ಬೀಜಿಂಗ್: ಚೀನಾದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದ್ದು ಮತ್ತು ಮುಂಬರುವ ದಿನಗಳಲ್ಲಿ ರಾಷ್ಟ್ರೀಯ ರಜಾದಿನಗಳಿರುವ ಕಾರಣ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಮುಖ ನಗರಗಳಲ್ಲಿ ಲಾಕ್ಡೌನ್ ಘೋಷಿಸಲಾಗಿದೆ. ರಾಜಧಾನಿ ಬೀಜಿಂಗ್ ಸೇರಿದಂತೆ 33 ನಗರಗಳಲ್ಲಿ ಕಠಿಣ ನಿರ್ಬಂಧಗಳನ್ನು ಜಾರಿ ಮಾಡಲಾಗಿದೆ. ಡ್ರ್ಯಾಗನ್ ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 1,552 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ಅಲ್ಲಿನ ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ.
ಸಪ್ಟೆಂಬರ್ 10 ರಿಂದ 12 ರವರೆಗೆ ಚೀನಾದಲ್ಲಿ ಹೊಸ ವರ್ಷದ ನಂತರ ಸಾಲು ಸಾಲು ರಜೆಗಳಿದ್ದು ಸಾರ್ವಜನಿಕ ಪ್ರದೇಶದಲ್ಲಿ ಜನರು ಒಗ್ಗೂಡುವುದನ್ನು ತಪ್ಪಿಸಲು ಲಾಕ್ಡೌನ್ ಅನುಷ್ಠಾನಗೊಳಿಸಲಾಗಿದೆ. ಇದರಿಂದ ಚೀನಾದ ಆರ್ಥಿಕ ವ್ಯವಸ್ಥೆ, ಸಾರಿಗೆ ಕ್ಷೇತ್ರ, ಸಮಾಜದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. 65 ದಶಲಕ್ಷಕ್ಕೂ ಹೆಚ್ಚು ಜನ ಲಾಕ್ಡೌನ್ಗೆ ಒಳಗಾಗಲಿದ್ದಾರೆ.
ಲಾಕ್ಡೌನ್ ಹೇರಿರುವುದರಿಂದ ಕಚೇರಿಗಳು, ಶಾಲೆಗಳು ಮತ್ತು ಮನರಂಜನಾ ಸ್ಥಳಗಳನ್ನು ಮುಚ್ಚಲಾಗಿದೆ. ಅಗತ್ಯ ವಸ್ತುಗಳ ಪೂರೈಕೆಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವರ್ಕ್‌ಫ್ರಮ್ ಹೋಮ್ ಮತ್ತು ಆನ್ಲೈನ್ ತರಗತಿಗಳನ್ನು ನಡೆಸುವಂತೆ ಸೂಚಿಸಲಾಗಿದೆ. ಮೆಡಿಕಲ್ಗಳಲ್ಲಿ ಶೀತ, ಜ್ವರ ಮತ್ತು ಕೆಮ್ಮಿಗೆ ಸಂಬಂಧಿಸಿದ ಔಷಧಗಳನ್ನು ವೈದ್ಯಕೀಯ ಸಲಹೆ ಇಲ್ಲದೇ ಮಾರಾಟ ಮಾಡುವುದಕ್ಕೆ ತಡೆಯೊಡ್ಡಲಾಗಿದೆ.
ಇದನ್ನೂ ಓದಿ: ಜಿಂಬಾಬ್ವೆಯಲ್ಲಿ ದಿಢೀರ್ ಉಲ್ಭಣಗೊಂಡ 'ದಡಾರ': 700 ಮಕ್ಕಳು ಸಾವು