ವಾಷಿಂಗ್ಟನ್, ಅಮೆರಿಕ: ಮುಂದಿನ ತಿಂಗಳು ಭಾರತದಲ್ಲಿ ಜಿ-20 ಶೃಂಗಸಭೆ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಈ ಬಾರಿ ನಡೆಯಲಿರುವ ಜಿ-20 ಶೃಂಗಸಭೆಯಲ್ಲಿ ರಷ್ಯಾ-ಉಕ್ರೇನ್ ಯುದ್ಧ ಕುರಿತು ಚರ್ಚೆಯೇ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಪ್ರಮುಖ ಆದ್ಯತೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
- " class="align-text-top noRightClick twitterSection" data="">
ಹೌದು, ರಷ್ಯಾ-ಉಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಜಿ 20 ಶೃಂಗಸಭೆಯಲ್ಲಿ ಚರ್ಚಿಸಲಾಗುವುದು ಎಂದು ಅಮೆರಿಕದ ಸ್ಟೇಟ್ ಡಿಪಾರ್ಟ್ಮೆಂಟ್ ವಕ್ತಾರ ಮ್ಯಾಥ್ಯೂ ಮಿಲ್ಲರ್ ಹೇಳಿದ್ದಾರೆ. ಉಕ್ರೇನ್ ಯುದ್ಧದ ಕುರಿತು ಚರ್ಚೆಯು ಪ್ರಪಂಚದಾದ್ಯಂತದ ನಮ್ಮ ಎಲ್ಲಾ ಸ್ನೇಹಿತರು ಮತ್ತು ಮಿತ್ರರಾಷ್ಟ್ರಗಳೊಂದಿಗೆ ನಡೆಯುತ್ತಿದೆ. ಮಿತ್ರರಾಷ್ಟ್ರಗಳೊಂದಿಗಿನ ನಮ್ಮ ಮಾತುಕತೆಯಲ್ಲಿ ಉಕ್ರೇನ್ ಯುದ್ಧದ ವಿಷಯವನ್ನು ಪ್ರಸ್ತಾಪಿಸಲಾಗುವುದು. ಇದು ನಾವು ಯಾವಾಗಲೂ ಚರ್ಚಿಸುವ ಪ್ರಮುಖ ವಿಷಯಗಳಲ್ಲಿ ಒಂದಾಗಿದೆ. ಇದು G-20 ಶೃಂಗಸಭೆಯಲ್ಲಿಯೂ ಪ್ರಮುಖ ವಿಷಯಗಳಲ್ಲಿ ಒಂದಾಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದರು.
ಭರದಿಂದ ಸಾಗಿದ ಸಿದ್ಧತೆಗಳು: ಜಿ20 ಶೃಂಗಸಭೆಗೆ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಈ ವೇಳೆ ಕೇಂದ್ರ ಸರ್ಕಾರ ಯಾವುದೇ ರೀತಿಯ ವಿಳಂಬವಾಗದಂತೆ ನೋಡಿಕೊಳ್ಳುತ್ತಿದೆ. ಪ್ರಧಾನಮಂತ್ರಿ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರು ಜಿ 20 ಶೃಂಗಸಭೆಗೆ ಸಂಬಂಧಿಸಿದ ಸಿದ್ಧತೆಗಳ ಕುರಿತು ಮಂಗಳವಾರ ಸಭೆ ನಡೆಸಿದರು. ಬಳಿಕ ಅವರು ಶೃಂಗಸಭೆಯ ಸಿದ್ಧತೆಗಳ ಕಾರ್ಯದ ಬಗ್ಗೆ ಪರಿಶೀಲನೆ ನಡೆಸಿದರು. ಜಿ-20 ಶೃಂಗಸಭೆಗೆ ಕೇವಲ ಒಂದು ತಿಂಗಳು ಮಾತ್ರ ಕಾಲಾವಕಾಶ ಉಳಿದಿದ್ದು, ಪ್ರಧಾನಿ ಮೋದಿ ಕೂಡ ಜಿ-20 ಶೃಂಗಸಭೆಯ ಮೇಲೆ ಕಣ್ಣಿಟ್ಟಿದ್ದಾರೆ.
ಮಂಗಳವಾರ ಪ್ರಗತಿ ಮೈದಾನದಲ್ಲಿರುವ ಭಾರತ್ ಮಂಟಪದಲ್ಲಿ ನಡೆದ ಭಾರತದ ಜಿ20 ಅಧ್ಯಕ್ಷ ಸ್ಥಾನದ ಸಮನ್ವಯ ಸಮಿತಿಯ ಏಳನೇ ಸಭೆಯಲ್ಲಿ ಪ್ರಧಾನಮಂತ್ರಿ ಪ್ರಧಾನ ಕಾರ್ಯದರ್ಶಿ ಪಿಕೆ ಮಿಶ್ರಾ ಅವರು ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಶೃಂಗಸಭೆಯ ಸಿದ್ಧತೆಗಳು, ವ್ಯವಸ್ಥಾಪನಾ ಅಂಶಗಳು ಮತ್ತು ಪ್ರಗತಿಯ ಬಗ್ಗೆ ಚರ್ಚಿಸಲಾಯಿತು. ಶೆರ್ಪಾ ಮತ್ತು ಫೈನಾನ್ಸ್ ಕುರಿತು ಫಲಿತಾಂಶಗಳನ್ನು ಪರಿಶೀಲಿಸಲಾಗಿದೆ ಎಂದು ಪ್ರಧಾನಮಂತ್ರಿ ಕಾರ್ಯಾಲಯದ ಹೇಳಿಕೆ ತಿಳಿಸಿದೆ.
ಸಭೆಯಲ್ಲಿ ಹಸಿರು ಬೆಳವಣಿಗೆ, ಸುಸ್ಥಿರ ಅಭಿವೃದ್ಧಿ ಗುರಿಗಳ ವೇಗವರ್ಧನೆ, ಸುಸ್ಥಿರ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಲಿಂಗ ಸಮಾನತೆ ಮತ್ತು ಬಹುಪಕ್ಷೀಯ ಸಂಸ್ಥೆಗಳಲ್ಲಿ ಸುಧಾರಣೆಗಳನ್ನು ಸಜ್ಜುಗೊಳಿಸುವುದು ಸೇರಿದಂತೆ ಭಾರತದ ಇನ್ನಿತರ ಆದ್ಯತೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು ಎಂದು ಪ್ರಧಾನ ಮಂತ್ರಿ ಕಚೇರಿ ತಿಳಿಸಿದೆ.
ಓದಿ: BRICS: ಬ್ರಿಕ್ಸ್ ಶೃಂಗಸಭೆಗೆ ಪ್ರಧಾನಿ ಮೋದಿ ಗೈರು: ಇದು ಬರೀ ವದಂತಿ ಎಂದ ದಕ್ಷಿಣ ಆಫ್ರಿಕಾ ಸರ್ಕಾರ