ವಾಷಿಂಗ್ಟನ್(ಅಮೆರಿಕಾ): ನ್ಯೂಯಾರ್ಕ್‌ನ ರಾಕ್‌ಲ್ಯಾಂಡ್ ಕೌಂಟಿಯಲ್ಲಿ ಸುಮಾರು ಒಂದು ದಶಕದ ನಂತರ 'ಮೊದಲ ಪೋಲಿಯೊ ಪ್ರಕರಣ' ದೃಢಪಟ್ಟಿದೆ ಎಂದು ಸ್ಥಳೀಯ ಮತ್ತು ರಾಜ್ಯ ಆರೋಗ್ಯ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಪೋಲಿಯೊ ಹೇಗೆ ಹರಡುತ್ತದೆ?: ವಿಶ್ವ ಆರೋಗ್ಯ ಸಂಘಟನೆ (ಡಬ್ಲೂಹೆಚ್ಒ) ಪೋಲಿಯೊ ಅಥವಾ ಪೋಲಿಯೊಮೈಲಿಟಿಸ್ ಅನ್ನು ಸಾಂಕ್ರಾಮಿಕ ಕಾಯಿಲೆಯೆಂದು ಘೋಷಿಸಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಮುಖ್ಯವಾಗಿ ಮಲ-ಮೌಖಿಕ ಮಾರ್ಗದ ಮೂಲಕ ಹೆಚ್ಚಾಗಿ ಹರಡುತ್ತದೆ. ಕಲುಷಿತ ನೀರು ಅಥವಾ ಆಹಾರ ಸೇವನೆಯ ಮೂಲಕವೂ ಹರಡಬಲ್ಲದು. ಆದರೆ, ಈ ರೀತಿ ಹರಡುವ ಸಾಧ್ಯತೆ ಕೊಂಚ ಕಡಿಮೆ. ಈ ಸೋಂಕು ಹೆಚ್ಚಾಗಿ 5 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಅವರಲ್ಲಿ ಸ್ನಾಯು ದೌರ್ಬಲ್ಯವನ್ನು ಉಂಟು ಮಾಡುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ಪಾರ್ಶ್ವವಾಯು ಅಥವಾ ಸಾವಿಗೆ ಕಾರಣವಾಗಬಹುದು.
ಆರೋಗ್ಯ ತಜ್ಞರು ಹೇಳುವುದೇನು?: "ಪೋಲಿಯೊ ಸೋಂಕಿಗೊಳಗಾದ ಶೇ 95 ರಷ್ಟು ಜನರು ಯಾವುದೇ ರೋಗಲಕ್ಷಣಗಳನ್ನು ಹೊಂದಿಲ್ಲ. ಆದರೂ ಅವರು ವೈರಸ್ ಹರಡಬಹುದು" ಎಂದು ಕೌಂಟಿ ಹೆಲ್ತ್ ಕಮಿಷನರ್ ಡಾ.ಪೆಟ್ರಿಸಿಯಾ ಸ್ಕ್ನಾಬೆಲ್ ರಪ್ಪರ್ಟ್ ಎಚ್ಚರಿಸಿದ್ದಾರೆ.
"ನಾವು ಪರಿಸ್ಥಿತಿ ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಆರೋಗ್ಯ ಸಮಸ್ಯೆಗೆ ಪ್ರತಿಕ್ರಿಯಿಸಲು ನ್ಯೂಯಾರ್ಕ್ ರಾಜ್ಯ ಆರೋಗ್ಯ ಇಲಾಖೆ ಕೆಲಸ ಮಾಡುತ್ತಿದೆ. ಲಸಿಕೆ ಕಂಡು ಹಿಡಿದ ಸುಮಾರು ದಶಕಗಳ ನಂತರ ಮತ್ತೆ ಪ್ರಕರಣ ದೃಢಪಟ್ಟಿದೆ. ನಿಮ್ಮ ಮಗುವಿಗೆ ಮತ್ತು ನಿಮ್ಮ ಸಮುದಾಯದ ಒಳಿತಿಗಾಗಿ ಲಸಿಕೆ ಹಾಕಿಸಿಕೊಳ್ಳಿ" ಎಂದು ಅವರು ಮನವಿ ಮಾಡಿದ್ದಾರೆ.
ಇತಿಹಾಸದ ಪುಟಗಳಿಂದ..: 1988ರಲ್ಲಿ ಜಿಪಿಇಐ(ಗ್ಲೋಬಲ್ ಪೋಲಿಯೊ ನಿರ್ಮೂಲನಾ ಉಪಕ್ರಮ) ಸ್ಥಾಪನೆಯಾದಾಗಿನಿಂದ, 2014ರಲ್ಲಿ ಭಾರತ ಸೇರಿದಂತೆ ವಿಶ್ವದ ಹೆಚ್ಚಿನ ಭಾಗಗಳಿಂದ ಪೋಲಿಯೊವನ್ನು ಯಶಸ್ವಿಯಾಗಿ ನಿರ್ಮೂಲನೆ ಮಾಡಲಾಗಿದೆ. ವಿಶ್ವದ ಮೊದಲ ಸುರಕ್ಷಿತ ಮತ್ತು ಪರಿಣಾಮಕಾರಿ ಪೋಲಿಯೊ ಲಸಿಕೆ 'ಸಾಲ್ಕ್' ಅನ್ನು 1955ರಲ್ಲಿ ಕಂಡು ಹಿಡಿಯಲಾಯಿತು. ಆದರೆ 1988ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲೂಹೆಚ್ಒ), ರೋಟರಿ ಇಂಟರ್‌ನ್ಯಾಷನಲ್ ಮತ್ತು ಇತರರು ಗ್ಲೋಬಲ್ ಪೋಲಿಯೊ ನಿರ್ಮೂಲನಾ ಉಪಕ್ರಮ (ಜಿಪಿಇಐ) ಸ್ಥಾಪನೆಯೊಂದಿಗೆ ಜಾಗತಿಕ ಪೋಲಿಯೊ ನಿರ್ಮೂಲನೆಗೆ ಪಣತೊಟ್ಟಿತ್ತು.
ಇದನ್ನೂ ಓದಿ: ಬ್ರಿಟನ್ನಲ್ಲಿ ದಾಖಲೆ ಮಟ್ಟಕ್ಕೇರಿದ ಉಷ್ಣಾಂಶ; ನೀರಲ್ಲಿ ಮುಳುಗಿ ಸತ್ತ ಜನ