ಮುಂಬೈ: ಗುಜರಾತ್‌ನ ರಾಜ್‌ಪಿಪ್ಲಾದ, ಭಾರತದ ಮೊದಲ ಸಲಿಂಗಕಾಮಿ ಪ್ರಿನ್ಸ್ ಮಾನವೇಂದ್ರ ಸಿಂಗ್ ಗೋಹಿಲ್ ಅವರು ಜುಲೈ 6, 2022 ರಂದು ಓಹಿಯೋದ ಕೊಲಂಬಸ್‌ನಲ್ಲಿರುವ ಚರ್ಚ್‌ನಲ್ಲಿ ಡಿ ಆಂಡ್ರೆ ರಿಚರ್ಡ್‌ಸನ್ ಅವರನ್ನು ವಿವಾಹವಾಗಿದ್ದಾರೆ. ಡಿ ಆಂಡ್ರೆ ರಿಚರ್ಡ್‌ಸನ್ ತಮ್ಮ ಫೇಸ್‌ಬುಕ್‌ನಲ್ಲಿ ಈ ಮಾಹಿತಿ ನೀಡಿದ್ದಾರೆ.
ಪ್ರಿನ್ಸ್ ಮಾನವೇಂದ್ರ ಸಿಂಗ್ ಮತ್ತು ಡಿ ಆಂಡ್ರೆ ರಿಚರ್ಡ್ಸನ್ ಅವರು ಹಲವು ವರ್ಷಗಳಿಂದ ಒಟ್ಟಿಗೆ ವಾಸಿಸುತ್ತಿದ್ದಾರೆ ಮತ್ತು ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರೂ ತಮ್ಮ ಮದುವೆಯ ಬಗ್ಗೆ ಈಗಾಗಲೇ ಅನೇಕ ಬಾರಿ ಪರಸ್ಪರ ಮಾತನಾಡಿದ್ದರಂತೆ. ಆದರೆ, ಮದುವೆಯಾಗುವ ಬಗ್ಗೆ ಸಾರ್ವಜನಿಕವಾಗಿ ಮಾತ್ರ ಎಂದೂ ಮಾತನಾಡಿಲ್ಲ.
ಆದರೆ, ಪ್ರಸ್ತುತ ಡಿ ಆಂಡ್ರೆ ರಿಚರ್ಡ್ಸನ್ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮದಲ್ಲಿ ಮಾತನಾಡುತ್ತಿದ್ದಾರೆ. ಈಗ ಕಾಣಿಸಿಕೊಂಡಿರುವ ಫೋಟೊ ಮತ್ತು ಮದುವೆ ನೋಂದಣಿ ಪ್ರಮಾಣಪತ್ರವು ಅವರ ಮದುವೆಯಾಗಿದ್ದಕ್ಕೆ ಪುರಾವೆಯಾಗಿದೆ.
ಸಲಿಂಗಕಾಮಿ ಪ್ರಿನ್ಸ್ ಮಾನವೇಂದ್ರ ಸಿಂಗ್ ಗೋಹಿಲ್ ಯಾರು?: ರಾಜ್‌ಪಿಪ್ಲಾದ 'ಸಲಿಂಗಕಾಮಿ' ಪ್ರಿನ್ಸ್ ಮಾನವೇಂದ್ರ ಸಿಂಗ್ ಗೋಹಿಲ್ ಬಹುಶಃ ತಾವು ಸಲಿಂಗಕಾಮಿ ಎಂಬುದನ್ನು ಒಪ್ಪಿಕೊಂಡ ದೇಶದ ಮೊದಲ ಪ್ರಿನ್ಸ್ ಅಥವಾ ರಾಜಕುಮಾರನಾಗಿದ್ದಾರೆ. ಅವರು ಇದನ್ನು ಬಹಿರಂಗವಾಗಿ ಒಪ್ಪಿಕೊಂಡ ಸಮಯದಿಂದ ಅವರು ಗುಜರಾತ್ನಲ್ಲಿ ಮಾತ್ರವಲ್ಲದೇ ಈಗ ದೇಶ ವಿದೇಶಗಳಲ್ಲೂ ಮಾನವೇಂದ್ರ ‘ಗೇ’ ಪ್ರಿನ್ಸ್ ಎಂದು ಗುರುತಿಸಿಕೊಂಡಿದ್ದಾರೆ.
GAY ಆಶ್ರಮ ಎಲ್ಲಿದೆ?: ಸಲಿಂಗಕಾಮಿಗಳ ಅನುಕೂಲಕ್ಕಾಗಿ ಗೇ ಪ್ರಿನ್ಸ್ ಹಲವಾರು ಕಾರ್ಯಗಳನ್ನು ಮಾಡುತ್ತಿರುವುದು ಜಗತ್ತಿನ ಗಮನ ಸೆಳೆದಿದೆ. ಅವರು ರಾಜ್‌ಪಿಪ್ಲಾದಲ್ಲಿ ಸಲಿಂಗಕಾಮಿಗಳಿಗಾಗಿ ವೃದ್ಧಾಶ್ರಮವನ್ನು ಸಹ ಸ್ಥಾಪಿಸಿದ್ದಾರೆ. ಈ ಆಶ್ರಮಕ್ಕೆ ಅಮೆರಿಕದ ಲೇಖಕಿ 'ಜಾನೆಟ್' ಅವರ ಹೆಸರಿಡಲಾಗಿದೆ. ಇದು ಭಾರತ ಮಾತ್ರವಲ್ಲದೇ ಇಡೀ ಏಷ್ಯಾದಲ್ಲೇ ಮೊದಲ 'ಗೇ' ಆಶ್ರಮವಾಗಿದೆ.
ಲೇಖಕಿ ಜಾನೆಟ್ ಅವರು ಈ ಆಶ್ರಮದ ಸ್ಥಾಪನೆಗೆ ಅತಿ ಹೆಚ್ಚು ದೇಣಿಗೆ ನೀಡಿರುವುದರಿಂದ ಅವರ ಹೆಸರನ್ನೇ ಇಡಲಾಗಿದೆ ಎಂದು ಮಾನವೇಂದ್ರ ಸಿಂಗ್ ಹೇಳಿದ್ದಾರೆ. ಆದರೆ, ಜಾನೆಟ್ 'ಸಲಿಂಗಕಾಮಿ' ಅಲ್ಲ.. ಆದರೂ ಅವರು ಈ ಆಶ್ರಮಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದಾರೆ ಎಂದು ಗೇ ಪ್ರಿನ್ಸ್ ಸ್ಪಷ್ಟಪಡಿಸಿದ್ದಾರೆ.
ಮಾನವೇಂದ್ರ ಸಿಂಗ್ರಿಗೆ ಸಲಿಂಗಕಾಮಿಗಳಿಗಾಗಿ ಆಶ್ರಮ ನಿರ್ಮಿಸುವ ಆಲೋಚನೆ 2009 ರಲ್ಲಿ ಬಂದಿತ್ತು ಮತ್ತು ಅಂದಿನಿಂದ ಅವರು ಅದಕ್ಕಾಗಿ ಶ್ರಮಿಸುತ್ತಿದ್ದಾರೆ. ಕೊನೆಗೂ ಆಶ್ರಮ ಸ್ಥಾಪನೆಯಾಗಿದ್ದು, ಇದನ್ನು ಜಾನೆಟ್ ಅವರ ಸಹೋದರಿ ಕಾರ್ಲಾಫೈನ್ ಉದ್ಘಾಟಿಸಿದ್ದಾರೆ. ಕಾರ್ಲಾಫೈನ್ ವಿಶೇಷವಾಗಿ ಇದೇ ಕಾರಣಕ್ಕಾಗಿ ಅಮೆರಿಕದಿಂದ ತನ್ನ ಪತಿಯೊಂದಿಗೆ ಇಲ್ಲಿಗೆ ಬಂದಿದ್ದಾಳೆ.