮನ್ ಮಹಿಳೆ ಸಾವು: ಅಕ್ಟೋಬರ್ 7 ರ ದಾಳಿಯಲ್ಲಿ ಗಾಜಾದಲ್ಲಿ ಹಮಾಸ್ ಒತ್ತೆಯಾಳಾಗಿ ಸಿಕ್ಕಿಬಿದ್ದಿದ್ದ ಜರ್ಮನ್- ಇಸ್ರೇಲಿ ಯುವತಿ 23 ವರ್ಷದ ಶಾನಿ ಲೌಕ್ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಸೋಮವಾರ ದೃಢಪಡಿಸಿದ್ದಾಗಿ ವರದಿಯಾಗಿದೆ. ಹಮಾಸ್ ಭಯೋತ್ಪಾದಕರು ಸುಮಾರು 260 ಜನರನ್ನು ಕೊಂದಾಗ ಗಾಜಾ ಗಡಿಯ ಸಮೀಪದಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಲೌಕ್ ಭಾಗವಹಿಸಿದ್ದರು. ದುರದೃಷ್ಟವಶಾತ್ ನನ್ನ ಮಗಳು ಜೀವಂತವಾಗಿಲ್ಲ ಎಂಬ ಸುದ್ದಿ ಬಂದಿದೆ ಎಂದು ಲೌಕ್ ಅವರ ತಾಯಿ ರಿಕಾರ್ಡಾ ಜರ್ಮನ್ ಔಟ್ಲೆಟ್ ಆರ್ಟಿಎಲ್ಗೆ ತಿಳಿಸಿದ್ದಾರೆ.
ಜರ್ಮನ್ ಚಾನ್ಸಲರ್ ಕ್ರೋಧ: ಲೌಕ್ ಸಾವಿನ ಸುದ್ದಿಯ ನಂತರ, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್ ಆಕ್ರೋಶ ವ್ಯಕ್ತಪಡಿಸಿದ್ದು, ಯುದ್ಧವು ಭಯೋತ್ಪಾದನೆಯ ವಿರುದ್ಧ ಮತ್ತು ಇಸ್ರೇಲ್ ತನ್ನನ್ನು ತಾನು ರಕ್ಷಿಸಿಕೊಳ್ಳುವ ಹಕ್ಕನ್ನು ಹೊಂದಿದೆ ಎಂದು ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಶಾನಿ ಲೌಕ್ ಸಾವಿನ ಸುದ್ದಿ ಭಯಾನಕವಾದದು. ಅವರು ಇತರರಂತೆ ಕ್ರೂರವಾಗಿ ಕೊಲ್ಲಲ್ಪಟ್ಟಿದ್ದಾಳೆ. ಇದು ಹಮಾಸ್ ದಾಳಿಯ ಬರ್ಬರತೆಯನ್ನು ತೋರಿಸುತ್ತದೆ. ಇದನ್ನು ಮಟ್ಟ ಹಾಕಲೇಬೇಕು ಎಂದಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಶಾನಿ ಲೌಕ್ ಮೃತದೇಹವಿದೆ. ಆಕೆಯ ನಿಸ್ತೇಜವಾಗಿ ವಾಹನದ ಹಿಂಭಾಗ ಬಿದ್ದಿರುವುದು ಕಾಣಬಹುದು. ಇದನ್ನು ಅವರ ಕುಟುಂಬಸ್ಥರು ಗುರುತಿಸಿದ್ದಾರೆ. ಆಕೆಯ ತಲೆಕೂದಲು ಮತ್ತು ಹಚ್ಚೆಗಳಿಂದಾಗಿ ಆಕೆ ತಮ್ಮ ಮಗಳು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಒತ್ತೆಯಾಳಾಗಿದ್ದ ಯೋಧೆಯನ್ನು ರಕ್ಷಿಸಿದ ಇಸ್ರೇಲ್ ಸೇನೆ: ಕದನ ವಿರಾಮ ತಿರಸ್ಕರಿಸಿದ ಪ್ರಧಾನಿ ನೆತನ್ಯಾಹು