ನ್ಯೂಯಾರ್ಕ್: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ರಹಸ್ಯವಾಗಿ ಗಡಿದಾಟಿ ಬಾಲಾಕೋಟ್ ಮೇಲೆ ಬಾಂಬ್ ಹಾಕಿ ಬಂದಿದ್ದ ಭಾರತದ ಮೇಲೆ ಪಾಕಿಸ್ತಾನ ಅಣುಬಾಂಬ್ ದಾಳಿಗೆ ಸಂಚು ರೂಪಿಸಿತ್ತು. ಇದನ್ನರಿತ ಭಾರತ ಕೂಡ ಪರಮಾಣು ಯುದ್ಧಕ್ಕೆ ಸಜ್ಜಾಗಿತ್ತು ಎಂಬ ಸ್ಫೋಟಕ ರಹಸ್ಯವನ್ನು ಅಮೆರಿಕದ ಮಾಜಿ ವಿದೇಶಾಂಗ ಸಚಿವ ಮೈಕ್ ಪೊಂಪಿಯೊ ಬಹಿರಂಗಪಡಿಸಿದ್ದಾರೆ. ಮಂಗಳವಾರ ಬಿಡುಗಡೆಯಾದ ತಮ್ಮ "ನೆವರ್ ಗಿವ್ ಆ್ಯನ್ ಇಂಚ್" ಪುಸ್ತಕದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದು, ಪುಲ್ವಾಮಾ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಬಾಲಾಕೋಟ್ ದಾಳಿಯಿಂದ ಪಾಕಿಸ್ತಾನ ಖುದ್ದು ಹೋಗಿತ್ತು. ಭಾರತದ ಸೇನೆಯ ಚತುರತೆಗೆ ಬೆಕ್ಕಸ ಬೆರಗಾಗಿದ್ದಲ್ಲದೇ, ಅವಮಾನಕ್ಕೀಡಾಗಿತ್ತು. ವಿಶ್ವಮಟ್ಟದಲ್ಲಿ ತನ್ನ ಮರ್ಯಾದೆ ಉಳಿಸಿಕೊಳ್ಳಲು ಮತ್ತು ಇದೇ ಅವಕಾಶದಲ್ಲಿ ಭಾರತದ ಮೇಲೆ ಅಣುಬಾಂಬ್ ದಾಳಿಗೆ ಸಂಚು ರೂಪಿಸಿತ್ತು.
ಭಾರತದ ಗುಪ್ತಚರ ದಳಗಳು ಇದರ ಬಗ್ಗೆ ನಿಖರ ಮಾಹಿತಿ ಕಲೆಹಾಕಿದ್ದವು. ಒಂದು ವೇಳೆ ಪಾಕಿಸ್ತಾನ ಅಣುಬಾಂಬ್ ದಾಳಿ ಮಾಡಿದರೆ, ಭಾರತ ಕೂಡ ಪ್ರತಿಯಾಗಿ ಭೀಕರ ಯುದ್ಧಕ್ಕೆ ಸಜ್ಜಾಗಿತ್ತು ಎಂದು ಮೈಕ್ ಪೊಂಪಿಯೊ ತಿಳಿಸಿದ್ದಾರೆ. 2019 ರಲ್ಲಿ ಉಭಯ ದೇಶಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗಿತ್ತು. ಅದೃಷ್ಟವಶಾತ್ ಪಾಕಿಸ್ತಾನ ಅಂತಹ ದುಷ್ಕೃತ್ಯಕ್ಕೆ ಕೈಹಾಕದ ಕಾರಣ ಪರಮಾಣು ಯುದ್ಧ ನಡೆಯಲಿಲ್ಲ. ಇಲ್ಲವಾದಲ್ಲಿ ಇಷ್ಟೊತ್ತಿಗಾಗಲೇ ಎರಡು ರಾಷ್ಟ್ರಗಳ ಮಧ್ಯೆ ಭೀಕರ ಯುದ್ಧ ಘಟನೆಯುವುದಿತ್ತು ಎಂದು ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ದಾಳಿಯ ಬಗ್ಗೆ ಸುಷ್ಮಾ ಸ್ವರಾಜ್ ಮಾಹಿತಿ: ಅಮೆರಿಕ- ದಕ್ಷಿಣ ಕೊರಿಯಾ ನಡುವಿನ ಸಭೆಗಾಗಿ ನಾನು ಅಧಿಕಾರಿಗಳ ಜೊತೆಗೆ ಹನೋಯ್ಗೆ ಭೇಟಿ ನೀಡಿದ್ದೆ. ಫೆ.27 ರಂದು ರಾತ್ರಿ ಕರೆ ಮಾಡಿದ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಪಾಕಿಸ್ತಾನದ ದುರ್ನಡತೆಯ ಬಗ್ಗೆ ತಿಳಿಸಿದರು. ಬಾಲಾಕೋಟ್ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ನಮ್ಮ ಮೇಲೆ ಪರಮಾಣು ದಾಳಿ ನಡೆಸಲು ಸಜ್ಜಾಗಿದೆ. ನಾವೂ ಕೂಡ ಅದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದು ತಿಳಿಸಿದರು. ಕ್ರೋಧಗೊಂಡಿದ್ದ ಅವರನ್ನು ನಾನು ಆ ಹಂತದಲ್ಲಿ ಸಮಾಧಾನ ಮಾಡಿದೆ. ತಕ್ಷಣಕ್ಕೆ ಯಾವುದೇ ಇಂತಹ ನಿರ್ಧಾರಕ್ಕೆ ಬರಬೇಡಿ ಎಂದು ಕೇಳಿಕೊಂಡೆ ಎಂದು ಹೇಳಿದ್ದಾರೆ.
"ಭಾರತ-ಪಾಕಿಸ್ತಾನ ನಡುವೆ ಪರಮಾಣು ಯುದ್ಧ ನಡೆಯುವ ಹಂತಕ್ಕೆ ಪರಿಸ್ಥಿತಿ ಬಂದಿತ್ತು ಎಂಬುದು ಜಗತ್ತಿಗೆ ಸರಿಯಾಗಿ ಗೊತ್ತಿಲ್ಲ. ಸುಷ್ಮಾ ಸ್ವರಾಜ್ ಅವರು ಮಾಹಿತಿ ತಿಳಿಸಿದ ಬಳಿಕ ಪಾಕಿಸ್ತಾನದ ಸೇನಾಪಡೆಯ ಮುಖ್ಯಸ್ಥ ಜನರಲ್ ಬಜ್ವಾ ಅವರನ್ನು ಸಂಪರ್ಕಿಸಿದೆ. ಪಾಕಿಸ್ತಾನ, ಭಾರತದ ಮೇಲೆ ಅಣು ಬಾಂಬ್ ದಾಳಿಗೆ ಮುಂದಾದ ಬಗ್ಗೆ ಪ್ರಶ್ನಿಸಿದಾಗ, ಅವರು ಇದನ್ನು ಅಲ್ಲಗಳೆದರು. ಭಾರತವೇ ತಮ್ಮ ಮೇಲೆ ದಾಳಿಗೆ ಮುಂದಾಗಿದೆ ಎಂದು ಹೇಳಿದ್ದರು" ಎಂದು ತಮ್ಮ ಪುಸ್ತಕದಲ್ಲಿ ಬರೆದುಕೊಂಡಿದ್ದಾರೆ.
ಉಭಯ ರಾಷ್ಟ್ರಗಳಿಗೆ ಅಣುಬಾಂಬ್ ಯುದ್ಧದ ಪರಿಣಾಮಗಳನ್ನು ತಿಳಿಹೇಳಲಾಯಿತು. ಇದಾದ ಬಳಿಕ ಯಾವುದೇ ಯುದ್ಧ ಸಂಭವಿಸಲಿಲ್ಲ. ನವದೆಹಲಿಯಲ್ಲಿ ಆಗಿನ ಯುಎಸ್ ರಾಯಭಾರಿಯಾಗಿದ್ದ ಕೆನ್ನೆತ್ ಜಸ್ಟರ್ ಅವರು ಯುದ್ಧ ತಪ್ಪಿಸಲು ಮಾಡಿದ ಸೂಚನೆಯನ್ನು ಸಮರ್ಥವಾಗಿ ನಿಭಾಯಿಸಿದರು ಎಂದು ತಿಳಿಸಿದ್ದಾರೆ.
ದಾಳಿಯ ಕಹಿ ನೆನಪು: ಪುಲ್ವಾಮಾದಲ್ಲಿ 2019 ರ ಫೆಬ್ರವರಿ 14 ರಂದು ಜೈಷ್-ಎ- ಮೊಹಮದ್ ಸಂಘಟನೆಯ ಉಗ್ರರು ಆರ್ಡಿಎಕ್ಸ್ ಬಳಸಿ ಸಿಆರ್ಪಿಎಫ್ ಯೋಧರು ಹೊರಟಿದ್ದ ವಾಹನಗಳ ಮೇಲೆ ದಾಳಿ ಮಾಡಿ ಮಾಡಿದ್ದರು. ದುರ್ಘಟನೆಯಲ್ಲಿ 44 ಯೋಧರು ಪ್ರಾಣ ಕಳೆದುಕೊಂಡರು. ಇದು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತು. ಯೋಧರ ನೆತ್ತರು ಹರಿಸಿದ ಪಾಕ್ ಕೃಪಾಪೋಷಿತ ಉಗ್ರ ಸಂಘಟನೆಯ ವಿರುದ್ಧ ಪ್ರತೀಕಾರಕ್ಕಾಗಿ ಭಾರತೀಯ ಸೇನೆ 26 ರಂದು ರಾತ್ರೋರಾತ್ರಿ ಪಾಕ್ನ ಬಾಲಾಕೋಟ್ ಪ್ರದೇಶದ ಮೇಲೆ ದಾಳಿ ಮಾಡಿ ಅಲ್ಲಿನ ಉಗ್ರ ತಾಣಗಳನ್ನು ಪುಡಿಗಟ್ಟಿ ವಾಪಸ್ ಬಂದಿತ್ತು.
ಇದನ್ನೂ ಓದಿ: ಗಣರಾಜ್ಯೋತ್ಸವದ ಶುಭಾಶಯಗಳು ಭಾರತ!: ವಿಭಿನ್ನ ಕಲಾಕೃತಿ ಮೂಲಕ ಶುಭ ಕೋರಿದ ಗೂಗಲ್ ಡೂಡಲ್