ನವದೆಹಲಿ: 2024ರ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಪಾಲ್ಗೊಳ್ಳಲು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರಿಗೆ ಆಹ್ವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹಿಂದೆ ಜುಲೈನಲ್ಲಿ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅವರು ಫ್ರಾನ್ಸ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಭಯ ನಾಯಕರು ಭೇಟಿಯಾಗಿದ್ದರು. ಬಾಸ್ಟಿಲ್ ಡೇ ಆಚರಣೆಯಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ ಪ್ರಧಾನಿ ಮೋದಿ, ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರ ಆಹ್ವಾನದ ಮೇರೆಗೆ ಫ್ರಾನ್ಸ್‌ಗೆ ಭೇಟಿ ನೀಡಿದ್ದರು.
ಭಾರತ ಮತ್ತು ಫ್ರಾನ್ಸ್ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯ 25 ನೇ ವಾರ್ಷಿಕೋತ್ಸವದ ನಿಮಿತ್ತ ಪ್ರಧಾನಿ ಮೋದಿ ಫ್ರಾನ್ಸ್‌ಗೆ ಭೇಟಿ ನೀಡಿದ್ದರು. "ಭಾರತ-ಫ್ರಾನ್ಸ್ ಸ್ಟ್ರಾಟೆಜಿಕ್ ಪಾಲುದಾರಿಕೆಯ 25ನೇ ವಾರ್ಷಿಕೋತ್ಸವವನ್ನು ಗುರುತಿಸಲು, ಮಿಲಿಟರಿ ಬ್ಯಾಂಡ್ ನೇತೃತ್ವದ 241 ಸದಸ್ಯರ ತ್ರಿ-ಸೇವಾ ಭಾರತೀಯ ಸಶಸ್ತ್ರ ಪಡೆಗಳು ಸಹ ಪರೇಡ್‌ನಲ್ಲಿ ಭಾಗವಹಿಸಿದ್ದವು" ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.
ಭಾರತೀಯ ಸೇನಾ ತುಕಡಿಯ ನೇತೃತ್ವವನ್ನು ಪಂಜಾಬ್ ರೆಜಿಮೆಂಟ್, ರಜಪೂತಾನ ರೈಫಲ್ಸ್ ರೆಜಿಮೆಂಟ್ ವಹಿಸಿತ್ತು. ಮೆರವಣಿಗೆಯ ಸಮಯದಲ್ಲಿ, ಭಾರತೀಯ ಸೇನಾ ತುಕಡಿಯು 'ಸಾರೆ ಜಹಾನ್ ಸೆ ಅಚ್ಚಾ' ಎಂಬ ದೇಶಭಕ್ತಿಯ ರಾಗಕ್ಕೆ ತಕ್ಕಂತೆ ಪರೇಡ್ ಮಾಡಿತ್ತು. ಆದರೆ ಭಾರತೀಯ ವಾಯುಪಡೆಯ (IAF) ರಫೇಲ್ ಯುದ್ಧವಿಮಾನಗಳ ಸ್ಕ್ವಾಡ್ರನ್ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಭಾಗವಹಿಸಿದ್ದವು. ಹಶಿಮಾರಾದಿಂದ 101 ಸ್ಕ್ವಾಡ್ರನ್‌ನಿಂದ ಭಾರತೀಯ ವಾಯುಪಡೆಯ ರಫೇಲ್ ಜೆಟ್‌ಗಳು ಪರೇಡ್‌ನಲ್ಲಿ ಕಾಣಿಸಿಕೊಂಡು ಗಮನಸೆಳೆದಿದ್ದವು.
ಜುಲೈ 14, 1789 ರಂದು ಫ್ರೆಂಚ್ ಕ್ರಾಂತಿಯ ಸಮಯದಲ್ಲಿ ಬಾಸ್ಟಿಲ್ ಜೈಲು ದಾಳಿ ಸ್ಮರಣಾರ್ಥವಾಗಿ, ಪ್ರತಿವರ್ಷ ಜುಲೈ 14 ರಂದು ವಾರ್ಷಿಕೋತ್ಸವ ಆಚರಿಸಲಾಗುತ್ತದೆ. ಫ್ರೆಂಚ್ ಕ್ರಾಂತಿಯಿಂದ ಪ್ರೇರಿತವಾಗಿ, ಭಾರತ ಸಂವಿಧಾನದಲ್ಲಿ 'ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ'ದ ಮೌಲ್ಯಗಳನ್ನು ಅಳವಡಿಸಿಕೊಳ್ಳಲಾಗಿದೆ.
ಭಾರತದ ಅಧ್ಯಕ್ಷತೆಯಲ್ಲಿ ನಡೆದ G20 ಶೃಂಗಸಭೆಯಲ್ಲಿ ಭಾಗವಹಿಸಲು ಫ್ರೆಂಚ್ ಅಧ್ಯಕ್ಷ ಮ್ಯಾಕ್ರನ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಭೇಟಿ ನೀಡಿದ್ದರು. ಅಧ್ಯಕ್ಷ ಮ್ಯಾಕ್ರನ್ ಮತ್ತು ಪ್ರಧಾನಿ ಮೋದಿ ಅವರು ಸೆಪ್ಟೆಂಬರ್ 10 ರಂದು ದೆಹಲಿಯಲ್ಲಿ G20 ಶೃಂಗಸಭೆಯ ಹೊರತಾಗಿ ದ್ವಿಪಕ್ಷೀಯ ಸಭೆ ನಡೆಸಿದ್ದರು. ಸಭೆಯ ನಂತರ ಪ್ರಧಾನಿ ಮೋದಿ ಅವರು, ಭಾರತ - ಫ್ರಾನ್ಸ್ ಸಂಬಂಧಗಳನ್ನು ಪ್ರಗತಿಯ ಹೊಸ ಎತ್ತರಕ್ಕೆ ಕೊಂಡೊಯ್ಯುವ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದರು.
"ಫ್ರೆಂಚ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಅತ್ಯಂತ ಮಹತ್ವದ ಔತನಕೂಟದ ಸಭೆ ನಡೆಯಿತು. ನಾವು ಹಲವಾರು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ ಮತ್ತು ಭಾರತ - ಫ್ರಾನ್ಸ್ ಸಂಬಂಧಗಳು ಪ್ರಗತಿಯ ಹೊಸ ಎತ್ತರವನ್ನು ಖಾತ್ರಿಪಡಿಸಿಕೊಳ್ಳಲು ಎದುರು ನೋಡುತ್ತಿದ್ದೇವೆ" ಎಂದು ಪಿಎಂ ಮೋದಿ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದರು.
ಭಾರತದಲ್ಲಿ ಉತ್ಪಾದನೆಯ ವಿನ್ಯಾಸ ಮತ್ತು ವಿಸ್ತರಣೆಯಲ್ಲಿ ಪಾಲುದಾರಿಕೆಯ ಮೂಲಕ ರಕ್ಷಣಾ ಸಹಕಾರವನ್ನು ಬಲಪಡಿಸುವ ತಮ್ಮ ಬದ್ಧತೆಯನ್ನು ಉಭಯ ನಾಯಕರು ಪುನರುಚ್ಚರಿಸಿದ್ದರು. ರಕ್ಷಣಾ ಕೈಗಾರಿಕಾ ಮಾರ್ಗಸೂಚಿಯನ್ನು ಅಂತಿಮಗೊಳಿಸುವಂತೆ ಕರೆ ನೀಡಿದ್ದರು.
ಫ್ರೆಂಚ್ ನಾಯಕ 6ನೇ ಬಾರಿಗೆ ಮುಖ್ಯ ಅತಿಥಿ: ರಾಷ್ಟ್ರೀಯ ರಾಜಧಾನಿ ನವದೆಹಲಿಯಲ್ಲಿ ಗಣರಾಜ್ಯೋತ್ಸವ ಆಚರಣೆಯಲ್ಲಿ ಫ್ರೆಂಚ್ ನಾಯಕರೊಬ್ಬರು 6 ನೇ ಬಾರಿಗೆ ಮುಖ್ಯ ಅತಿಥಿಯಾಗಲಿದ್ದಾರೆ. ಮ್ಯಾಕ್ರನ್‌ಗೆ ಮೊದಲು, ಮಾಜಿ ಫ್ರೆಂಚ್ ಪ್ರಧಾನಿ ಜಾಕ್ವೆಸ್ ಚಿರಾಕ್ ಅವರು 1976 ಮತ್ತು 1998 ರಲ್ಲಿ ಭಾರತದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿದ್ದರು. ಮಾಜಿ ಅಧ್ಯಕ್ಷರಾದ ವ್ಯಾಲೆರಿ ಗಿಸ್ಕಾರ್ಡ್ ಡಿಎಸ್ಟೇಯಿಂಗ್, ನಿಕೋಲಸ್ ಸರ್ಕೋಜಿ ಮತ್ತು ಫ್ರಾಂಕೋಯಿಸ್ ಹೊಲಾಂಡ್ ಅವರು ಕ್ರಮವಾಗಿ 1980, 2008 ಮತ್ತು 2016 ವರ್ಷಗಳಲ್ಲಿ ಮುಖ್ಯ ಅತಿಥಿಗಳಾಗಿ ಭಾರತದ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ್ದರು.
ಭಾರತ ಮತ್ತು ಫ್ರಾನ್ಸ್ ರಕ್ಷಣೆ, ಬಾಹ್ಯಾಕಾಶ, ನಾಗರಿಕ ಪರಮಾಣು, ವ್ಯಾಪಾರ, ಹೂಡಿಕೆ, ಶಿಕ್ಷಣ, ಸಂಸ್ಕೃತಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ನಿಕಟವಾಗಿ ಸಹಕರಿಸುತ್ತವೆ.
ಇದನ್ನೂ ಓದಿ: ಚಂದ್ರನ ಮೇಲೆ ಮತ್ತೊಮ್ಮೆ ಮಾನವರನ್ನು ಇಳಿಸಲಿದೆ ಯುಎಸ್: ಕಮಲಾ ಹ್ಯಾರಿಸ್