ಪೇಶಾವರ (ಪಾಕಿಸ್ತಾನ): ಮದುವೆ ವಿವಾದದ ಹಿನ್ನೆಲೆಯಲ್ಲಿ ಬುಧವಾರ ಒಂದೇ ಕುಟುಂಬದ 9 ಸದಸ್ಯರನ್ನು ಅವರ ಸಂಬಂಧಿಕರೇ ಗುಂಡಿಕ್ಕಿ ಕೊಂದಿರುವ ಘಟನೆ ವಾಯುವ್ಯ ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಲಕಂದ್ ಜಿಲ್ಲೆಯ ಬತ್ಖೇಲಾ ತಹಸಿಲ್‌ನಲ್ಲಿ ಘಟನೆ ಸಂಭವಿಸಿದ್ದು, ಮೂವರು ಮಹಿಳೆಯರು ಮತ್ತು ಆರು ಮಂದಿ ಪುರುಷರು ಸೇರಿದಂತೆ ಒಂದೇ ಕುಟುಂಬದ ಒಂಬತ್ತು ಸದಸ್ಯರು ಇರುವ ಅವರ ಮನೆಗೆ ನುಗ್ಗಿದ ಸಂಬಂಧಿಕರು, ಮನಬಂದಂತೆ ಗುಂಡು ಹಾರಿಸಿ ನಿದ್ರೆಯ ಮಂಪರಲ್ಲಿರುವವರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವಿವಾಹ ಜಗಳವೇ ಹತ್ಯೆಗೆ ಕಾರಣ- ಪೊಲೀಸ್ ಮಾಹಿತಿ: ವಿವಾಹಕ್ಕೆ ಸಂಬಂಧಪಟ್ಟ ವಿವಾದವೇ ಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದು, ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಮಾಹಿತಿ ಪಡೆದ ನಂತರ, ಪ್ರಾಂತೀಯ ಅರೆಸೇನಾ ಪಡೆ ಅಪರಾಧ ಸ್ಥಳಕ್ಕೆ ತಲುಪಿತು. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಬತ್ಖೇಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಹಂತಕರನ್ನು ಬಂಧಿಸಲು ಜಿಲ್ಲೆಯ ಎಲ್ಲಾ ಪ್ರವೇಶ ಮತ್ತು ನಿರ್ಗಮನ ಕೇಂದ್ರಗಳನ್ನು ಮುಚ್ಚಲಾಗಿದೆ.
ಆರೋಪಿಗಳನ್ನು ಬಂಧಿಸುವ ಪ್ರಯತ್ನವನ್ನು ತ್ವರಿತಗೊಳಿಸುವಂತೆ ನಿಯೋಜಿತ ಮುಖ್ಯಮಂತ್ರಿ ಮುಹಮ್ಮದ್ ಅಜಂ ಖಾನ್ ಪೊಲೀಸರಿಗೆ ಸೂಚಿಸಿದ್ದಾರೆ. ''ಆರೋಪಿಗಳನ್ನು ಬಂಧಿಸಿದ ನಂತರ, ನ್ಯಾಯಾಂಗದ ಮುಂದೆ ಹಾಜರುಪಡಿಸಲಾಗುವುದು. ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲಾಗುವುದು'' ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Ukraine Russia war: 200 ರಷ್ಯಾ ಸೈನಿಕರ ಸಾವು: ಉಕ್ರೇನ್ ಮಿಲಿಟರಿ ಪ್ರತಿಪಾದನೆ
ಉಕ್ರೇನ್ ಮೇಲೆ ರಷ್ಯಾದ ಕ್ಷಿಪಣಿ ದಾಳಿ- ನಾಲ್ವರ ಸಾವು: ಉಕ್ರೇನ್ ಮೇಲೆ ರಷ್ಯಾ ದಾಳಿಯನ್ನು ತೀವ್ರಗೊಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಪೂರ್ವ ಉಕ್ರೇನ್‌ನ ಕ್ರಾಮಾಟೋರ್ಸ್ಕ್ ಮೇಲೆ ರಷ್ಯಾ ದೇಶ ದಾಳಿ ನಡೆಸಿತ್ತು. ಈ ತೀವ್ರ ದಾಳಿಯಲ್ಲಿ ಒಂದು ಮಗು ಸೇರಿದಂತೆ ನಾಲ್ಕು ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು ಎಂದು ಸ್ಥಳೀಯ ಅಧಿಕಾರಿಗಳನ್ನು ಉಲ್ಲೇಖಿಸಿ ಅಮೆರಿಕದ ಪ್ರಮುಖ ಮಾಧ್ಯಮವೊಂದು ವರದಿ ಮಾಡಿತ್ತು.
ಡೊನೆಟ್ಸ್ಕ್ ಪ್ರದೇಶದ ಮಿಲಿಟರಿ ಆಡಳಿತದ ಮುಖ್ಯಸ್ಥ ಪಾವ್ಲೋ ಕೈರಿಲೆಂಕೊ ಅವರು ಹೇಳುವ ಪ್ರಕಾರ, ಮಂಗಳವಾರ ಸ್ಥಳೀಯ ಕಾಲಮಾನ 7.30ರ ಸುಮಾರಿಗೆ ರಷ್ಯಾದಿಂದ ದಾಳಿ ನಡೆಸಲಾಗಿದೆ ಎಂದು ತಿಳಿಸಿದ್ದರು. "ರಷ್ಯಾದ ಕ್ಷಿಪಣಿ ದಾಳಿಯಿಂದ ಅಪಾರ ಸಾವು, ನೋವು ಸಂಭವಿಸಿದೆ. ಕ್ರಾಮಾಟೋರ್ಸ್ಕ್ ನಗರ ಪ್ರದೇಶವಾಗಿದೆ. ಜನದಟ್ಟಣೆಯಿಂದ ಕೂಡಿರುವುದರಿಂದ ದೊಡ್ಡ ಮಟ್ಟದ ಹಾನಿಯಾಗಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದರು ಎಂದು ಅಮೆರಿಕದ ಮಾಧ್ಯಮ ವರದಿ ಮಾಡಿತ್ತು. ರಷ್ಯಾ ನಡೆಸಿದ 2ನೇ ಕ್ಷಿಪಣಿ ದಾಳಿ ನಗರದ ಹೊರವಲಯದಲ್ಲಿರುವ ಹಳ್ಳಿಯೊಂದರ ಮೇಲೆ ನಡೆದಿದೆ ಎಂದು ಸುದ್ದಿಯಾಗಿತ್ತು.
"ರಷ್ಯಾ ಉದ್ದೇಶಪೂರ್ವಕವಾಗಿಯೇ ಜನನಿಬಿಡ ಪ್ರದೇಶಗಳನ್ನು ಗುರಿ ಮಾಡಿಕೊಂಡಿದೆ" ಎಂದು ಉಕ್ರೇನ್‌ನ ಆಂತರಿಕ ವ್ಯವಹಾರಗಳ ಸಚಿವ ಇಹೋರ್ ಕ್ಲೈಮೆಂಕೊ ಗಂಭೀರ ಆರೋಪಿಸಿದ್ದರು. ಈ ಬಗ್ಗೆ ಅವರು ತಮ್ಮ ಟೆಲಿಗ್ರಾಂ ಪೋಸ್ಟ್ನಲ್ಲಿ ಈ ವಿಚಾರ ತಿಳಿಸಿದ್ದರು. ಈ ಮಧ್ಯೆ ಉಕ್ರೇನ್ ಸರ್ಕಾರ ಮತ್ತು ಅಲ್ಲಿನ ಸ್ಥಳೀಯ ರಕ್ಷಣಾ ತಂಡಗಳು ಕ್ಷಿಪಣಿ ದಾಳಿಯಲ್ಲಿ ಗಾಯಗೊಂಡವರ ನೆರವಿಗೆ ಧಾವಿಸಿದ್ದವು. ತಕ್ಷಣ ಸ್ಥಳಕ್ಕೆ ಧಾವಿಸಿದ ಪಡೆಗಳು ತುರ್ತು ಸೇವೆಗಳನ್ನು ನೀಡಿದವು. ಗಾಯಾಳುಗಳಿಗೆ ಸಹಾಯ ಮಾಡಲಾಗಿತ್ತು.
ಇದನ್ನೂ ಓದಿ: ಪಾಕಿಸ್ತಾನ ತನ್ನ ಭಯೋತ್ಪಾದಕ ನೆಲೆಗಳನ್ನು ಶಾಶ್ವತವಾಗಿ ನಾಶಗೊಳಿಸಲಿ: ಅಮೆರಿಕ ಆಗ್ರಹ