ಕೈರೋ( ಈಜಿಪ್ಟ್) : ಯುದ್ಧ ಪೀಡಿತ ಗಾಜಾ ಪಟ್ಟಿಯಲ್ಲಿನ ಪ್ಯಾಲೆಸ್ಟೈನಿಯರನ್ನು ತನ್ನ ದೇಶದ ಗಡಿಯಲ್ಲಿರುವ ಸಿನಾಯ್ ಪರ್ಯಾಯ ದ್ವೀಪಕ್ಕೆ ಬಲವಂತವಾಗಿ ಸ್ಥಳಾಂತರಿಸುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಈಜಿಪ್ಟ್ ಪುನರುಚ್ಚರಿಸಿದೆ. ಸಂಸತ್ತಿನ ಅಧಿವೇಶನದಲ್ಲಿ ಮಾತನಾಡಿದ ಪ್ರಧಾನಿ ಮುಸ್ತಫಾ ಮಡ್ಬೌಲಿ, "ಪ್ಯಾಲೆಸ್ಟೈನ್ ಸಮಸ್ಯೆಗೆ ಸೂಕ್ತ ಪರಿಹಾರವಿಲ್ಲದೆ ಆ ವಿಷಯದಲ್ಲಿ ನಾವೇನೂ ಮಾಡಲಾರೆವು. ಯಾವುದೇ ಸಂದರ್ಭದಲ್ಲಿ ಈಜಿಪ್ಟ್ ಈ ಸಮಸ್ಯೆಯ ಭಾಗವಾಗಲು ಬಯಸುವುದಿಲ್ಲ" ಎಂದು ಒತ್ತಿ ಹೇಳಿದರು.
"ಈಜಿಫ್ಟ್ನ ಪ್ರದೇಶಗಳಿಗೆ ಪ್ಯಾಲೆಸ್ಟೈನಿಯರ ಸ್ಥಳಾಂತರಕ್ಕೆ ಸಂಬಂಧಿಸಿದ ಯಾವುದೇ ಸಂದರ್ಭದಲ್ಲಿ ಈಜಿಪ್ಟ್ ತನ್ನ ಗಡಿಗಳನ್ನು ರಕ್ಷಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಿದೆ" ಎಂದು ಅವರು ಹೇಳಿದರು. "ಗಾಜಾ ಪಟ್ಟಿಯಲ್ಲಿ ನಡೆಯುತ್ತಿರುವ ಅಮಾನವೀಯ ಮಿಲಿಟರಿ ಕಾರ್ಯಾಚರಣೆಗಳನ್ನು ತಕ್ಷಣ ನಿಲ್ಲಿಸದಿದ್ದರೆ ಇಡೀ ಪ್ರದೇಶದ ಭದ್ರತೆ ಮತ್ತು ಸ್ಥಿರತೆ ದುರ್ಬಲವಾಗಲಿದೆ ಮತ್ತು ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಬಹುದು" ಎಂದು ಮಡ್ಬೌಲಿ ತಿಳಿಸಿದರು.
"ಇಸ್ರೇಲ್ನೊಂದಿಗಿನ ಶಾಂತಿ ಒಪ್ಪಂದವನ್ನು ಪಾಲಿಸುವ ವಿಷಯದಲ್ಲಿ ಈಜಿಪ್ಟ್ನ ನಿಲುವು ಮೊದಲಿನಂತೆಯೇ ಇದೆ ಮತ್ತು ಪ್ರತಿಯಾಗಿ ಇಸ್ರೇಲ್ನಿಂದ, ವಿಶೇಷವಾಗಿ ಗಾಜಾ ಪಟ್ಟಿಯಲ್ಲಿ ಇಸ್ರೇಲ್ನ ಕಾರ್ಯಾಚರಣೆ ಮತ್ತು ಅದರಿಂದ ಈಜಿಪ್ಟ್ಗೆ ಎದುರಾಗಬಹುದಾದ ಪರೋಕ್ಷ ಅಪಾಯಗಳಿಗೆ ಸಂಬಂಧಿಸಿದಂತೆ ಅದೇ ರೀತಿಯ ಪ್ರತಿಕ್ರಿಯೆಯನ್ನು ಎದುರು ನೋಡುತ್ತೇವೆ" ಎಂದು ಅವರು ಹೇಳಿದರು.
ಇಸ್ರೇಲ್ - ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ ಗಾಜಾದೊಂದಿಗಿನ ಏಕೈಕ ಕ್ರಾಸಿಂಗ್ ಪಾಯಿಂಟ್ ಆಗಿರುವ ರಾಫಾ ಗಡಿ ದಾಟುವಿಕೆಯನ್ನು ಈಜಿಪ್ಟ್ ಮುಚ್ಚಿಲ್ಲ ಎಂದು ಪ್ರಧಾನಿ ಹೇಳಿದರು. ನವೆಂಬರ್ 19 ರವರೆಗೆ ಕೈರೋ 11,200 ಟನ್ ಗಿಂತ ಹೆಚ್ಚು ಸಹಾಯವನ್ನು ಗಾಜಾಗೆ ಕಳುಹಿಸಿದೆ ಮತ್ತು ಇತರ 30 ದೇಶಗಳು ಒಟ್ಟಾಗಿ 3,000 ಟನ್ ಗಳನ್ನು ನೆರವನ್ನು ಒದಗಿಸಿವೆ ಎಂದು ಪ್ರಧಾನಿ ಇದೇ ವೇಳೆ ಮಾಹಿತಿ ನೀಡಿದರು.
ಪ್ಯಾಲೆಸ್ಟೈನ್-ಇಸ್ರೇಲ್ ಸಂಘರ್ಷಕ್ಕೆ ಶಾಂತಿಯುತ ಶಾಶ್ವತ ಪರಿಹಾರದ ಈಜಿಪ್ಟ್ ದೃಷ್ಟಿಕೋನವನ್ನು ಮಡ್ಬೌಲಿ ಪುನರುಚ್ಚರಿಸಿದರು. "ಮಧ್ಯಪ್ರಾಚ್ಯದಲ್ಲಿ ಭದ್ರತೆ ಮತ್ತು ಸ್ಥಿರತೆ ಮೂಡಿಸಲು ಪೂರ್ವ ಜೆರುಸಲೇಂ ಅನ್ನು ರಾಜಧಾನಿಯಾಗಿಟ್ಟುಕೊಂಡು 1967 ರ ಗಡಿಗಳಲ್ಲಿ ಪ್ಯಾಲೆಸ್ಟೈನ್ ರಾಷ್ಟ್ರವನ್ನು ಸ್ಥಾಪಿಸುವ ದ್ವಿ-ರಾಷ್ಟ್ರ ಪರಿಹಾರ ಹೊರತುಪಡಿಸಿ ಪ್ಯಾಲೆಸ್ಟೈನ್ ಸಮಸ್ಯೆಯನ್ನು ಪರಿಹರಿಸಲು ಬೇರೆ ಯಾವುದೇ ಮಾರ್ಗವಿಲ್ಲ" ಎಂದು ಪ್ರಧಾನಿ ಹೇಳಿದರು. 1979 ರಲ್ಲಿ ಇಸ್ರೇಲ್ನೊಂದಿಗೆ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಈಜಿಪ್ಟ್, ದಶಕಗಳಿಂದ ನಡೆಯುತ್ತಿರುವ ಪ್ಯಾಲೆಸ್ಟೈನ್-ಇಸ್ರೇಲ್ ಸಂಘರ್ಷದಲ್ಲಿ ಪ್ರಮುಖ ಶಾಂತಿ ಸಂಧಾನ ರಾಷ್ಟ್ರವಾಗಿದೆ.
ಇದನ್ನೂ ಓದಿ : ಬಿನಾನ್ಸ್ ಕ್ರಿಪ್ಟೊಗೆ $4 ಬಿಲಿಯನ್ ಡಾಲರ್ ದಂಡ; ಸಿಇಒ ಹುದ್ದೆ ತೊರೆಯಲಿದ್ದಾರೆ ಝಾವೋ