ದೋಹಾ (ಕತಾರ್): ಇಸ್ರೇಲ್ ಹಾಗೂ ಹಮಾಸ್ ನಡುವಿನ ನಾಲ್ಕು ದಿನಗಳ ಕದನ ವಿರಾಮ ಇಂದಿನಿಂದ ಆರಂಭವಾಗಿದೆ. ಇದು ಎರಡೂ ಕಡೆಗಳಿಗೆ ಇಸ್ರೇಲ್ನ ಒತ್ತೆಯಾಳು ನಾಗರಿಕರು ಮತ್ತು ಪ್ಯಾಲೆಸ್ಟೈನ್ನ ಕೈದಿಗಳ ವಿನಿಮಯಕ್ಕೆ ದಾರಿ ಮಾಡಿಕೊಟ್ಟಿದೆ.
ಇಂದು ಬೆಳಗ್ಗೆ 7 ಗಂಟೆಯಿಂದ ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಕದನ ವಿರಾಮ ಶುರುವಾಗಿದೆ. ತಾತ್ಕಾಲಿಕವಾಗಿ ಸಂಘರ್ಷ ನಿಲ್ಲಿಸಿರುವುದು ಗಾಜಾದ 2.3 ಮಿಲಿಯನ್ ಜನರಿಗೆ ಕೊಂಚ ನಿರಾಳತೆ ಸಿಕ್ಕಂತಾಗಿದೆ. ಈ ಕದನ ವಿರಾಮದ ಅವಧಿಯಲ್ಲಿ ಹಮಾಸ್ ಗುಂಪು ಸುಮಾರು 240 ಒತ್ತೆಯಾಳುಗಳ ಪೈಕಿ ಕನಿಷ್ಠ 50 ಜನರನ್ನು ಬಿಡುಗಡೆ ಮಾಡುವ ವಾಗ್ದಾನ ನೀಡಿದೆ.
ಅಕ್ಟೋಬರ್ 7ರಂದು ದಕ್ಷಿಣ ಇಸ್ರೇಲ್ ಮೇಲಿನ ದಾಳಿ ವೇಳೆ ಹಮಾಸ್ ಹಾಗೂ ಇತರ ಉಗ್ರಗಾಮಿಗಳು ಈ 240 ಜನರನ್ನು ವಶಕ್ಕೆ ಪಡೆದು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ. ಮತ್ತೊಂದೆಡೆ, ಇಸ್ರೇಲ್ 150 ಪ್ಯಾಲೆಸ್ಟೈನ್ ಕೈದಿಗಳನ್ನು ಬಿಡುಗಡೆ ಮಾಡಲು ಒಪ್ಪಿದೆ ಎಂದು ಹಮಾಸ್ ಹೇಳಿಕೊಂಡಿದೆ.
ಎರಡೂ ಕಡೆಯವರು ಮೊದಲು ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡುತ್ತಾರೆ. ಅಲ್ಲದೇ, ಹೆಚ್ಚುವರಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ, ಕದನ ವಿರಾಮ ವಿಸ್ತರಿಸುವುದಾಗಿ ಇಸ್ರೇಲ್ ತಿಳಿಸಿದೆ. ಬಿಡುಗಡೆಯಾಗುವ ಪ್ರತಿ ಹೆಚ್ಚುವರಿ 10 ಒತ್ತೆಯಾಳುಗಳಿಗೆ ಕದನ ವಿರಾಮವನ್ನು ಹೆಚ್ಚುವರಿ ಒಂದು ದಿನ ವಿಸ್ತರಿಸಲಾಗುವುದು ಎಂದು ಇಸ್ರೇಲ್ ಹೇಳಿದೆ.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಪ್ಯಾಲೆಸ್ಟೈನ್ನ ಹಮಾಸ್ ಉಗ್ರಗಾಮಿ ಸಂಘಟನೆಯು ಏಕಾಏಕಿ ದಾಳಿ ನಡೆಸಿತ್ತು. ಇದರಿಂದ ಇಸ್ರೇಲ್ ಕೂಡ ಪ್ರತಿದಾಳಿ ಆರಂಭಿಸಿತ್ತು. ಅಲ್ಲಿಂದ ಇಸ್ರೇಲ್ ಸೇನೆ ಹಾಗೂ ಹಮಾಸ್ ಸಂಘಟನೆ ಮಧ್ಯೆ ಭೀಕರ ಸಂಘರ್ಷ ಏರ್ಪಟ್ಟಿದೆ. ಇದುವರೆಗೆ ಎರಡೂ ಕಡೆಗಳಲ್ಲಿ ನೂರಾರು ಜನರು ಬಲಿಯಾಗಿದ್ದಾರೆ.
ಇದರ ನಡುವೆ ಕತಾರ್, ಅಮೆರಿಕ ಮತ್ತು ಈಜಿಪ್ಟ್ ಮಧ್ಯಪ್ರವೇಶದಿಂದಾಗಿ ವಾರಗಟ್ಟಲೆ ಮಾತುಕತೆ ನಂತರ ಒತ್ತೆಯಾಳುಗಳಿಗಾಗಿ ಕದನ ವಿರಾಮದ ಒಪ್ಪಂದಕ್ಕೆ ಬರಲಾಗಿದೆ. ಹಮಾಸ್ ವಶದಲ್ಲಿರುವ 13 ಮಹಿಳೆಯರು ಮತ್ತು ಮಕ್ಕಳ ಮೊದಲ ಗುಂಪನ್ನು ಶುಕ್ರವಾರ ಬಿಡುಗಡೆಯಾಗಲಿದೆ ಎಂದು ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರ ಮಜೀದ್ ಅಲ್ ಅನ್ಸಾರಿ ತಿಳಿಸಿದ್ದಾರೆ.
ತೀವ್ರ ಸಂಘರ್ಷದ ನಡೆಯುತ್ತಿರುವಾಗಲೇ ಈ ಒಪ್ಪಂದವು ಅಂತಿಮವಾಗಿ ಯುದ್ಧ ನಿಲ್ಲಿಸುವ ಭರವಸೆಯನ್ನು ಹುಟ್ಟುಹಾಕಿದೆ. ಆದರೆ, ಕದನ ವಿರಾಮ ಮುಗಿದ ನಂತರ ಇಸ್ರೇಲ್ ತನ್ನ ಬೃಹತ್ ದಾಳಿಯನ್ನು ಪುನರಾರಂಭಿಸುವುದಾಗಿ ಹೇಳಿದೆ. ನಮ್ಮ ಪಡೆಗಳಿಗೆ ಸಣ್ಣ ಬಿಡುವು ಇರುತ್ತದೆ. ಕನಿಷ್ಠ ಎರಡು ತಿಂಗಳ ಕಾಲ ಯುದ್ಧವು ಮತ್ತಷ್ಟು ತೀವ್ರತೆಯೊಂದಿಗೆ ಪುನರಾರಂಭವಾಗಲಿದೆ ಎಂದು ಇಸ್ರೇಲ್ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಗುರುವಾರ ತಿಳಿಸಿದ್ದಾರೆ.
ಇದನ್ನೂ ಓದಿ: 8 ಭಾರತೀಯರಿಗೆ ಮರಣದಂಡನೆ ಪ್ರಕರಣ: ಭಾರತದ ಮೇಲ್ಮನವಿ ಸ್ವೀಕರಿಸಿದ ಕತಾರ್ ಕೋರ್ಟ್