ಸರ್ಫ್‌ಸೈಡ್ ಬೀಚ್: ಟೆಕ್ಸಾಸ್‌ನ ಬೀಚ್ ಸೈಡ್ ನಗರದಲ್ಲಿ ಗುರುವಾರ ಎಲಿವೇಟೆಡ್ ವಾಕ್‌ವೇಯ ಒಂದು ಭಾಗ ಕುಸಿದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡ ಕನಿಷ್ಠ ಐದು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಡೌನ್‌ಟೌನ್ ಹೂಸ್ಟನ್‌ನಿಂದ ದಕ್ಷಿಣಕ್ಕೆ ಸುಮಾರು 60 ಮೈಲಿ (97 ಕಿಲೋಮೀಟರ್) ದೂರದಲ್ಲಿರುವ ಗಲ್ಫ್ ಆಫ್ ಮೆಕ್ಸಿಕೊದಲ್ಲಿರುವ ಸಣ್ಣ ನಗರವಾದ ಸರ್ಫ್‌ಸೈಡ್ ಬೀಚ್‌ನಲ್ಲಿ ಗುರುವಾರ ಮಧ್ಯಾಹ್ನ ಈ ಘಟನೆ ಸಂಭವಿಸಿದೆ.
ಸರ್ಫ್‌ಸೈಡ್ ಬೀಚ್ ಸ್ವಯಂಸೇವಕ ಅಗ್ನಿಶಾಮಕ ವಿಭಾಗದ ಸಹಾಯಕ ಮುಖ್ಯಸ್ಥ ಜಸ್ಟಿನ್ ಮಿಲ್ಸ್ ಪ್ರತಿಕ್ರಿಯಿಸಿ " ಗಂಭೀರವಾಗಿ ಗಾಯಗೊಂಡ ಕನಿಷ್ಠ ಐದು ಮಂದಿ ಸಂತ್ರಸ್ತರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಹೆಲಿಕಾಪ್ಟರ್ ಮೂಲಕ ಸಾಗಿಸಲಾಯಿತು. ಘಟನೆಯಲ್ಲಿ ಸುಮಾರು 10 ಮಂದಿ ಗಾಯಗೊಂಡಿದ್ದಾರೆ. ಈವರೆಗೆ ಗಾಯಾಳುಗಳ ಆರೋಗ್ಯ ಸ್ಥಿತಿ ನನಗೆ ತಿಳಿದಿಲ್ಲ" ಎಂದು ಮಿಲ್ಸ್ ಹೇಳಿದರು. ಸರ್ಫ್‌ಸೈಡ್ ಬೀಚ್ ಅಗ್ನಿಶಾಮಕ ದಳದವರು ಮಧ್ಯಾಹ್ನ 12:34ಕ್ಕೆ ಕರೆಗೆ ಪ್ರತಿಕ್ರಿಯಿಸಿದರು. ಆಸ್ಪತ್ರೆ ಹೆಲಿಕಾಪ್ಟರ್‌ಗಳಿಗೆ ಲ್ಯಾಂಡಿಂಗ್ ವಲಯ ಸ್ಥಾಪಿಸುವ ಜವಾಬ್ದಾರಿಯನ್ನು ಇಲಾಖೆ ವಹಿಸಿಕೊಂಡಿದೆ ಎಂದು ಅವರು ಮಾಹಿತಿ ನೀಡಿದರು.
"ಟೆಕ್ಸಾಸ್‌ನ ಬೀಚ್ ಸೈಡ್ ನಗರದಲ್ಲಿ ಗುರುವಾರ ಎತ್ತರದ ವಾಕ್‌ವೇ ಕುಸಿದಾಗ ಬೇಸಿಗೆ ಶಿಬಿರಕ್ಕೆ ಬಂದಿದ್ದ 20ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡಿದ್ದು, ಐವರನ್ನು ಹೆಲಿಕಾಪ್ಟರ್ ಮೂಲಕ ಆಸ್ಪತ್ರೆಗೆ ಸಾಗಿಸಲಾಗಿದೆ. ಯಾರ ಜೀವಕ್ಕೂ ಅಪಾಯವಿಲ್ಲ" ಎಂದು ಬ್ರಜೋರಿಯಾ ಕೌಂಟಿ ಅಧಿಕಾರಿಗಳು ತಿಳಿಸಿದ್ದಾರೆ. ಡೌನ್‌ಟೌನ್ ಹೂಸ್ಟನ್‌ನಿಂದ ದಕ್ಷಿಣಕ್ಕೆ ಸುಮಾರು 60 ಮೈಲಿ ದೂರದಲ್ಲಿರುವ ಮೆಕ್ಸಿಕೋ ಕೊಲ್ಲಿಯಲ್ಲಿರುವ ಸಣ್ಣ ನಗರವಾದ ಸರ್ಫ್‌ಸೈಡ್ ಬೀಚ್‌ನಲ್ಲಿ ವಾಕ್‌ವೇ ಕುಸಿತದ ಕಾರಣ ತನಿಖೆಯಲ್ಲಿದೆ.
ಸಂತ್ರಸ್ತರೆಲ್ಲರೂ 14 ಮತ್ತು 18 ವರ್ಷ ವಯಸ್ಸಿನವರು ಎಂದು ಬ್ರೆಜೋರಿಯಾ ಕೌಂಟಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಶರೋನ್ ಟ್ರೋವರ್ ಹೇಳಿದ್ದಾರೆ. ಹೆಲಿಕಾಪ್ಟರ್‌ನಲ್ಲಿ ಕರೆದೊಯ್ಯಲ್ಪಟ್ಟ ಐವರನ್ನು ಹೂಸ್ಟನ್‌ನ ಮೆಮೋರಿಯಲ್ ಹರ್ಮನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಇತರ ಆರು ಮಂದಿಯನ್ನು ಆ್ಯಂಬುಲೆನ್ಸ್ ಮೂಲಕ ಸ್ಥಳೀಯ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು. ಸುಮಾರು 10 ಜನರನ್ನು ಖಾಸಗಿ ವಾಹನಗಳ ಮೂಲಕ ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ಯಲಾಯಿತು ಎಂದು ಟ್ರೋವರ್ ಮಾಹಿತಿ ನೀಡಿದರು.
ಹೇಮಕುಂಡ ಹಿಮ ಕುಸಿತ.. ಐವರ ರಕ್ಷಣೆ: ಇತ್ತೀಚೆಗೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠದ ಸಮೀಪದಲ್ಲಿ ಹಿಮ ಕುಸಿತದಿಂದ ಅಪಾಯಕ್ಕೆ ಸಿಲುಕಿದ ಐವರನ್ನು ಕಾಪಾಡುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿತ್ತು. ಇಲ್ಲಿನ ಹೇಮಕುಂಡ್‌ದಲ್ಲಿ ಮಂಜುಗಡ್ಡೆ ಒಡೆದ ಪರಿಣಾಮ ಐವರು ಪ್ರಯಾಣಿಕರು ಅಪಾಯಕ್ಕೆ ಸಿಲುಕಿಕೊಂಡಿದ್ದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿತ್ತು. ರಕ್ಷಣಾ ತಂಡ ಅಪಾಯಕ್ಕೆ ಸಿಲುಕಿದ್ದ ಎಲ್ಲರನ್ನೂ ಸುರಕ್ಷಿತವಾಗಿ ಹೊರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿತ್ತು. ಅಪಾಯದಿಂದ ರಕ್ಷಿಸಲಾದ ಐವರನ್ನು ಸುರಕ್ಷಿತವಾಗಿ ಘಂಗಾರಿಯಾ ಗುರುದ್ವಾರಕ್ಕೆ ಕಳುಹಿಸಿ ಕೊಡಲಾಗಿತ್ತು.
ಇದನ್ನೂ ಓದಿ: ಹೇಮಕುಂಡ ಹಿಮ ಕುಸಿತ.. ಐವರ ರಕ್ಷಣೆ, ನಾಪತ್ತೆಯಾದ ಮಹಿಳೆಗಾಗಿ ತೀವ್ರ ಶೋಧ