ನ್ಯೂಯಾರ್ಕ್ (ಯುಎಸ್) : ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 68 ನೇ ಪ್ಲೀನರಿ ಸಭೆಯಲ್ಲಿ ಮಾತನಾಡಿದ ಭಾರತದ ಖಾಯಂ ಮಿಷನ್‌ನ ಸಲಹೆಗಾರ ಪ್ರತೀಕ್ ಮಾಥುರ್ "ವೀಟೋ ಬಳಕೆ" ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಬರುವ ಆಗಸ್ಟ್ಗೆ "ವೀಟೋ ಉಪಕ್ರಮ'ವನ್ನು ಅಳವಡಿಸಿಕೊಂಡು ಒಂದು ವರ್ಷ ಕಳೆಯುತ್ತದೆ, ವೀಟೋ ಕುರಿತು ಭಾರತದ ನಿಲುವು ಸ್ಥಿರ ಮತ್ತು ಸ್ಪಷ್ಟವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲ ಐದು ಖಾಯಂ ಸದಸ್ಯರು ತಮ್ಮ ರಾಜಕೀಯ ಉದ್ದೇಶಗಳನ್ನು ಸಾಧಿಸಲು ಕಳೆದ 75 ವರ್ಷಗಳಲ್ಲಿ ವೀಟೋ ಬಳಸಿದ್ದಾರೆ ಎಂದು ವಾದಿಸಿದ ಅವರು ಬಳಿಕ, ಆಫ್ರಿಕನ್ ದೇಶಗಳನ್ನು ಉಲ್ಲೇಖಿಸಿ ಮಾತನಾಡಿದರು. " ನಮ್ಮ ಆಫ್ರಿಕನ್ ಸಹೋದರರು ತಾತ್ವಿಕವಾಗಿ ವೀಟೋವನ್ನು ರದ್ದುಗೊಳಿಸಬೇಕು ಎಂದು ಐಜಿಎನ್‌ನಲ್ಲಿ ಪದೇ ಪದೆ ಹೇಳುತ್ತಿದ್ದಾರೆ. ವೀಟೋವನ್ನು ಬಳಸುವ ಸವಲತ್ತು ಕೇವಲ ಐದು ಸದಸ್ಯ ರಾಷ್ಟ್ರಗಳಿಗೆ ಮಾತ್ರ ನೀಡಲಾಗಿದೆ. ಆಫ್ರಿಕನ್ ಸಹೋದರರು ಸೂಚಿಸಿದಂತೆ, ಇದು ರಾಜ್ಯಗಳ ಸಾರ್ವಭೌಮತ್ವ, ಸಮಾನತೆಯ ಪರಿಕಲ್ಪನೆಗೆ ವಿರುದ್ಧವಾಗಿದೆ. ಮತ್ತು ಎರಡನೆಯ ಮಹಾಯುದ್ಧದ ಮನಸ್ಥಿತಿಯನ್ನು ಮಾತ್ರ ಶಾಶ್ವತಗೊಳಿಸುತ್ತದೆ " ಎಂದು ಹೇಳಿದರು.
ಇದನ್ನೂ ಓದಿ : ವಿಶ್ವಸಂಸ್ಥೆಯ ಮೂರು ಅಗ್ರ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ರಷ್ಯಾಗೆ ಸೋಲು
ಬಳಿಕ ಭಾರತದ ಗಡಿ ಸಮಸ್ಯೆ ಕುರಿತು ಮಾತನಾಡಿದ ಅವರು, ಜಮ್ಮು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳು ಭಾರತದ ಅವಿಭಾಜ್ಯ ಅಂಗವಾಗಿ ಉಳಿದಿವೆ. ಈ ಕುರಿತು ಯಾವುದೇ ದೇಶದಿಂದ ಪ್ರಸಾರವಾಗುವ ತಪ್ಪು ಮಾಹಿತಿ, ವಾಕ್ಚಾತುರ್ಯ ಮತ್ತು ಪ್ರಚಾರವು ಸತ್ಯ ಮರೆಮಾಚಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
ಇದನ್ನೂ ಓದಿ : 2050ರ ಹೊತ್ತಿಗೆ ಭಾರತದಲ್ಲಿ ಕುಡಿಯುವ ನೀರಿನ ಕೊರತೆ ತೀವ್ರ - ವಿಶ್ವಸಂಸ್ಥೆ ವರದಿ
ವೀಟೋ ಪವರ್ ಎಂದರೇನು? : ಐದು ರಾಷ್ಟ್ರಗಳು ಅಂದರೆ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ, ಯುನೈಟೆಡ್ ಕಿಂಗ್ಡಮ್ ಮತ್ತು ಚೀನಾ, ಫ್ರಾನ್ಸ್ ಹಾಗೂ ಸೋವಿಯತ್ ರಿಪಬ್ಲಿಕ್ ವಿಶ್ವಸಂಸ್ಥೆಯ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಿವೆ. ಇದೇ ಕಾರಣಕ್ಕಾಗಿಯೇ ಈ ರಾಷ್ಟ್ರಗಳಿಗೆ ಯುನೈಟೆಡ್ ನೇಶನ್ಸ್ನಲ್ಲಿ ಕೆಲ ವಿಶೇಷಾಧಿಕಾರಗಳು ದೊರೆತಿವೆ. ಈ ಐದು ದೇಶಗಳು UNSC ಯಲ್ಲಿ ಶಾಶ್ವತ ಸದಸ್ಯ ರಾಷ್ಟ್ರಗಳಾಗಿವೆ. ಮತ್ತು 'ವೀಟೋ ಹಕ್ಕು' ಅಥವಾ ವೀಟೋ ಅಧಿಕಾರ ಎಂದು ಕರೆಯಲ್ಪಡುವ ವಿಶೇಷ ಮತದಾನದ ಅಧಿಕಾರ ಹೊಂದಿವೆ. ಇವರಲ್ಲಿ ಯಾರಾದರೂ UNSC ಯಲ್ಲಿ ನಕಾರಾತ್ಮಕ ಮತ ಚಲಾಯಿಸಿದರೆ, ಆ ನಿರ್ಧಾರವನ್ನು ಅನುಮೋದಿಸಲಾಗುವುದಿಲ್ಲ. ಅಂದರೆ, ಯುಎಸ್, ಯುನೈಟೆಡ್ ಕಿಂಗ್‌ಡಮ್, ಚೀನಾ, ಫ್ರಾನ್ಸ್ ಮತ್ತು ರಷ್ಯಾವು ಯಾವುದೇ ಯುಎನ್ಎಸ್ಸಿ ನಿರ್ಣಯಕ್ಕೆ ವಿರೋಧವಾಗಿ ಮತ ಚಲಾಯಿಸಿದರೆ, ಆ ನಿರ್ಣಯವು ಅಂಗೀಕಾರವಾಗುವುದಿಲ್ಲ.
ಇದನ್ನೂ ಓದಿ : ತಜಕಿಸ್ತಾನದ ರೆಸಿಡೆಂಟ್ ಕೋಆರ್ಡಿನೇಟರ್ ಆಗಿ ಭಾರತದ ಕೆ ಆರ್ ಪಾರ್ವತಿ ನೇಮಿಸಿದ ವಿಶ್ವಸಂಸ್ಥೆ