ತೆಹರಾನ್(ಇರಾನ್): ಇರಾನ್‌ನ ವಿವಿಧ ಪ್ರಾಂತ್ಯಗಳಲ್ಲಿ ಇತ್ತೀಚೆಗೆ ಸಂಭವಿಸಿದ ಹಠಾತ್ ಪ್ರವಾಹದಲ್ಲಿ ಕನಿಷ್ಠ 53 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನ್‌ನ ರಕ್ಷಣಾ ಮತ್ತು ಪರಿಹಾರ ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ 16 ಜನ ಕಾಣೆಯಾಗಿದ್ದಾರೆ ಎಂದು ಅಲ್ಲಿನ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ಸಾವಿರಾರು ಮಂದಿ ನಿರ್ವಸತಿಗರಾಗಿದ್ದು, ಇದುವರೆಗೆ 3,000 ಜನರಿಗೆ ತುರ್ತು ವಸತಿ ಒದಗಿಸಲಾಗಿದೆ. 1,300 ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ. ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. 3,000 ಸಿಬ್ಬಂದಿ ಒಳಗೊಂಡ 687 ರಕ್ಷಣಾ ತಂಡಗಳು ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ ಎಂದು ಸುದ್ದಿ ಸಂಸ್ಥೆ ವರದಿ ಬಿತ್ತರಿಸಿದೆ.
ಸಂಭಾವ್ಯ ಪ್ರವಾಹ ನಿರ್ವಹಿಸಲು ತಮ್ಮ ಎಲ್ಲ ವ್ಯವಸ್ಥೆಗಳನ್ನು ಸನ್ನದ್ಧವಾಗಿಡುವಂತೆ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಶುಕ್ರವಾರ ದೇಶಾದ್ಯಂತ ಸಚಿವರು, ಸಂಸ್ಥೆಗಳ ಮುಖ್ಯಸ್ಥರು ಮತ್ತು ಗವರ್ನರ್ ಜನರಲ್‌ಗಳಿಗೆ ಆದೇಶಿಸಿದ್ದಾರೆ. ಸದ್ಯದ ಪ್ರವಾಹದಿಂದಾಗಿ ಇರಾನ್‌ನ ಕೆಲವು ನಗರಗಳಲ್ಲಿ ವಿದ್ಯುತ್ ಮತ್ತು ದೂರಸಂಪರ್ಕ ಜಾಲಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿವೆ ಎಂದು ವರದಿಯಾಗಿದೆ.
ಪ್ರಸ್ತುತವಾಗಿ ಸುರಿಯುತ್ತಿರುವ ಭಾರಿ ಮಳೆ ಸೋಮವಾರದವರೆಗೆ ಮುಂದುವರಿಯುವ ನಿರೀಕ್ಷೆಯಿದೆ. ಇದುವರೆಗೆ ಇರಾನಿನ 20 ಪ್ರಾಂತ್ಯಗಳಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, 300 ಹಳ್ಳಿಗಳು ಸಂಕಷ್ಟಕ್ಕೀಡಾಗಿವೆ.
ಇದನ್ನು ಓದಿ:ಸ್ಪೇನ್ನಲ್ಲಿ ಮಂಕಿಪಾಕ್ಸ್ ಅಬ್ಬರ.. ಯುರೋಪಿಯನ್ ಯೂನಿಯನ್ ರಾಷ್ಟ್ರದಲ್ಲಿ ಮೊದಲ ಸಾವು!