ಇಸ್ಲಾಮಾಬಾದ್ (ಪಾಕಿಸ್ತಾನ) : ಕಚ್ಚಾತೈಲ ಪೂರೈಕೆಗಾಗಿ ರಷ್ಯಾ ಮತ್ತು ಪಾಕಿಸ್ತಾನ ನಡುವಿನ ಒಪ್ಪಂದಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದೆ ಮತ್ತು ಈ ನಿಟ್ಟಿನಲ್ಲಿ ಎರಡೂ ದೇಶಗಳು ದೀರ್ಘಾವಧಿಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಒಮ್ಮತಕ್ಕೆ ಬರುವ ಸಾಧ್ಯತೆಗಳು ಇಲ್ಲ ಎನ್ನಲಾಗಿದೆ. ಮಾಸ್ಕೋದಿಂದ ಇಸ್ಲಾಮಾಬಾದ್‌ಗೆ ತೈಲ ಆಮದನ್ನು ನಿರ್ದಿಷ್ಟವಾಗಿ ನಿರ್ವಹಿಸಲು ವಿಶೇಷ ಉದ್ದೇಶದ ವ್ಯವಸ್ಥೆಯೊಂದನ್ನು (SPV) ರಚಿಸಲು ಪಾಕಿಸ್ತಾನ ಮತ್ತು ರಷ್ಯಾ ಒಪ್ಪಿಕೊಂಡಿದ್ದವು.
ಆದಾಗ್ಯೂ ಪ್ರಕ್ರಿಯೆಯನ್ನು ಪ್ರಾರಂಭಿಸುವಲ್ಲಿ ಇಸ್ಲಾಮಾಬಾದ್‌ನ ವಿಳಂಬದಿಂದಾಗಿ ಮಾಸ್ಕೋ ಈಗ ದೀರ್ಘಾವಧಿಯ ಒಪ್ಪಂದ ಮಾಡಿಕೊಳ್ಳಲು ಹಿಂಜರಿಯುತ್ತಿದೆ. ವಿಶೇಷವಾಗಿ ತೈಲ ಪೂರೈಕೆಯ ಮೇಲಿನ ರಿಯಾಯಿತಿಗಳ ವಿಷಯದಲ್ಲಿ ಮಾಸ್ಕೊ ಹಿಂದೇಟು ಹಾಕುತ್ತಿದೆ. ಇಸ್ಲಾಮಾಬಾದ್ ಮತ್ತು ಮಾಸ್ಕೋ ಎರಡೂ ತಮ್ಮ ನಿಲುವುಗಳಿಗೆ ಅಂಟಿಕೊಂಡಿವೆ ಎಂದು ತೋರುತ್ತಿದೆ ಎಂದು ಒಪ್ಪಂದದ ಬಗ್ಗೆ ತಿಳಿದಿರುವ ಸರ್ಕಾರಿ ಮೂಲವೊಂದು ಹೇಳಿದೆ. ಅಂದರೆ ದೀರ್ಘಾವಧಿಯ ಒಪ್ಪಂದಕ್ಕೆ ಸಹಿ ಹಾಕುವುದು ಇನ್ನು ಮುಂದೆ ಸಾಧ್ಯವಿಲ್ಲ ಎನ್ನಲಾಗಿದೆ. ರಷ್ಯಾ ಪಾಕಿಸ್ತಾನಕ್ಕೆ ಪೂರೈಸುವ ತೈಲದ ಮೇಲೆ ನೀಡುವ ರಿಯಾಯಿತಿಗಳ ವಿಷಯದಲ್ಲಿ ಭಿನ್ನಾಭಿಪ್ರಾಯ ಉಂಟಾಗಿದೆ ಎಂದು ಮೂಲಗಳು ಹೇಳಿವೆ.
ಭಾರತಕ್ಕೆ ತೈಲ ಪೂರೈಸುತ್ತಿರುವ ಪ್ಲ್ಯಾಟ್ಸ್ ಸೂಚ್ಯಂಕದ (Platts index) ತೈಲ ಬೆಲೆಗಳ ಆಧಾರದಲ್ಲಿಯೇ ತೈಲ ನೀಡುವುದಾಗಿ ರಷ್ಯಾ ಹೇಳಿದೆ. ರಷ್ಯಾದ ತೈಲ ಬೆಲೆಗಳು ಪ್ಲ್ಯಾಟ್ಸ್ ಸೂಚ್ಯಂಕದ ಏರಿಳಿತದೊಂದಿಗೆ ಬದಲಾಗುತ್ತಿರುತ್ತವೆ ಮತ್ತು ಪಾಕಿಸ್ತಾನಕ್ಕೆ ಮುಂದಿನ ದಿನಗಳಲ್ಲಿ ಯಾವುದೇ ಶಾಶ್ವತ ರಿಯಾಯಿತಿಗಳನ್ನು ನೀಡಲಾಗುವುದಿಲ್ಲ ಎಂಬುದು ಇದರ ಅರ್ಥವಾಗಿದೆ. ಪಾಕಿಸ್ತಾನದ ವಿಷಯಕ್ಕೆ ಬಂದರೆ, ಪಾಕಿಸ್ತಾನ ಸರ್ಕಾರವು ಎರಡು ಸೂತ್ರಗಳ ತೈಲ ಒಪ್ಪಂದಕ್ಕೆ ಒತ್ತಾಯಿಸುತ್ತಿದೆ.
ರಷ್ಯಾದಿಂದ ತೈಲ ಆಮದುಗಳ ಆದೇಶದೊಂದಿಗೆ ಎಸ್ಪಿವಿ ಅನ್ನು ಸ್ಥಾಪಿಸುವುದು ಪಾಕಿಸ್ತಾನದ ಮೊದಲ ಷರತ್ತಾಗಿದೆ. ಅಂದರೆ ತೈಲ ಖರೀದಿಯಲ್ಲಿ ಸರ್ಕಾರದ ಹಸ್ತಕ್ಷೇಪವನ್ನು ಇದು ಸೂಚಿಸುತ್ತದೆ. ರಷ್ಯಾದ ಸಂಸ್ಥೆಗಳೊಂದಿಗೆ ವಾಣಿಜ್ಯ ವ್ಯವಹಾರ ನಡೆಸಲು ತೈಲ ಕಂಪನಿಗಳಿಗೆ ಅನುಮತಿ ನೀಡಬೇಕು ಎಂಬುದು ಎರಡನೇ ಷರತ್ತಾಗಿದೆ.
ಮಧ್ಯಪ್ರಾಚ್ಯದಿಂದ ತರಿಸಿಕೊಳ್ಳುವ ಕಚ್ಚಾ ತೈಲವು ಕನಿಷ್ಠ 45 ಪ್ರತಿಶತದಷ್ಟು ಹೈ ಸ್ಪೀಡ್ ಡೀಸೆಲ್ (HSD) ಮತ್ತು 25 ಪ್ರತಿಶತ ಫರ್ನೇಸ್ ಆಯಿಲ್ ಅನ್ನು ಉತ್ಪಾದಿಸುತ್ತದೆ. ಆದರೆ, ರಷ್ಯಾದ ಕಚ್ಚಾ ತೈಲವು 32 ಪ್ರತಿಶತ ಹೈಸ್ಪೀಡ್ ಡೀಸೆಲ್ ಮತ್ತು 50 ಪ್ರತಿಶತ ಫರ್ನೇಸ್ ಆಯಿಲ್ ಅನ್ನು ಉತ್ಪಾದಿಸುವ ನಿರೀಕ್ಷೆಯಿದೆ. ಏನೇ ಆದರೂ ಪಾಕಿಸ್ತಾನದ ವಿದ್ಯುತ್ ಸ್ಥಾವರಗಳು ದ್ರವೀಕೃತ ನೈಸರ್ಗಿಕ ಅನಿಲ (LNG)ವನ್ನು ಹೆಚ್ಚಾಗಿ ಬಳಸಲು ಆರಂಭಿಸಿರುವುದರಿಂದ ಅಲ್ಲಿ ರಷ್ಯಾದ ಕಚ್ಚಾ ತೈಲಕ್ಕೆ ಬೇಡಿಕೆ ಕಡಿಮೆಯಾಗಿದೆ. ರಷ್ಯಾದ ತೈಲಕ್ಕೆ ಪಾಕಿಸ್ತಾನದಲ್ಲಿ ಯಾವುದೇ ಮಾರುಕಟ್ಟೆ ಇಲ್ಲ ಎಂದು ತಜ್ಞರು ಹೇಳುತ್ತಾರೆ.
"ಪಾಕಿಸ್ತಾನದ ತೈಲ ಸಂಸ್ಕರಣಾಗಾರಗಳು ರಷ್ಯಾದ ತೈಲವನ್ನು ಅರೇಬಿಯನ್ ಕಚ್ಚಾ ತೈಲದೊಂದಿಗೆ ಮಿಶ್ರಣ ಮಾಡುವ ಮೂಲಕ ಬಳಸಬಹುದು. ರಷ್ಯಾ ಕಚ್ಚಾ ತೈಲವು ಹೆಚ್ಚಿನ ಪ್ರಮಾಣದ ಫರ್ನೇಸ್ ಆಯಿಲ್ ಉತ್ಪಾದಿಸುವುದರಿಂದ ಪಾಕಿಸ್ತಾನದಲ್ಲಿ ರಷ್ಯಾ ತೈಲಕ್ಕೆ ಮಾರುಕಟ್ಟೆ ಇಲ್ಲ” ಎಂದು ವ್ಯಾಪಾರ ಮಾರುಕಟ್ಟೆ ತಜ್ಞ ಜಹರ್ ಭುಟ್ಟಾ ಹೇಳಿದರು.
ಇದನ್ನೂ ಓದಿ : IMEI ಸಂಖ್ಯೆಯ ಮಹತ್ವವೇನು? ಅದನ್ನು ತಿಳಿಯುವುದು ಹೇಗೆ?