ಲಂಡನ್(ಯುಕೆ): ಲಂಡನ್ ಪ್ರಧಾನಿ ಹುದ್ದೆಯಲ್ಲಿ ಮುಂಚೂಣಿಯಲ್ಲಿರುವ ಭಾರತೀಯ ಮೂಲದ ರಿಷಿ ಸುನಕ್ ಇದೀಗ 4ನೇ ಸುತ್ತಿನಲ್ಲಿ ಭರ್ಜರಿ ಗೆಲುವು ದಾಖಲು ಮಾಡಿದ್ದಾರೆ. ಈ ಮೂಲಕ ಪಿಎಂ ರೇಸ್ನಲ್ಲಿ ಮತ್ತಷ್ಟು ಮುನ್ನಡೆ ಪಡೆದುಕೊಂಡಿದ್ದಾರೆ. ಸದ್ಯ ಪ್ರಧಾನಿ ಹುದ್ದೆ ಪಡೆದುಕೊಳ್ಳುವ ಸ್ಪರ್ಧಾಳುಗಳ ಸಂಖ್ಯೆ 5ರಿಂದ 3ಕ್ಕೆ ಇಳಿಕೆಯಾಗಿದ್ದು, ಮುಂಚೂಣಿಯಲ್ಲಿ ರಿಷಿ ಸುನಕ್ ಇದ್ದಾರೆ.
ಪ್ರಧಾನಿ ಹುದ್ದೆಗೋಸ್ಕರ ನಡೆದ 4ನೇ ಸುತ್ತಿಯಲ್ಲಿ ರಿಷಿ ಸುನಕ್ 118 ಮತ ಪಡೆದುಕೊಂಡು ಅಗ್ರಸ್ಥಾನದಲ್ಲಿದ್ದಾರೆ. ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ರಿಷಿ ಸುನಕ್ ಲಂಡನ್ನ ಮುಂದಿನ ಪ್ರಧಾನಿ ಎಂದು ಬಿಂಬಿತವಾಗಿದ್ದು, ಕನ್ಸರ್ವೆಟಿವ್ ಪಕ್ಷದ ನಾಯಕನಾಗಿ ಹೊರಹೊಮ್ಮುವ ಎಲ್ಲ ಲಕ್ಷಣ ಗೋಚರವಾಗ್ತಿವೆ.
ಇಂದು ನಡೆದ 4ನೇ ಸುತ್ತಿನಲ್ಲಿ ರಿಷಿ ಸುನಕ್ 118 ಮತ ಪಡೆದುಕೊಂಡಿದ್ದು, ಪೆನ್ನಿ ಮೊರ್ಡಾಂಟ್ 92 ಮತ, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 86 ಮತ ಪಡೆದುಕೊಂಡಿದ್ದಾರೆ. ಶಾಸಕ ಕೆಮಿ ಬಡೆನೊಚ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ. ಪ್ರಧಾನಿ ಬೋರಿಸ್ ಜಾನ್ಸನ್ ಜುಲೈ 7 ರಂದು ಕನ್ಸರ್ವೇಟಿವ್ ನಾಯಕತ್ವವನ್ನು ತ್ಯಜಿಸುವುದಾಗಿ ಘೋಷಿಸಿದ್ದರು.
ಸೆಪ್ಟೆಂಬರ್ 5 ರಂದು ತಮ್ಮ ಉತ್ತರಾಧಿಕಾರಿಯನ್ನು ಘೋಷಿಸುವವರೆಗೂ ಅವರು ಪ್ರಧಾನ ಮಂತ್ರಿಯಾಗಿಯೇ ಇರುತ್ತಾರೆ. ಹಲವು ಹಗರಣಗಳು, ಕೊರೊನಾ ಸಂದರ್ಭದಲ್ಲಿ ನಿಯಮ ಮೀರಿ ಸಂತೋಷಕೂಟ ಸೇರಿದಂತೆ ಅನೇಕ ಗಂಭೀರ ಪ್ರಕರಣಗಳು ಕೇಳಿ ಬಂದ ಕಾರಣ ಬೋರಿಸ್ ಜಾನ್ಸನ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.