ಬೀಜಿಂಗ್: ಚೀನಾದ ಆಡಳಿತಾರೂಢ ಕಮ್ಯುನಿಸ್ಟ್ ಪಕ್ಷವು ಈ ವರ್ಷ ನಡೆಯಲಿರುವ ತನ್ನ ನಿರ್ಣಾಯಕ ಸಮಾವೇಶಕ್ಕೆ ಮುಂಚಿತವಾಗಿ ನಿವೃತ್ತ ಕಾರ್ಯಕರ್ತರಿಗೆ ‘ನಕಾರಾತ್ಮಕ ರಾಜಕೀಯ ಭಾಷಣ’ ಮಾಡುವುದನ್ನು ನಿರ್ಬಂಧಿಸಿದೆ. ಈ ವರ್ಷದ ಕೊನೆಯಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮೂರನೇ ಅವಧಿಗೆ ಸಮ್ಮೇಳನ ಅನುಮೋದನೆ ನೀಡುವ ಸಾಧ್ಯತೆಯಿದೆ.
ಚೀನಾದ ಕಮ್ಯುನಿಸ್ಟ್ ಪಕ್ಷದ (CPC) 20ನೇ ರಾಷ್ಟ್ರೀಯ ಕಾಂಗ್ರೆಸ್ ಸಮಾವೇಶ ಮುಂದಿನ ಕೆಲವು ತಿಂಗಳುಗಳಲ್ಲಿ ನಡೆಯಲಿದೆ. ಕ್ಸಿನ್ಹುವಾ ಸುದ್ದಿ ಸಂಸ್ಥೆಯ ಪ್ರಕಾರ, ಸಿಪಿಸಿಯ ಕೇಂದ್ರ ಸಮಿತಿಯ ಕಚೇರಿಯು ‘ಹೊಸ ಯುಗದಲ್ಲಿ ನಿವೃತ್ತ ಕಾರ್ಮಿಕರಲ್ಲಿ ಪಕ್ಷ ಬಲಪಡಿಸುವುದು’ ಎಂಬ ಶೀರ್ಷಿಕೆಯ ಜೊತೆ ನಿಯಮಗಳ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ನಿವೃತ್ತ ಕಾರ್ಮಿಕರು ಪಕ್ಷದ ಅಮೂಲ್ಯ ಆಸ್ತಿಗಳು, ರಾಜಕೀಯ ಮಾರ್ಗದರ್ಶನ ಮತ್ತು ಅವರ ನಡವಳಿಕೆ ಮೇಲ್ವಿಚಾರಣೆಯನ್ನು ಹೆಚ್ಚಿಸಬೇಕು ಎಂದು ಈ ಮಾರ್ಗಸೂಚಿಗಳು ಒತ್ತಿಹೇಳುತ್ತವೆ. ಪಕ್ಷದ ಎಲ್ಲ ಇಲಾಖೆಗಳ ನಿವೃತ್ತ ಕಾರ್ಯಕರ್ತರು ಮತ್ತು ಪಕ್ಷದ ಸದಸ್ಯರು ಪಕ್ಷದ ಮಾತುಗಳನ್ನು ಆಲಿಸಿ ಮತ್ತು ಪಕ್ಷದ ನೀತಿಗಳನ್ನು ಅನುಸರಿಸಬೇಕು ಹಾಗೂ ಶಿಸ್ತು ಉಲ್ಲಂಘಿಸಿದರೆ ಗಂಭೀರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಿದೆ. ಪಕ್ಷದ ಸದಸ್ಯರು ನಿವೃತ್ತಿಯ ನಂತರ ಶಿಸ್ತು ಉಲ್ಲಂಘಿಸಬಾರದು ಎಂದು ಹೊಸ ನಿಯಮಗಳನ್ನು ತಂದಿದ್ದಾರೆ ಎಂದು ಕೇಂದ್ರ ಸಂಘಟನೆಯ ಇಲಾಖೆಯ ವಕ್ತಾರರು ಕ್ಸಿನ್ಹುವಾಗೆ ತಿಳಿಸಿದ್ದಾರೆ.
ಓದಿ: ಚೀನಾ ವಿಮಾನ ಅಪಘಾತ 'ಉದ್ದೇಶಪೂರ್ವಕ': ಬ್ಲ್ಯಾಕ್ ಬಾಕ್ಸ್ ಮಾಹಿತಿ ಆಧರಿಸಿ ವರದಿ!
ಪಕ್ಷದ ಕೇಂದ್ರ ಸಮಿತಿಯ ಸಾಮಾನ್ಯ ನೀತಿಗಳನ್ನು ಬಹಿರಂಗವಾಗಿ ಚರ್ಚಿಸುವಂತಿಲ್ಲ. ರಾಜಕೀಯ ನಕಾರಾತ್ಮಕ ಹೇಳಿಕೆಗಳನ್ನು ನೀಡಬೇಡಿ. ಕಾನೂನುಬಾಹಿರ ಸಾಮಾಜಿಕ ಸಂಘಟನೆಗಳ ಚಟುವಟಿಕೆಗಳಲ್ಲಿ ಭಾಗವಹಿಸಬೇಡಿ. ತನ್ನ ಹಿಂದಿನ ಸ್ಥಾನದ ಅಧಿಕಾರವನ್ನು ಇತರರ ಲಾಭಕ್ಕಾಗಿ ಬಳಸಬಾರದು. ಎಲ್ಲ ರೀತಿಯ ತಪ್ಪು ಮತ್ತು ಚಿಂತನೆಗಳನ್ನು ದೃಢವಾಗಿ ವಿರೋಧಿಸುವಂತೆಯೂ ಕೋರಲಾಗಿದೆ ಎಂದು ಅವರಿಗೆ ಹೇಳಲಾಗಿದೆ ಎಂದು ಹಾಂಕಾಂಗ್ ಪತ್ರಿಕೆ 'ಸೌತ್ ಚೀನಾ ಮಾರ್ನಿಂಗ್ ಪೋಸ್ಟ್' ಮಂಗಳವಾರ ವರದಿ ಮಾಡಿದೆ.
ಸಿಪಿಸಿ ಪಕ್ಷವು ದಶಕಕ್ಕೆ ಎರಡು ಬಾರಿ ನಡೆಯುವ ಕಾಂಗ್ರೆಸ್‌ಗೆ ತಯಾರಿ ನಡೆಸುತ್ತಿದೆ. ಈ ಸಮಾವೇಶವು ಅಭೂತಪೂರ್ವ ಮೂರನೇ ಅವಧಿಗೆ ಕ್ಸಿ ಅವರನ್ನು ಬೆಂಬಲಿಸುವ ನಿರೀಕ್ಷೆಯಿದೆ. 1976 ರಲ್ಲಿ ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್ ಅವರ ಮರಣದ ನಂತರ ಅಂತಹ ಬೆಂಬಲವನ್ನು ಪಡೆದ ಮೊದಲ ವ್ಯಕ್ತಿ ಕ್ಸಿ ಆಗಿದ್ದಾರೆ.
ಕ್ಸಿ ಅವರು 2012 ರಲ್ಲಿ ಅಧ್ಯಕ್ಷ ಮತ್ತು ಮಿಲಿಟರಿ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. ಆಗ ಬೃಹತ್ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ಪ್ರಾರಂಭಿಸಿದರು. ಈ ಅಭಿಯಾನದಲ್ಲಿ ಒಂದು ದಶಲಕ್ಷಕ್ಕೂ ಹೆಚ್ಚು ಅಧಿಕಾರಿಗಳನ್ನು ಶಿಕ್ಷಿಸಿದರು. ಈ ಮೂಲಕ ಕ್ಸಿ ಚೀನೀ ಜನರಿಂದ ಅಗಾಧ ಬೆಂಬಲವನ್ನು ಗಳಿಸಿದರು.