ವಾಷಿಂಗ್ಟನ್ ಡಿಸಿ (ಅಮೆರಿಕ) : ಅಮೆರಿಕದ ಮಿಚಿಗನ್ ರಾಜ್ಯದಲ್ಲಿ ಏರ್ ಶೋ ವೇಳೆ ವಿಮಾನವೊಂದು ಪತನಗೊಂಡಿದೆ. ಇಬ್ಬರು ಪೈಲಟ್‌ಗಳು ಪ್ಯಾರಾಚೂಟ್ ಬಳಸಿ ವಿಮಾನದಿಂದ ಹಾರಿ ಪ್ರಾಣ ಉಳಿಸಿಕೊಂಡಿದ್ದಾರೆ. ವಿಮಾನ ಅಪಾರ್ಟ್ಮೆಂಟ್ವೊಂದರ ಪಾರ್ಕಿಂಗ್ ಸ್ಥಳದಲ್ಲಿ ಬಿದ್ದು ನಾಶವಾಗಿದೆ.
ಮಿಚಗನ್ನಲ್ಲಿ ಭಾನುವಾರ ಸಂಜೆ 4 ಗಂಟೆ ಸುಮಾರಿನಲ್ಲಿ ವಿಮಾನ ಹಾರಾಟ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು. ಹಲವು ಜೆಟ್ಗಳು ಆಕಾಶದಲ್ಲಿ ಸಾಹಸ ಪ್ರದರ್ಶನ ಮಾಡುತ್ತಿದ್ದವು. ಈ ವೇಳೆ ಮಿಗ್-23 ಜೆಟ್ ಹಾರಾಟ ನಡೆಸುತ್ತಿದ್ದಾಗ ಅಚಾನಕ್ಕಾಗಿ ತಾಂತ್ರಿಕ ಸಮಸ್ಯೆಗೆ ಸಿಲುಕಿದೆ. ಪೈಲಟ್‌ಗಳು ಜೆಟ್ ಅನ್ನು ಲ್ಯಾಂಡಿಂಗ್ ಮಾಡಲು ಯತ್ನಿಸಿದರೂ, ಅದು ಹಿಡಿತಕ್ಕೆ ಸಿಕ್ಕಿಲ್ಲ. ಪತನದ ಸುಳಿವು ಸಿಕ್ಕಾಗ ಅವರು ವಿಮಾನದಿಂದ ಹಾರಿದ್ದಾರೆ.
ಜೀವ ಉಳಿಸಿದ ಪ್ಯಾರಾಚೂಟ್: ವಿಮಾನ ಹೊಯ್ದಾಡುತ್ತಾ ಭೂಮಿ ಕಡೆ ರಭಸವಾಗಿ ಬರುತ್ತಿದ್ದಾಗ ಪೈಲಟ್‌ಗಳು ಪ್ಯಾರಾಚೂಟ್ ಬಳಸಿ ವಿಮಾನದಿಂದ ಎಜೆಕ್ಟ್ ಆಗಿದ್ದಾರೆ. ನಗರದ ಸಮೀಪದ ಬೆಲ್ಲೆವಿಲ್ಲೆ ಸರೋವರದಲ್ಲಿ ಅವರು ಲ್ಯಾಂಡ್ ಆಗಿದ್ದಾರೆ ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್‌ಎಎ) ತಿಳಿಸಿದೆ. ಇಬ್ಬರು ಪೈಲಟ್ಗಳನ್ನು ರಕ್ಷಿಸಲಾಗಿದೆ. ಅವರು ಯಾವುದೇ ಗಂಭೀರ ಗಾಯಗೊಂಡಿಲ್ಲವಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ವೇಯ್ನ್ ಕೌಂಟಿ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ಅಪಾರ್ಟ್ಮೆಂಟ್ನಲ್ಲಿ ವಿಮಾನ ಪತನ: ಇನ್ನು ತಾಂತ್ರಿಕ ಸಮಸ್ಯೆಯಿಂದ ವಿಮಾನ ನಗರದ ಅಪಾರ್ಟ್ಮೆಂಟ್ವೊಂದರ ಬಳಿಕ ಪತನವಾಗಿದೆ. ಪಾರ್ಕಿಂಗ್ ಸ್ಥಳದಲ್ಲಿ ಅದು ಬಿದ್ದ ಕಾರಣ ಹಲವು ವಾಹನಗಳು ಹಾನಿಗೀಡಾಗಿವೆ. ಅಲ್ಲದೇ ಸ್ಥಳದಲ್ಲಿದ್ದ ಕಾವಲು ಸಿಬ್ಬಂದಿಯೊಬ್ಬರು ಕೂಡ ಗಾಯಗೊಂಡಿದ್ದಾರೆ. ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏರ್ ಶೋ ಸ್ಥಗಿತ: ವಿಮಾನ ಪತನದಿಂದ ಆತಂಕದ ವಾತಾವರಣ ಸೃಷ್ಟಿಯಾದ ಹಿನ್ನೆಲೆಯಲ್ಲಿ ಏರ್ ಶೋವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಸಂಘಟಕರು ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. ಯಾವುದೇ ದೊಡ್ಡ ಅವಘಢ ಸಂಭವಿಸಿಲ್ಲವಾದರೂ, ಪ್ರದರ್ಶನವನ್ನು ನಿಲ್ಲಿಸಲಾಗಿದೆ. ಜನರು ಇದಕ್ಕೆ ಸ್ಪಂದಿಸಬೇಕು ಎಂದು ಕೋರಿದ್ದಾರೆ. ಇನ್ನು ವಿಮಾನ ಪತನದ ಕಾರಣದ ಬಗ್ಗೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (ಎನ್ಟಿಬಿಸಿ) ತನಿಖೆ ನಡೆಸುತ್ತಿವೆ.
ಕಾಡ್ಗಿಚ್ಚು ನಂದಿಸುವಾಗ ವಿಮಾನ ಪತನ: ಗ್ರೀಸ್ ದೇಶದಲ್ಲಿ ಕಾಡ್ಗಿಚ್ಚು ನಂದಿಸುವಾಗ ವಿಮಾನ ಪತನವಾಗಿ ಗ್ರೀಕ್ ವಾಯುಪಡೆಯ ಇಬ್ಬರು ಪೈಲಟ್‌ಗಳು ದಾರುಣ ಅಂತ್ಯ ಕಂಡಿದ್ದರು. ಬೆಂಕಿಗೆ ನೀರು ಹಾಯಿಸುತ್ತಿರುವಾಗ ವಿಮಾನವು ಮರಕ್ಕೆ ಡಿಕ್ಕಿ ಹೊಡೆದು ಸ್ವಲ್ಪ ದೂರ ತೆರಳಿ ಪತನವಾಗಿತ್ತು.
ಅಗ್ನಿ ಶಮನ ಕಾರ್ಯಾಚರಣೆಯ ಸಂದರ್ಭದಲ್ಲಿ ವಾಟರ್ ಬಾಂಬಿಂಗ್ ವಿಮಾನವಾದ ಕೆನಡೈರ್ ಸಿಎಲ್ -215 ಪತನಗೊಂಡಿತ್ತು. ಘಟನಾ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ನಡೆಸಿದಾಗ ಪೈಲಟ್ಗಳಿಬ್ಬರ ಸುಟ್ಟು ಕರಕಲಾದ ಶವ ದೊರಕಿತ್ತು.
ಇದನ್ನೂ ಓದಿ: ಹಿಮಾಚಲದ ಸೋಲನ್‌ನಲ್ಲಿ ಮೇಘಸ್ಫೋಟ: ಒಂದೇ ಕುಟುಂಬದ 7 ಮಂದಿ ಬಲಿ, ಮೂವರು ನಾಪತ್ತೆ!