ಜೆರುಸಲೇಂ: ಹಮಾಸ್ ನಿರಂತರವಾಗಿ ಪ್ರತಿದಿನ 10 ಜೀವಂತ ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ ಆ ದಿನ ಕದನ ವಿರಾಮ ವಿಸ್ತರಣೆಯಾಗಲಿದೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಹಿರಿಯ ಸಲಹೆಗಾರ ಮಾರ್ಕ್ ರೆಗೆವ್ ಗುರುವಾರ ಹೇಳಿದ್ದಾರೆ. ಏಳನೇ ದಿನಕ್ಕೆ ಕದನ ವಿರಾಮ ವಿಸ್ತರಿಸಲು ಮಾತುಕತೆಗಳು ನಡೆಯುತ್ತಿರುವ ಮಧ್ಯೆ ಇಸ್ರೇಲ್ನ ಹಿರಿಯ ಅಧಿಕಾರಿಯ ಹೇಳಿಕೆ ಮಹತ್ವ ಪಡೆದುಕೊಂಡಿದೆ. ಈಗ ಜಾರಿಯಲ್ಲಿರುವ ಕದನ ವಿರಾಮವು ಬೆಳಿಗ್ಗೆ 7 ಗಂಟೆಗೆ (ಸ್ಥಳೀಯ ಸಮಯ) ಮುಕ್ತಾಯಗೊಳ್ಳುವ ಕೆಲವೇ ನಿಮಿಷಗಳ ಮೊದಲು ಈ ಪ್ರಕಟಣೆ ಹೊರಬಿದ್ದಿದೆ. ಗುರುವಾರದ ವಿಸ್ತರಣೆಯು ನವೆಂಬರ್ 24 ರಂದು ಪ್ರಾರಂಭವಾದ ಆರಂಭಿಕ ನಾಲ್ಕು ದಿನಗಳ ಕದನ ವಿರಾಮದ ಎರಡನೇ ವಿಸ್ತರಣೆಯಾಗಿದೆ.
"ಕದನ ವಿರಾಮದ ಬಗ್ಗೆ ಇಸ್ರೇಲ್ನ ನಿಲುವು ತುಂಬಾ ಸ್ಪಷ್ಟವಾಗಿದೆ. ಪ್ರತಿದಿನ 10 ಜೀವಂತ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡುವುದನ್ನು ಮುಂದುವರೆಸಿದರೆ ಕದನ ವಿರಾಮ ಮುಂದುವರಿಯುತ್ತ ಸಾಗುತ್ತದೆ" ಎಂದು ರೆಗೆವ್ ಸಿಎನ್ಎನ್ಗೆ ತಿಳಿಸಿದರು. ಮುಂದಿನ 24 ಗಂಟೆಗಳಲ್ಲಿ ಹೋರಾಟ ಪುನರಾರಂಭಗೊಳ್ಳುತ್ತದೆಯೇ ಎಂಬ ಪ್ರಶ್ನೆಗೆ, "10 ಇಸ್ರೇಲಿಗಳನ್ನು ಬಿಡುಗಡೆ ಮಾಡುವ ಷರತ್ತು ಪೂರೈಸಲು ಹಮಾಸ್ ವಿಫಲವಾದರೆ ಖಂಡಿತವಾಗಿಯೂ ಹೋರಾಟ ಪುನಾರಂಭವಾಗುತ್ತದೆ" ಎಂದು ಹೇಳಿದರು. ರೆಗೆವ್ ಪ್ರಕಾರ, ಗಾಝಾದೊಳಗೆ ಇನ್ನೂ ಕನಿಷ್ಠ 140 ಒತ್ತೆಯಾಳುಗಳು ಇದ್ದಾರೆ.
"ನಮ್ಮ ಒತ್ತೆಯಾಳುಗಳನ್ನು ಮರಳಿ ಪಡೆಯಲು ಪ್ರತಿದಿನ ಒಂದು ದಿನ ವಿಸ್ತರಿಸಬಹುದಾದ ಮಾನವೀಯ ವಿರಾಮದ ಪ್ರಸ್ತುತ ಒಪ್ಪಂದವನ್ನು ಇಸ್ರೇಲ್ ಒಪ್ಪಿಕೊಂಡಿದೆ. ಇದು ಹೋರಾಟದ ಮಧ್ಯೆ ಮಾನವೀಯ ಕದನ ವಿರಾಮವಾಗಿದೆ. ಆದರೆ ಪ್ಯಾಲೆಸ್ಟೈನ್ನ ಮೇಲಿನ ಹಮಾಸ್ ನಿಯಂತ್ರಣವನ್ನು ಸಂಪೂರ್ಣವಾಗಿ ತೊಡೆದು ಹಾಕಲು ಮತ್ತು ಅದರ ಮಿಲಿಟರಿ ವ್ಯವಸ್ಥೆಯನ್ನು ನಾಶ ಮಾಡುವ ನಮ್ಮ ನಿರ್ಧಾರಕ್ಕೆ ಬದ್ಧರಾಗಿದ್ದೇವೆ" ಎಂದು ಅವರು ಹೇಳಿದರು.
ಏತನ್ಮಧ್ಯೆ, ಹಮಾಸ್ ಸೆರೆಯಿಂದ ಬಿಡುಗಡೆಯಾಗಲಿರುವ ಒತ್ತೆಯಾಳುಗಳ ಹೊಸ ಪಟ್ಟಿಯು ಗುರುವಾರ ತನಗೆ ತಲುಪಿದೆ. ಹೀಗಾಗಿ ಕದನ ವಿರಾಮ ಮುಂದುವರಿಯಲಿದೆ ಎಂದು ಇಸ್ರೇಲ್ ಪ್ರಧಾನಿ ಕಚೇರಿ ದೃಢಪಡಿಸಿದೆ. ಕದನ ವಿರಾಮ ಆರಂಭವಾದಾಗಿನಿಂದ 210 ಪ್ಯಾಲೆಸ್ಟೈನಿಯರು, 70 ಇಸ್ರೇಲಿಗಳು ಮತ್ತು 24 ವಿದೇಶಿ ಪ್ರಜೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವರದಿಯಾಗಿದೆ. ಕದನ ವಿರಾಮದ ಆರನೇ ದಿನವಾದ ಬುಧವಾರ ಗಾಝಾದಿಂದ 16 ಒತ್ತೆಯಾಳುಗಳನ್ನು ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ 10 ಇಸ್ರೇಲಿಗಳು, ನಾಲ್ವರು ಥಾಯ್ ಪ್ರಜೆಗಳು ಮತ್ತು ಇಬ್ಬರು ಇಸ್ರೇಲಿ-ರಷ್ಯನ್ನರು ಸೇರಿದ್ದಾರೆ. ಅದೇ ದಿನ 30 ಪ್ಯಾಲೆಸ್ಟೈನಿಯರನ್ನು ಇಸ್ರೇಲಿ ಜೈಲುಗಳಿಂದ ಬಿಡುಗಡೆ ಮಾಡಲಾಯಿತು.
ಇದನ್ನೂ ಓದಿ: ಕದನ ವಿರಾಮ ವಿಸ್ತರಣೆಗೆ ಯತ್ನ; ಇಸ್ರೇಲ್ಗೆ ಆಗಮಿಸಿದ ಯುಎಸ್ ವಿದೇಶಾಂಗ ಕಾರ್ಯದರ್ಶಿ ಬ್ಲಿಂಕೆನ್