ವಾಷಿಂಗ್ಟನ್( ಅಮೆರಿಕ): ಯುನೈಟೆಡ್ ಸ್ಟೇಟ್ಸ್ ಗುಪ್ತಚರ ಅಧಿಕಾರಿಗಳು ಸಂಗ್ರಹಿಸಿದ ಹಲವಾರು ಸೂಕ್ಷ್ಮ ದಾಖಲೆಗಳ ಸೋರಿಕೆ ಪ್ರಕರಣ ಸಂಬಂಧ 21 ವರ್ಷದ ಯುವಕನನ್ನು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್(FBI) ಗುರುವಾರ ಬಂಧಿಸಿದೆ. ಬಂಧಿತನನ್ನು ಮ್ಯಾಸಚೂಸೆಟ್ಸ್ ಏರ್ ನ್ಯಾಷನಲ್ ಗಾರ್ಡ್‌ನ ಮಾಹಿತಿ ತಂತ್ರಜ್ಞಾನ ತಜ್ಞ ಜ್ಯಾಕ್ ಟೀಕ್ಸೀರಾ(21) ಎಂದು ಗುರುತಿಸಲಾಗಿದೆ.
"ಈತನ ಬಂಧನ ನಮ್ಮ ದೇಶದ ನಂಬಿಕೆಗೆ ದ್ರೋಹ ಮಾಡುವ ಮತ್ತು ನಮ್ಮ ರಾಷ್ಟ್ರೀಯ ಭದ್ರತೆಯನ್ನು ಅಪಾಯಕ್ಕೆ ಸಿಲುಕಿಸುವವರನ್ನು ಗುರುತಿಸಲು ಮತ್ತು ಹೊಣೆಗಾರರನ್ನಾಗಿ ಮಾಡಲು ನಮ್ಮ ನಿರಂತರ ಬದ್ಧತೆಯನ್ನು ಉದಾಹರಿಸುತ್ತದೆ" ಎಂದು ಎಫ್‌ಬಿಐ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಡಿಸ್ಕಾರ್ಡ್ ಎಂಬ ಸಾಮಾಜಿಕ ಮಾಧ್ಯಮದಲ್ಲಿ ದಾಖಲೆ ಸೋರಿಕೆಯಾಗಿದೆ ಎನ್ನಲಾಗಿದೆ. ಇದನ್ನು ಪೆಂಟಗನ್ "ರಾಷ್ಟ್ರೀಯ ಭದ್ರತೆಗೆ ಅತ್ಯಂತ ಗಂಭೀರ ಅಪಾಯ" ಎಂದು ಕಳವಳ ವ್ಯಕ್ತಪಡಿಸಿದೆ.
ಜ್ಯಾಕ್ ಟೀಕ್ಸೀರಾ ಯಾರು?: ವಾಷಿಂಗ್ಟನ್ ಪೋಸ್ಟ್‌ನಲ್ಲಿನ ವರದಿಯ ಪ್ರಕಾರ, ಜ್ಯಾಕ್ ಟೀಕ್ಸೀರಾ ಅವರು ಮ್ಯಾಸಚೂಸೆಟ್ಸ್ ಏರ್ ನ್ಯಾಷನಲ್ ಗಾರ್ಡ್‌ನ ಏರ್‌ಮ್ಯಾನ್ ಎಂದು ಗುರುತಿಸಲ್ಪಟ್ಟಿದ್ದಾರೆ. ಮ್ಯಾಸಚೂಸೆಟ್ಸ್‌ನ ಕೇಪ್ ಕಾಡ್‌ನಲ್ಲಿರುವ ಓಟಿಸ್ ಏರ್ ನ್ಯಾಶನಲ್ ಗಾರ್ಡ್ ಬೇಸ್‌ನಲ್ಲಿ ಅವರು ನೆಲೆಸಿದ್ದಾರೆ. "ಸೈಬರ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ಸ್ ಸ್ಪೆಷಲಿಸ್ಟ್" ಆಗಿ ಕೆಲಸ ಮಾಡುತ್ತಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಮಿಲಿಟರಿ ಸಂವಹನ ಜಾಲಗಳಿಗೆ ಕೇಬಲ್ ಮತ್ತು ಹಬ್‌ಗಳ ನಿರ್ವಹಣೆ ಸೇರಿದಂತೆ ಇತರ ಕಾರ್ಯನಿರ್ವಹಣೆಯನ್ನು ಈ ಪ್ರೊಫೈಲ್ ಐಟಿ ತಜ್ಞರನ್ನು ಹೊಂದಿದೆ. ಟೀಕ್ಸೀರಾ ಮಿಲಿಟರಿ ಕುಟುಂಬದಿಂದ ಬಂದವರು. ಕೇಪ್ ಕಾಡ್ ಟೈಮ್ಸ್‌ನ ವರದಿಯ ಪ್ರಕಾರ, ಅವರ ಮಲತಂದೆ ಅದೇ ಮಿಲಿಟರಿ ನೆಲೆ(ಮ್ಯಾಸಚೂಸೆಟ್ಸ್ ಏರ್ ನ್ಯಾಷನಲ್)ಯಲ್ಲಿ 34 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಯಾವ ದಾಖಲೆ ಸೋರಿಕೆಯಾಗಿವೆ?: ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡ ಒಂದಷ್ಟು ದಾಖಲಾತಿಗಳು ಅತ್ಯುನ್ನತ ಸುರಕ್ಷತಾ ಅನುಮತಿ ಇದ್ದವರಿಗೆ ಮಾತ್ರವೇ ಮೀಸಲಾಗಿದ್ದವು. ಈ ಮಾಹಿತಿಗಳು ಹಲವು ವಿಚಾರಗಳಿಗೆ ಸಂಬಂಧಪಟ್ಟಿವೆ. ಅವುಗಳಲ್ಲಿ ಉಕ್ರೇನ್ ಯುದ್ಧದ ಕುರಿತು ಅಮೆರಿಕದ ವಿಶ್ಲೇಷಣೆ ಮತ್ತು ಮಿತ್ರರಾಷ್ಟ್ರಗಳ ಮೇಲೆ ಅಮೆರಿಕ ಬೇಹುಗಾರಿಕೆಯ ವಿವರಗಳನ್ನು ಒಳಗೊಂಡಿವೆ. ಎಷ್ಟು ದಾಖಲೆಗಳು ಸೋರಿಕೆಯಾಗಿದೆ ಎಂಬುದಕ್ಕೆ ಸ್ಪಷ್ಟ ಉತ್ತರಗಳಿಲ್ಲ. ಅಸೋಸಿಯೇಟೆಡ್ ಪ್ರೆಸ್ ಸರಿ ಸುಮಾರು 50 ದಾಖಲೆಗಳನ್ನು ವೀಕ್ಷಿಸಿದೆ ಎಂದು ವರದಿ ಮಾಡಿದೆ.
ಸೋರಿಕೆಯಾದ ದಾಖಲಾತಿಗಳು ಎಲ್ಲಿದ್ದವು? ಕಳೆದ ಕೆಲ ವಾರಗಳ ಅವಧಿಯಲ್ಲಿ, ಸೋರಿಕೆಯಾದ ಮಾಹಿತಿಗಳು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದವು. ಬೆಲ್ಲಿಂಗ್ ಕ್ಯಾಟ್ ಎಂಬ ಸ್ವತಂತ್ರ ತನಿಖಾ ಮಾಧ್ಯಮ ಸಂಸ್ಥೆ ಈ ಕುರಿತು ತನಿಖಾ ವರದಿ ಪ್ರಕಟಿಸಿ, ಈ ದಾಖಲೆಗಳು ಮೊದಲಿಗೆ ಕಂಪ್ಯೂಟರ್ ಗೇಮ್‌ಗಳ ಅಭಿಮಾನಿಗಳ ಮೆಸೇಜಿಂಗ್ ಅಪ್ಲಿಕೇಶನ್ ಸೇರಿದಂತೆ, ಹಲವು ಅಷ್ಟೊಂದು ಜನಪ್ರಿಯವಲ್ಲದ ಜಾಲತಾಣಗಳಲ್ಲಿ ಕಾಣಿಸಿಕೊಂಡಿದ್ದವು ಎಂದಿದೆ. ಈ ದಾಖಲೆಗಳು ಒಂದು ಬಾರಿ ಗುರುತಿಸಲ್ಪಟ್ಟ ಬಳಿಕ, ಅವುಗಳನ್ನು ಅಮೆರಿಕದ ಬಲಪಂಥೀಯ ನೋಟಿಸ್ ಬೋರ್ಡ್ 4ಚಾನ್ ಹಾಗೂ ಟೆಲಿಗ್ರಾಮ್ ಆ್ಯಪ್‌ನಲ್ಲಿನ ರಷ್ಯಾ ಬೆಂಬಲಿತ ಗ್ರೂಪ್‌ಗಳಲ್ಲಿ ವಿಸ್ತೃತವಾಗಿ ಹಂಚಲಾಯಿತು.
ಆರೋಪಿ ದಾಖಲೆ ಪಡೆದದ್ದು ಹೇಗೆ?: ಸೇನಾ ಸಂವಹನ ಜಾಲಗಳನ್ನು ಪ್ರವೇಶಿಸಲು ಮತ್ತು ಅವರ ರಕ್ಷಣೆಯನ್ನು ಖಾತ್ರಿಪಡಿಸಲು ಜವಾಬ್ದಾರರಾಗಿರುವುದರಿಂದ ಸೈಬರ್ ಟ್ರಾನ್ಸ್‌ಪೋರ್ಟ್ ಸಿಸ್ಟಮ್ಸ್ ಸ್ಪೆಷಲಿಸ್ಟ್ ಟೀಕ್ಸೀರಾ ಹೆಚ್ಚಿನ ಮಟ್ಟದ ಭದ್ರತಾ ಅನುಮತಿ ಹೊಂದಿರುತ್ತಾರೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದರು.
ಮಾಹಿತಿ ಸೋರಿಕೆಗೆ ದಂಡವೇನು? ಟೀಕ್ಸೀರಾ ಅವರು ತಪ್ಪಿತಸ್ಥರಾದರೆ ಎದುರಿಸಬೇಕಾದ ದಂಡನೆ ಈ ಹಂತದಲ್ಲಿ ಅಸ್ಪಷ್ಟವಾಗಿದೆ. ಅಟಾರ್ನಿ ಜನರಲ್ ಮೆರಿಕ್ ಗಾರ್ಲ್ಯಾಂಡ್ ಅವರು ವರ್ಗೀಕೃತ ರಾಷ್ಟ್ರೀಯ ರಕ್ಷಣಾ ಮಾಹಿತಿಯನ್ನು ರವಾನಿಸಿದ ಆರೋಪ ಹೊರಿಸಿದ್ದಾರೆ. ಇದು ಬೇಹುಗಾರಿಕೆ ಕಾಯಿದೆಯಡಿ ಅಪರಾಧವಾಗಿದೆ. ಹಿರಿಯ ಅಧಿಕಾರಿಗಳು ಸಾಮಾಜಿಕ ಮಾಧ್ಯಮ ಮತ್ತು ವೆಬ್‌ಸೈಟ್‌ಗಳಿಗೆ ವರ್ಗೀಕೃತ ಮಾಹಿತಿಯ ಹರಿವನ್ನು ನಿಲ್ಲಿಸಲು ಕೆಲಸ ಮಾಡುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದಾರೆ.
ಇದನ್ನೂ ಓದಿ: ಭಾರತದ ಬಳಿಕ, ಅಮೆರಿಕದ ಗೌಪ್ಯ ದಾಖಲೆ ಟಿಕ್ಟಾಕ್ನಿಂದ ಸೋರಿಕೆ ಆರೋಪ