ಲಂಡನ್ (ಇಂಗ್ಲೆಂಡ್): ಭಾರತದಲ್ಲಿನ ಬಿಬಿಸಿ ಕಚೇರಿಗಳಲ್ಲಿನ ಆದಾಯ ತೆರಿಗೆ ವ್ಯವಹಾರಗಳನ್ನು ಯುನೈಟೆಡ್ ಕಿಂಗ್‌ಡಮ್ ಸರ್ಕಾರವು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಎಂದು ಬ್ರಿಟಿಷ್ ಸರ್ಕಾರದ ಮೂಲಗಳು ಮಂಗಳವಾರ ತಿಳಿಸಿವೆ. ಆದಾಯ ತೆರಿಗೆ ಇಲಾಖೆಯು ಮಂಗಳವಾರ ದೆಹಲಿ ಹಾಗೂ ಮುಂಬೈನ ಬಿಬಿಸಿ ಕಚೇರಿಗಳ ಮೇಲೆ ದಾಳಿ ನಡೆಸಿದೆ. ತೆರಿಗೆ ವಂಚನೆ ಆರೋಪದ ಹಿನ್ನೆಲೆ ತನಿಖೆಯ ಭಾಗವಾಗಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು. ಈ ದಾಳಿಗೆ ಸಂಬಂಧಿಸಿದಂತೆ ಯುಕೆ ಸರ್ಕಾರದಿಂದ ಯಾವುದೇ ಅಧಿಕೃತ ಹೇಳಿಕೆಗಳು ಬಂದಿಲ್ಲ. ಆದರೆ, ಭಾರತದಲ್ಲಿ ಬಿಬಿಸಿ ಕಚೇರಿಗಳಲ್ಲಿನ ತೆರಿಗೆ ವ್ಯವಹಾರಗಳನ್ನು ತೀರಾ ಹತ್ತಿರದಿಂದ ಗಮನಿಸುತ್ತಿದೆ ಎಂದು ಬ್ರಿಟಿಷ್ ಮೂಲಗಳು ಹೇಳಿವೆ.
ಬಿಬಿಸಿಯ ವಿವಾದಾತ್ಮಕ ಸಾಕ್ಷ್ಯಚಿತ್ರ: ನವದೆಹಲಿಯಲ್ಲಿ ಬಿಬಿಸಿ ಅಂಗಸಂಸ್ಥೆ ಕಂಪನಿಗಳ ಅಂತಾರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತನಿಖೆ ಮಾಡಲು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಬಿಬಿಸಿಗೆ ಈ ಹಿಂದೆ ನೋಟಿಸ್‌ಗಳನ್ನು ನೀಡಲಾಗಿತ್ತು. ಆದರೆ, ಅದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದರು. ಸದ್ಯ ಅದರ ಲಾಭವನ್ನು ಅಧಿಕಾರಿಗಳು ಗಣನೀಯವಾಗಿ ಬಳಕೆ ಮಾಡಿರುವ ಆರೋಪ ಕೇಳಿಬಂದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು 2002ರ ಗುಜರಾತ್ ಗಲಭೆಗಳ ಕುರಿತು ಬಿಬಿಸಿಯು ವಿವಾದಾತ್ಮಕ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡಿತ್ತು. ಎರಡು ವಾರಗಳ ನಂತರ ಬಿಬಿಸಿ ವಿರುದ್ಧ ಐಟಿ ಕ್ರಮ ಜರುಗಿಸಿದೆ.
ಸಂಪೂರ್ಣ ಸಹಕರಿಸುತ್ತಿದ್ದೇವೆ: "ಆದಾಯ ತೆರಿಗೆ ಅಧಿಕಾರಿಗಳು ಪ್ರಸ್ತುತ ನವದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿದ್ದಾರೆ. ನಾವು ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ" ಎಂದು ಬಿಬಿಸಿ ವಕ್ತಾರರು ತಿಳಿಸಿದ್ದಾರೆ. "ಈ ಪರಿಸ್ಥಿತಿಯನ್ನು ಸಾಧ್ಯವಾದಷ್ಟು ಬೇಗ ಪರಿಹರಿಸಲಾಗುವುದು ಎಂದು ನಾವು ಭಾವಿಸುತ್ತೇವೆ" ಎಂದು ಅವರು ಹೇಳಿದರು. ಆದಾಯ ತೆರಿಗೆ (ಐಟಿ) ಇಲಾಖೆಯು ಬಿಬಿಸಿ ತೆರಿಗೆ ಕುರಿತು ಹೆಚ್ಚಿನ ವಿವರಗಳನ್ನು ನೀಡಲಿಲ್ಲ ಎಂದು ಆರೋಪಿಸಿ, ಸ್ಥಳೀಯ ಬಿಬಿಸಿ ಕಚೇರಿ ಮೇಲೆ ದಾಳಿ ನಡೆಸಿದೆ. ಸಿಬ್ಬಂದಿಯನ್ನು ಕಚೇರಿ ಆವರಣದಿಂದ ಹೊರಹೋಗದಂತೆ ಅಥವಾ ಪ್ರವೇಶಿಸದಂತೆ ತಡೆಯಲಾಗಿದೆ. ಅವರ ಮೊಬೈಲ್ ಫೋನ್‌ಗಳು ಮತ್ತು ಇತರ ಗ್ಯಾಜೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಡಾ.ಮುಕುಲಿಕಾ ಬ್ಯಾನರ್ಜಿ ಗರಂ: ''ಮಂಗಳವಾರ ಬೆಳಗ್ಗೆ ಈ ದಾಳಿ ವಿಚಾರದಿಂದ ಯುಕೆಯಲ್ಲಿ ಆಘಾತ ಉಂಟಾಗಿದೆ. ಕಳೆದ ತಿಂಗಳು ಯುಕೆಯಲ್ಲಿ ಪ್ರಸಾರವಾದ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಎಲ್ಲರೂ ಕೂಡ ಆಘಾತಕ್ಕೊಳಗಾಗಿದ್ದಾರೆ ಹಾಗೂ ಇಂದಿನ ತೆರಿಗೆ ದಾಳಿಯು ಇತ್ತೀಚಿನ ಬಿಬಿಸಿ ಸಾಕ್ಷ್ಯಚಿತ್ರದ ಪ್ರತೀಕಾರವಾಗಿದೆ'' ಎಂದು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನ ಪ್ರಮುಖ ಲೇಖಕಿ ಮತ್ತು ಶಿಕ್ಷಣತಜ್ಞ ಡಾ.ಮುಕುಲಿಕಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
"ಬಿಬಿಸಿ ಸ್ವತಂತ್ರ ಸಾರ್ವಜನಿಕ ಪ್ರಸಾರಕವಾಗಿದೆ. ಅದು ಸಾಕ್ಷ್ಯಚಿತ್ರವನ್ನು ಹಾಕಿದರೆ, ಅದು ಬ್ರಿಟಿಷ್ ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸುವುದಿಲ್ಲ. ಸದ್ಯ ಬಿಬಿಸಿ ಪತ್ರಕರ್ತರು ವಾಡಿಕೆಯಂತೆ, ಬ್ರಿಟಿಷ್ ಪಿಎಂ ಮತ್ತು ಎಲ್ಲಾ ಚುನಾಯಿತ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ‘ಸ್ವತಂತ್ರ’ ಎನ್ನುವುದು ಪದದ ಅರ್ಥ ಅಷ್ಟೇ'' ಎಂದು ಅವರು ಹೇಳಿದರು.
ನಾಚಿಕೆಗೇಡಿನ ಕಿರುಕುಳ ನಿಲ್ಲಿಸಿ: "ಭಾರತ ಸರ್ಕಾರವು ತನ್ನ G-20 ಪ್ರೆಸಿಡೆನ್ಸಿಯ ವರ್ಷದಲ್ಲಿ ಭಾರತವನ್ನು 'ಪ್ರಜಾಪ್ರಭುತ್ವದ ತಾಯಿ' ಎಂದು ಹೇಳಿಕೊಂಡಿದೆ. ಪತ್ರಿಕಾ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಎತ್ತಿ ಹಿಡಿಯಬೇಕು. ಪತ್ರಿಕಾ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ಮೂಲ ತತ್ವಗಳಲ್ಲಿ ಒಂದಾಗಿದೆ ಎಂಬುದನ್ನು ಅರಿತುಕೊಳ್ಳಬೇಕು. ಪತ್ರಿಕಾ ಸ್ವಾತಂತ್ರ್ಯ ಹೇಗಿದೆ ಎಂದು ನಿಜವಾಗಿಯೂ ಅರ್ಥಮಾಡಿಕೊಳ್ಳಬೇಕು. ದೆಹಲಿ ಮತ್ತು ಮುಂಬೈನಲ್ಲಿ ಬಿಬಿಸಿಗೆ ನೀಡುತ್ತಿರುವ ನಾಚಿಕೆಗೇಡಿನ ಕಿರುಕುಳವನ್ನು ನಿಲ್ಲಿಸಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ದೆಹಲಿ, ಮುಂಬೈ ಕಚೇರಿಗಳ ಮೇಲೆ ಐಟಿ ದಾಳಿ: ಸಂಪೂರ್ಣವಾಗಿ ಸಹಕರಿಸುತ್ತಿದ್ದೇವೆ ಎಂದ ಬಿಬಿಸಿ