ಪ್ಯಾರಿಸ್ (ಫ್ರಾನ್ಸ್): 303 ಭಾರತೀಯ ಮೂಲದ ಪ್ರಯಾಣಿಕರನ್ನು ಹೊತ್ತ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ನಿಂದ ನಿಕರಾಗುವಾದತ್ತ ಹೊರಟಿದ್ದ ವಿಮಾನವನ್ನು ಮಾನವ ಕಳ್ಳಸಾಗಣೆ ಶಂಕೆ ಹಿನ್ನೆಲೆ ಫ್ರಾನ್ಸ್‌ನಲ್ಲಿ ಲ್ಯಾಂಡ್ ಮಾಡಲಾಗಿದೆ ಎಂದು ಫ್ರೆಂಚ್ ಅಧಿಕಾರಿಗಳು ತಿಳಿಸಿದ್ದಾರೆ.
ಮಾಧ್ಯಮಯೊಂದರ ವರದಿಯ ಪ್ರಕಾರ, ರಾಷ್ಟ್ರೀಯ ವಿರೋಧಿ ಸಂಘಟಿತ ಅಪರಾಧ ಘಟಕ ಜುನಾಲ್ಕೊ (JUNALCO) ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿದೆ. ವಿಶೇಷ ತನಿಖಾಧಿಕಾರಿಗಳು ವಿಮಾನದಲ್ಲಿದ್ದ ಎಲ್ಲರನ್ನೂ ವಿಚಾರಣೆ ನಡೆಸುತ್ತಿದ್ದಾರೆ. ಹೆಚ್ಚಿನ ತನಿಖೆಗಾಗಿ ಇಬ್ಬರನ್ನು ಫ್ರಾನ್ಸ್ನಲ್ಲಿಯೇ ಉಳಿಸಿಕೊಳ್ಳಲಾಗಿದೆ ಎಂದು ಪ್ಯಾರಿಸ್ ಪ್ರಾಸಿಕ್ಯೂಟರ್ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.
ರೊಮೇನಿಯನ್ ಕಂಪನಿ ಲೆಜೆಂಡ್ ಏರ್ಲೈನ್ಸ್ನ A340 ವಿಮಾನವನ್ನು ಗುರುವಾರ ಟಾರ್ಮ್ಯಾಕ್ನ ವ್ಯಾಟ್ರಿ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದೆ ಎಂದು ಮಾರ್ನೆ ಈಶಾನ್ಯ ವಿಭಾಗದ ಪ್ರಿಫೆಕ್ಚರ್ ಹೇಳಿದೆ. ಪ್ಯಾರಿಸ್‌ನಿಂದ ಪೂರ್ವಕ್ಕೆ 150 ಕಿಲೋಮೀಟರ್ ದೂರದಲ್ಲಿರುವ ವ್ಯಾಟ್ರಿ ವಿಮಾನ ನಿಲ್ದಾಣವು ಹೆಚ್ಚಾಗಿ ವಾಣಿಜ್ಯ ಏರ್‌ಲೈನ್‌ಗಳಿಗೆ ಸೇವೆ ಒದಗಿಸುತ್ತದೆ.
ಈ ವಿಮಾನವು ಯುಎಇಯಲ್ಲಿ ಕೆಲಸ ಮಾಡುತ್ತಿದ್ದ 303 ಭಾರತೀಯ ಪ್ರಜೆಗಳನ್ನು ಹೊತ್ತೊಯ್ಯುತ್ತಿತ್ತು ಎಂದು ಪ್ರಿಫೆಕ್ಚರ್ ಹೇಳುತ್ತದೆ ಎಂದು ಮಾಧ್ಯಮ ವರದಿ ಹೇಳಿದೆ. ಫ್ರಾನ್ಸ್‌ನಲ್ಲಿ ಇಳಿದ ನಂತರ, ಪ್ರಯಾಣಿಕರನ್ನು ಮೊದಲು ವಿಮಾನದಲ್ಲಿ ಇರಿಸಲಾಗಿತ್ತು. ನಂತರ ಹೊರಗೆ ಬಿಡಲಾಗಿದೆ. ಟರ್ಮಿನಲ್ನಲ್ಲಿ ತಂಗಲು ಪ್ರತ್ಯೇಕ ವಸತಿ ಕಲ್ಪಿಸಲಾಗಿತ್ತು. ಇಡೀ ವಿಮಾನ ನಿಲ್ದಾಣದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಮಾನವ ಕಳ್ಳಸಾಗಾಣಿಕೆ ಹಿನ್ನೆಲೆ ಜನರನ್ನು ವಿಮಾನವು ಹೊತ್ತೊಯ್ಯುತ್ತಿದೆ ಎಂದು ಅನಾಮಧೇಯ ಸುಳಿವು ಸಿಕ್ಕಿತ್ತು ಎಂದು ಪ್ರಾಸಿಕ್ಯೂಟರ್ ಕಚೇರಿ ಹೇಳಿದೆ. ಪ್ರಯಾಣಿಕರನ್ನು ಬಳಿಕ ಸಣ್ಣ ವ್ಯಾಟ್ರಿ ವಿಮಾನ ನಿಲ್ದಾಣದ ಮುಖ್ಯ ಸಭಾಂಗಣಕ್ಕೆ ಕಳಿಸಲಾಗಿದೆ. ಅಲ್ಲಿಯೇ ಅವರು ಗುರುವಾರ ರಾತ್ರಿ ತಂಗಲು ವ್ಯವಸ್ಥೆ ಮಾಡಲಾಯಿತು ಎಂದು ಮರ್ನೆ ಪ್ರದೇಶದ ಆಡಳಿತ ತಿಳಿಸಿದೆ.
ವಿಶೇಷ ಫ್ರೆಂಚ್ ಸಂಘಟಿತ ಅಪರಾಧ ಘಟಕದ ತನಿಖಾಧಿಕಾರಿಗಳು, ಗಡಿ ಪೊಲೀಸ್ ಮತ್ತು ವಾಯುಯಾನ ಭದ್ರತಾ ಸಿಬ್ಬಂದಿ ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ಘಟನೆಯ ಕುರಿತು ಲೆಜೆಂಡ್ ಏರ್‌ಲೈನ್ಸ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ: ಅರೆಸೈನಿಕ ಪಡೆಗಳು ಹಿಂದೆ ಸರಿಯುವವರೆಗೂ ಕದನವಿರಾಮವಿಲ್ಲ: ಸುಡಾನ್ ಸೇನಾ ಮುಖ್ಯಸ್ಥ