ಢಾಕಾ (ಬಾಂಗ್ಲಾದೇಶ) : ರಾಜಧಾನಿ ಢಾಕಾದ ಏಳು ಅಂತಸ್ತಿನ ಕಟ್ಟಡದಲ್ಲಿ ಭಾರಿ ಸ್ಫೋಟ ಸಂಭವಿಸಿ ಇಬ್ಬರು ಮಹಿಳೆಯರೂ ಸೇರಿ ಒಟ್ಟು 17 ಜನರು ಸಾವನ್ನಪ್ಪಿದ್ದಾರೆ. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಹಳೆ ಢಾಕಾದಲ್ಲಿ ಮಂಗಳವಾರ ಸಂಜೆ 4.50ರ ಸುಮಾರಿಗೆ (ಸ್ಥಳೀಯ ಕಾಲಮಾನ) ಘಟನೆ ನಡೆದಿದೆ ಎಂದು ಸ್ಥಳೀಯ ಪೊಲೀಸ್ ಮೂಲಗಳು ತಿಳಿಸಿವೆ.
ಹಳೆ ಢಾಕಾದ ಜನನಿಬಿಡ ಪ್ರದೇಶದಲ್ಲಿರುವ ಕಟ್ಟಡದಲ್ಲಿ ದಿಢೀರ್ ಸ್ಫೋಟ ಉಂಟಾಗಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವವರ ರಕ್ಷಣೆ ಕಾರ್ಯ ಮುಂದುವರೆದಿದೆ. ಈವರೆಗೂ 16 ಮೃತದೇಹಗಳು ಪತ್ತೆಯಾಗಿವೆ. ಗಂಭೀರವಾಗಿ ಗಾಯಗೊಂಡಿದ್ದ ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಸಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಈ ಮೂಲಕ ಸಾವಿನ ಸಂಖ್ಯೆ ಹದಿನೇಳಕ್ಕೇರಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಗ್ನಿಶಾಮಕ ಸಿಬ್ಬಂದಿ ಸೇರಿದಂತೆ ರಕ್ಷಣಾ ತಂಡಗಳು, ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಸ್ಫೋಟಕ್ಕೆ ಕಾರಣ ತಿಳಿದು ಬಂದಿಲ್ಲ. ಕಟ್ಟಡದಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾದ ಸ್ಫೋಟಕ ವಸ್ತುಗಳಿಂದ ಘಟನೆ ನಡೆದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕಟ್ಟಡದ ಅವಶೇಷಗಳಡಿ ಹೆಚ್ಚು ಜನರು ಸಿಲುಕಿಕೊಂಡಿದ್ದು, ರಕ್ಷಣೆಗಾಗಿ ಗೋಡೆಗಳನ್ನು ಕೊರೆಯಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿ ಮಾಧ್ಯಮಕ್ಕೆ ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರು ಹೇಳುವ ಪ್ರಕಾರ, "ಮೊದಲಿಗೆ ಇದು ಭೂಕಂಪನ ಎಂದೇ ಭಾವಿಸಿದ್ದೆ. ನಂತರ ಇದೊಂದು ಸ್ಪೋಟವೆಂದು ತಿಳಿಯಿತು. ತೀವ್ರತೆಗೆ ಕಟ್ಟಡದ ಮುಂಭಾಗದಲ್ಲಿ ಸೇರಿದ್ದ 20 ರಿಂದ 25 ಜನರು ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿಯೇ ರಸ್ತೆ ಮೇಲೆ ಬಿದ್ದು ಸಹಾಯಕ್ಕಾಗಿ ಕಿರುಚಾಡುತ್ತಿದ್ದರು. ಗಾಯಾಳುಗಳನ್ನು ವ್ಯಾನ್ ಮತ್ತು ಆಟೋ ರಿಕ್ಷಾಗಳಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು" ಎಂದರು.
ಅಧಿಕಾರಿ ಎಂ.ಖುರ್ಷಿದ್ ಪ್ರತಿಕ್ರಿಯಿಸಿ, "ಘಟನೆ ಹೇಗೆ ಸಂಭವಿಸಿತು ಎಂಬುದನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದೆ. ಈಗಾಗಲೇ ಬಾಂಬ್ ನಿಷ್ಕ್ರಿಯ ದಳ ಮತ್ತು ಮಿಲಿಟರಿ ಪಡೆ ಕಟ್ಟಡದೊಳಗೆ ಕಾರ್ಯಾಚರಣೆ ಕೈಗೊಂಡಿದೆ. ಈವರೆಗೂ ಕಾರಣ ತಿಳಿದು ಬಂದಿಲ್ಲ" ಎಂದು ಹೇಳಿದರು.
ಅಗ್ನಿಶಾಮಕ ದಳದ ಮಹಾನಿರ್ದೇಶಕ ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿ, "ನಮ್ಮ ಗಮನ ರಕ್ಷಣಾ ಕಾರ್ಯಾಚರಣೆಯ ಮೇಲಿದೆ. ಘಟನೆಗೆ ಸ್ಪಷ್ಟ ಕಾರಣ ತಿಳಿಯಲು ಎಲ್ಲಾ ರೀತಿಯ ಕಾರ್ಯಾಚರಣೆ ಕೈಗೊಳ್ಳಲಾಗುತ್ತಿದೆ" ಎಂದು ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಗಾಯಾಳುಗಳನ್ನು ಢಾಕಾ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಕೆಲವರಿಗೆ ತುರ್ತು ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ಗಾಯಾಳುಗಳಿಗೆ ತೀವ್ರ ರಕ್ತಸ್ರಾವವಾಗಿದ್ದು ರಕ್ತದ ಅವಶ್ಯಕತೆ ಇದೆ ಎಂದು ಆಸ್ಪತ್ರೆ ವೈದ್ಯರು ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನೇಕರು ರಕ್ತದಾನಕ್ಕಾಗಿ ಆಸ್ಪತ್ರೆಗೆ ತೆರಳುತ್ತಿದ್ದಾರೆ ಎಂದರು.
ನೆಲಮಹಡಿಯಲ್ಲಿ ಸ್ಫೋಟ ಸಂಭವಿಸಿದ್ದು, ಮೊದಲ ಎರಡು ಮಹಡಿಗಳಿಗೆ ತೀವ್ರ ಹಾನಿಯಾಗಿದೆ. ಹೀಗಾಗಿ, ಸಾಕಷ್ಟು ಮಂದಿ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ದಟ್ಟವಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಕಂಪಿಸಿದ ಭೂಮಿ; ಟರ್ಕಿಯಲ್ಲಿ ಮೃತರ ಸಂಖ್ಯೆ 47 ಸಾವಿರಕ್ಕೇರಿಕೆ