ವಿಶ್ವಸಂಸ್ಥೆ: 193 ಸದಸ್ಯರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು (United Nations General Assembly) ಡಿಸೆಂಬರ್ 12 ರ ಮಂಗಳವಾರ ಗಾಜಾ ಕುರಿತು ವಿಶೇಷ ಅಧಿವೇಶನ ನಡೆಸುವುದಾಗಿ ಘೋಷಿಸಿದೆ ಎಂದು ವಿಶ್ವಸಂಸ್ಥೆ ಸಾಮಾನ್ಯಸಭೆ ಅಧ್ಯಕ್ಷರು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
"ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಅವರು 2023 ರ ಡಿಸೆಂಬರ್ 12 ರ ಮಂಗಳವಾರ ಸಾಮಾನ್ಯ ಸಭೆಯ ಹತ್ತನೇ ತುರ್ತು ವಿಶೇಷ ಅಧಿವೇಶನದ 45 ನೇ ಪೂರ್ಣ ಸಭೆಯನ್ನು ಕರೆಯುವುದಾಗಿ ಸದಸ್ಯ ರಾಷ್ಟ್ರಗಳಿಗೆ ಮಾಹಿತಿ ನೀಡಿದ್ದಾರೆ" ಎಂದು ಸಾಮಾನ್ಯ ಸಭೆಯ ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಅವರ ಕಚೇರಿಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಈಜಿಪ್ಟ್ ಮತ್ತು ಮೌರಿಟಾನಿಯಾ ದೇಶಗಳು ಅಧ್ಯಕ್ಷ ಫ್ರಾನ್ಸಿಸ್ ಅವರಿಗೆ ಪತ್ರ ಬರೆದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯ 377 ಅನ್ನು ಉಲ್ಲೇಖಿಸಿ ತುರ್ತು ಸಭೆ ನಡೆಸುವಂತೆ ಔಪಚಾರಿಕವಾಗಿ ವಿನಂತಿಸಿದ್ದವು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಗಾಜಾ ಕದನ ವಿರಾಮ ನಿರ್ಣಯವನ್ನು ಭದ್ರತಾ ಮಂಡಳಿಯ ಖಾಯಂ ಸದಸ್ಯನಾಗಿರುವ ಅಮೆರಿಕ ವೀಟೊ ಮಾಡಿದ ನಂತರ ಮತ್ತೆ ತುರ್ತಾಗಿ ಸಭೆ ಸೇರುವುದು ಅಗತ್ಯವಾಗಿದೆ ಎಂದು ಪತ್ರದಲ್ಲಿ ಒತ್ತಿ ಹೇಳಲಾಗಿದೆ.
ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಿಕೊಳ್ಳುವ ತನ್ನ ಪ್ರಾಥಮಿಕ ಜವಾಬ್ದಾರಿಯನ್ನು ನಿರ್ವಹಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ವಿಫಲವಾದ ಸಂದರ್ಭದಲ್ಲಿ ಕ್ರಮ ತೆಗೆದುಕೊಳ್ಳಲು ನಿರ್ಣಯ 377 ವಿಶ್ವಸಂಸ್ಥೆಗೆ ಅವಕಾಶ ನೀಡುತ್ತದೆ. ಈ ನಿರ್ಣಯವನ್ನು ಮೊಟ್ಟ ಮೊದಲಿಗೆ 1950 ರಲ್ಲಿ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಅಂಗೀಕರಿಸಿತ್ತು. ಗಾಜಾದಲ್ಲಿ ತಕ್ಷಣದ ಮಾನವೀಯ ಕದನ ವಿರಾಮಕ್ಕಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಬೇಡಿಕೆಯನ್ನು ಅಮೆರಿಕ ಶುಕ್ರವಾರ ವೀಟೋ ಮಾಡಿದ ನಂತರ ನಿರ್ಣಯ 377ರ ಅಡಿ ಈ ಕ್ರಮ ಕೈಗೊಳ್ಳಲಾಗಿದೆ.
ಅಕ್ಟೋಬರ್ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಗಾಜಾದಲ್ಲಿ ತಕ್ಷಣವೇ ಮಾನವೀಯ ಕದನ ವಿರಾಮ ಘೋಷಿಸಬೇಕೆಂದು ಕರೆ ನೀಡುವ ನಿರ್ಣಯ ಅಂಗೀಕರಿಸಲಾಗಿತ್ತು. ನಿರ್ಣಯದ ಪರವಾಗಿ 121 ಮತ, ವಿರುದ್ಧ 14 ಮತ ಬಂದಿದ್ದವು. 44 ರಾಷ್ಟ್ರಗಳು ಗೈರುಹಾಜರಾಗಿದ್ದವು. ಆದರೆ ಇದರ ನಂತರ ನಡೆದ ಸಾಮಾನ್ಯ ಸಭೆಯ ಕದನ ವಿರಾಮಕ್ಕೆ ಕರೆ ನೀಡುವ ನಿರ್ಣಯವನ್ನು ವೀಟೊ ಚಲಾಯಿಸುವ ಮೂಲಕ ಅಮೆರಿಕ ತಡೆಹಿಡಿದಿತ್ತು. ಅಮೆರಿಕದ ಈ ಕ್ರಮಕ್ಕೆ ವಿಶ್ವದ ಹಲವಾರು ರಾಷ್ಟ್ರಗಳು ಅಸಮಾಧಾನ ವ್ಯಕ್ತಪಡಿಸಿವೆ.
ಇದನ್ನೂ ಓದಿ : ಹಮಾಸ್ ನಾಯಕ ಸಿನ್ವರ್ ಗಾಝಾದಲ್ಲಿ ಯಾರಿಗೂ ಇಷ್ಟವಾಗದ ವ್ಯಕ್ತಿ; ಮಾಜಿ ಸಚಿವರ ಹೇಳಿಕೆ