ಹಾಂಕಾಂಗ್: ಜಾಗತಿಕವಾಗಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಚೀನಾದಲ್ಲಿ ಮದುವೆ ಸಂಖ್ಯೆಗಳಲ್ಲಿ ಕುಸಿತವಾಗಿದೆ ಎಂದು ಸಾರ್ವಜನಿಕ ದಾಖಲೆಗಳು ತಿಳಿಸಿವೆ. ಈ ಕುಸಿತ ದಶಕಗಳಿಂದ ನಿರಂತರವಾಗಿ ಕಂಡುಬಂದಿದೆ. ಇದರ ಜೊತೆಗೆ, ಜನನ ಪ್ರಮಾಣ ಕೂಡ ಗಣನೀಯವಾಗಿ ಕಡಿಮೆಯಾಗಿದ್ದು ಸರ್ಕಾರಕ್ಕೆ ತಲೆಬಿಸಿ ತಂದಿದೆ.
2022ರಲ್ಲಿ 6.83 ಮಿಲಿಯನ್ ಜೋಡಿಗಳು ಮದುವೆಯಾಗಿದ್ದಾರೆ ಎಂದು ಚೀನಾದ ನಾಗರಿಕ ಸಚಿವಾಲಯ ಮಾಹಿತಿ ನೀಡಿದೆ. 2021ರಲ್ಲಿ 7.63 ಮಿಲಿಯನ್ ಜನರು ಮದುವೆಯಾಗಿದ್ದು, ಸುಮಾರು ಶೇ 10.5ರಷ್ಟು ವೈವಾಹಿಕ ಸಂಬಂಧ ಕುಸಿತವಾಗಿದೆ. 1986ರ ಬಳಿಕ ಇಷ್ಟು ಪ್ರಮಾಣದ ಕುಸಿತ ಕಂಡು ಬಂದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ ಎಂದು ಸಚಿವಾಲಯ ಅಂಕಿಅಂಶ ವರದಿ ಬಿಡುಗಡೆ ಮಾಡಿದೆ.
ಈ ದತ್ತಾಂಶದ ಪ್ರಕಾರ, ಕೋವಿಡ್ ಕೂಡ ಈ ಮದುವೆ ಸಂಖ್ಯೆಗಳ ಕುಸಿತಕ್ಕೆ ಕಾರಣವಾಗಿದೆ. ಚೀನಾದಲ್ಲಿ ಕೋವಿಡ್ ಸಾಂಕ್ರಾಮಿಕ ಸಮಯ ನಿಜಕ್ಕೂ ಸವಾಲಾಗಿತ್ತು. ದೇಶದ ಅನೇಕ ನಗರಗಳು ಮತ್ತು ಜಿಲ್ಲೆಗಳು ಲಾಕ್ಡೌನ್ ಮೊರೆ ಹೋಗಿದ್ದು, ಅನೇಕ ನಿರ್ಬಂಧಗಳಿಗೆ ಜನರು ಗುರಿಯಾಗಿದ್ದರು. ಇದರಿಂದ ಈ ಪ್ರಮಾಣದಲ್ಲಿ ಗಣನೀಯ ಕುಸಿತ ಕಂಡುಬಂದಿದೆ.
2013ರಿಂದ ಈ ಮದುವೆ ಸಂಖ್ಯೆಯಲ್ಲಿ ಕುಸಿತ ದಾಖಲಿಸಿದೆ. 2013ರಲ್ಲಿ 13 ಲಕ್ಷ ಜನರು ವೈವಾಹಿಕ ಬಂಧನಕ್ಕೆ ಒಳಗಾಗಿದ್ದರು. ಅಂದರೆ ಇದು 2022ರ ಅಂಕಿಅಂಶಕ್ಕೆ ಹೋಲಿಕೆ ಮಾಡಿದರೆ ದುಪ್ಪಟ್ಟಾಗಿತ್ತು. ಆದರೆ, ಇದೀಗ ಈ ಸಂಖ್ಯೆ ದಶಕದಿಂದೀಚೆಗೆ ಇಳಿಮುಖವಾಗಿದೆ.
ಚೀನಾ ಆರ್ಥಿಕತೆಯ ಮೇಲೆ ಪರಿಣಾಮ: ಮದುವೆ ಸಂಖ್ಯೆಗಳ ಇಳಿಕೆಯು ಶಿಶುಗಳ ಜನನ ಸಂಖ್ಯೆ ಮೇಲೂ ಪರಿಣಾಮ ಬೀರುತ್ತಿದೆ. ವಿಶೇಷವಾಗಿ, ಈಗಾಗಲೇ ಬೀಜಿಂಗ್ನಲ್ಲಿ ಕಾರ್ಮಿಕ ಬಲ ಮತ್ತು ಹಿರಿಯ ನಾಗರಿಕರ ಜನಸಂಖ್ಯೆ ಹೆಚ್ಚುತ್ತಿದ್ದು, ಇದು ದೇಶದ ಆರ್ಥಿಕತೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಕಾಣುತ್ತಿದೆ ಎಂದು ತಜ್ಞರು ಅಂದಾಜಿಸಿದ್ದಾರೆ.
ಕಳೆದ 60 ವರ್ಷಗಳಲ್ಲೇ ಚೀನಾದ ಜನಸಂಖ್ಯೆ 2022ರಲ್ಲಿ ಮೊದಲ ಬಾರಿಗೆ ಇಳಿಕೆ ಕಂಡಿದೆ. 1000 ಜನರಲ್ಲಿ ಜನನದ ದರ 6.77ರಷ್ಟಿದೆ. ಚೀನಾದ ಕಮ್ಯೂನಿಸ್ಟ್ ಪಕ್ಷ ಸ್ಥಾಪನೆಯಾದ ಬಳಿಕ ಅಂದರೆ 1949ರಿಂದ ಇದೇ ಕಡಿಮೆ ಪ್ರಮಾಣ ದಾಖಲಾಗಿದೆ.
ಚೀನಾದಲ್ಲಿ ಮದುವೆ ಸಂಖ್ಯೆಗಳು ಇಳಿಕೆ ಮತ್ತು ದೇಶದಲ್ಲಿ ಮಕ್ಕಳ ಸಂಖ್ಯೆ ಕುಸಿತವನ್ನು ಚೀನಿ ಅಧಿಕಾರಿಗಳು ಗಂಭೀರವಾಗಿ ಗಮನಿಸುತ್ತಿದ್ದಾರೆ. ಇದಕ್ಕೆ ಸಾಮಾಜಿಕ ರೂಢಿ ಮತ್ತು ಸರ್ಕಾರದ ನಿಯಮಾವಳಿಗಳು ಕೂಡ ಕಾರಣವಾಗಿವೆ. ಹೀಗಾಗಿ ಮದುವೆಯಾಗದ ಜೋಡಿಗಳು ಕೂಡ ಮಗುವನ್ನು ಹೊಂದುವುದು ದೊಡ್ಡ ಸವಾಲೇ ಆಗಿದೆ.
ಯುವ ಜನರ ಮೇಲೆ ಆರ್ಥಿಕ ಒತ್ತಡ ಪರಿಣಾಮ ಬೀರುತ್ತಿದೆ. ನಿರುದ್ಯೋಗ, ಜೀವನ ನಿರ್ವಹಣೆ ಕೂಡ ಕಷ್ಟವಾಗಿರುವುದು ಕೂಡ ಸಂಬಂಧಗಳ ನಿಭಾಯಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಕುಸಿಯುತ್ತಿರುವ ಮದುವೆ ಮತ್ತು ಮಕ್ಕಳ ಸಂಖ್ಯೆ ವಿರುದ್ಧ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಸಿಎನ್ಎನ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಇದನ್ನೂ ಓದಿ: China-India crisis: ಭಾರತದ ಪತ್ರಕರ್ತರು ದೇಶ ತೊರೆಯುವಂತೆ ಚೀನಾ ಸೂಚನೆ