ವೆಲ್ಲಿಂಗ್ಟನ್ (ನ್ಯೂಜಿಲೆಂಡ್): ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದ ಕ್ರಿಸ್ ಹಿಪ್ಕಿನ್ಸ್ ಅವರು ನ್ಯೂಜಿಲೆಂಡ್ ದೇಶದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಯುವ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರ ದಿಢೀರ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ 44 ವರ್ಷದ ಕ್ರಿಸ್ ನಾಮನಿರ್ದೇಶನಗೊಂಡಿದ್ದರು. ಈ ಮೂಲಕ ಕ್ರಿಸ್ ದೇಶದ 41ನೇ ಪಿಎಂ ಆಗಿ ಅಧಿಕಾರ ನಡೆಸಲಿದ್ದಾರೆ.
ಮಾಜಿ ಪ್ರಧಾನಿ ಜಸಿಂಡಾ ಅರ್ಡೆರ್ನ್ ಅವರು ಔಪಚಾರಿಕವಾಗಿ ಅಧಿಕಾರ ಹಸ್ತಾಂತರ ಮಾಡಿದರು. ಕೊನೆಯ ಬಾರಿಗೆ ಪ್ರಧಾನಿಯಾಗಿ ಸಂಸತ್ತಿನಿಂದ ತೆರಳಿದ ಜಸಿಂಡಾ ಅವರ ರಾಜೀನಾಮೆ ಅಧಿಕೃತವಾಗಿ ಅಂಗೀಕಾರವಾಗಿದೆ. ನೂತನ ಪ್ರಧಾನಿ ಕ್ರಿಸ್ ಹಿಪ್ಕಿನ್ಸ್ ಅವರು ಉಪಪ್ರಧಾನಿ ಕಾರ್ಮೆಲ್ ಸೆಪುಲೋನಿ ಅವರ ಜೊತೆಗೂಡಿ ಅಲ್ಲಿನ ಕಾಲಮಾನದ ಪ್ರಕಾರ 11.20 ನಿಮಿಷಕ್ಕೆ ಪ್ರಮಾಣವಚನ ಸ್ವೀಕರಿಸಿದರು. ಬಳಿಕ ಮಾತನಾಡಿದ ಅವರು, "ಹಣದುಬ್ಬರವೆಂಬ ಸಾಂಕ್ರಾಮಿಕವನ್ನು ಸಮರ್ಥವಾಗಿ ನಿಭಾಯಿಸುವುದಕ್ಕೆ ನನ್ನ ಪ್ರಮುಖ ಆದ್ಯತೆ" ಎಂದು ಹೇಳಿದರು.
ಯಾರು ಹಿಪ್ಕಿನ್ಸ್?: ಹಿಪ್ಕಿನ್ಸ್ 2008ರಲ್ಲಿ ಸಂಸತ್ತಿಗೆ ಮೊದಲ ಬಾರಿಗೆ ಆಯ್ಕೆಯಾದರು. ನವೆಂಬರ್ 2020ರಲ್ಲಿ ಕೋವಿಡ್ ನಿಯಂತ್ರಣ ಮಂತ್ರಿಯಾಗಿ ನೇಮಕಗೊಂಡರು. ಇದಲ್ಲದೇ, ಪೊಲೀಸ್, ಶಿಕ್ಷಣ ಮತ್ತು ಸಾರ್ವಜನಿಕ ಸೇವೆಯ ಸಚಿವರಾಗಿಯೂ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.
ಜಸಿಂಡಾ ಅರ್ಡೆರ್ನ್ ಅವರ ಅನಿರೀಕ್ಷಿತ ರಾಜೀನಾಮೆಯಿಂದಾಗಿ ಲೇಬರ್ ಪಕ್ಷದ ನಾಯಕತ್ವಕ್ಕಾಗಿ ಸ್ಪರ್ಧೆ ಏರ್ಪಟ್ಟಿತ್ತು. ಈಚೆಗೆ ನಡೆದ ಸಭೆಯಲ್ಲಿ ಕ್ರಿಸ್ ಹಿಪ್ಕಿನ್ಸ್ ಅವರನ್ನು ಪಕ್ಷದ ನಾಯಕರನ್ನಾಗಿ ದೃಢೀಕರಿಸಲಾಗಿತ್ತು. ಕೊರೊನಾ ವೈರಸ್ ಸಾಂಕ್ರಾಮಿಕದ ಸಂದರ್ಭದಲ್ಲಿ ಕ್ರಿಸ್ ಅದ್ಭುತವಾಗಿ ಕೆಲಸ ಮಾಡಿದ್ದರು. ಇದು ಜನಮೆಚ್ಚುಗೆಯಲ್ಲದೇ ಅವರಿಗೆ ಪಕ್ಷದಲ್ಲೂ ಉತ್ತಮ ಸ್ಥಾನ ಕಲ್ಪಿಸಿತ್ತು.
ಲೇಬರ್ ಪಕ್ಷವು ಸದ್ಯ ಜನಾಭಿಪ್ರಾಯದಲ್ಲಿ ಹಿನ್ನಡೆ ಅನುಭವಿಸಿದೆ. ಅಪರಾಧ ಪ್ರಕರಣಗಳ ಹೆಚ್ಚಳ, ಬಡತನ ಮತ್ತು ಏರುತ್ತಿರುವ ಬೆಲೆಗಳ ನಡುವೆ ವಿರೋಧ ಪಕ್ಷಗಳು ನಿರಂತರವಾಗಿ ಟೀಕಾ ಪ್ರಹಾರ ಮಾಡುತ್ತಿವೆ. ಆಡಳಿತಾರೂಢ ಲೇಬರ್ ಪಕ್ಷಕ್ಕೆ ಸಂಕಷ್ಟದ ಹಾದಿ ಎದುರಾಗಿದೆ. ಇದೆಲ್ಲವನ್ನು ಮೆಟ್ಟಿ ನಿಂತು ಪಕ್ಷವನ್ನು ಕ್ರಿಸ್ ಮುನ್ನಡೆಸಬೇಕಿದೆ.
ಜಸಿಂಡಾ ದಿಢೀರ್ ರಾಜೀನಾಮೆ: ನ್ಯೂಜಿಲೆಂಡ್ ದೇಶದಲ್ಲಿ ನಡೆದ ಸಾಮೂಹಿಕ ಗುಂಡಿನ ದಾಳಿ ಪ್ರಕರಣ ಮತ್ತು ಕೊರೊನಾ ವೈರಸ್ ಬಿಕ್ಕಟ್ಟುಗಳನ್ನು ಪ್ರಧಾನಿಯಾಗಿ ಜಸಿಂಡಾ ಅರ್ಡೆರ್ನ್ ಅತ್ಯಂತ ದಿಟ್ಟತನ ಹಾಗೂ ಅಷ್ಟೇ ಜಾಣ್ಮೆಯಿಂದ ನಿಭಾಯಿಸಿ, ಇಡೀ ಜಗತ್ತೇ ಹಾಡಿ ಹೊಗಳುವಂತೆ ಮಾಡಿದ್ದರು. ಆದರೆ, ಜನವರಿ 19ರಂದು ದಿಢೀರ್ ರಾಜೀನಾಮೆ ಘೋಷಿಸಿದ್ದು ಅಚ್ಚರಿಗೆ ಕಾರಣವಾಗಿತ್ತು. 5 ವರ್ಷ ಪ್ರಧಾನಿಯಾಗಿ ಕೆಲಸ ಮಾಡಿದ ಜಸಿಂಡಾ ಅವರ ಉತ್ತಮ ಕಾರ್ಯದ ಮಧ್ಯೆ ದೇಶದಲ್ಲಿ ಸಾಕಷ್ಟು ಟೀಕೆಗಳನ್ನೂ ಎದುರಿಸುತ್ತಿದ್ದಾರೆ. ಹಣದುಬ್ಬರ, ಬೆಲೆ ಏರಿಕೆಯ ಬಿಸಿ ಅವರನ್ನೂ ಕಾಡಿದೆ. ಹೀಗಾಗಿ ನೊಂದು ಪ್ರಧಾನಿ ಹುದ್ದೆಗೆ ತಾವು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದರು. ಫೆಬ್ರವರಿ 7 ರಂದು ಪ್ರಧಾನಿಯಾಗಿ ತನ್ನ ಕೊನೆಯ ದಿನವಾಗಿರಲಿ ಎಂದು ನೇಪಿಯರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು.
"ನಾನು ಪ್ರಧಾನಿಯಾಗಿ ಅಧಿಕಾರದ ಆರನೇ ವರ್ಷವನ್ನು ಪ್ರವೇಶಿಸುತ್ತಿದ್ದೇನೆ. ಇಷ್ಟು ದಿನಗಳಲ್ಲಿ ಸಂಪೂರ್ಣ ಶ್ರಮ ಹಾಕಿದ್ದೇನೆ. ಇನ್ನು ಮುಂದೆ ಅಧಿಕಾರದಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಹೀಗಾಗಿ ರಾಜೀನಾಮೆ ನೀಡುತ್ತಿದ್ದೇನೆ. ಹೊಸ ಪ್ರಧಾನಿ ಆಯ್ಕೆವರೆಗೂ ಸಂಸದೆಯಾಗಿ ಮುಂದುವರಿಯುವೆ" ಎಂದು ಹೇಳಿದ್ದರು. ನ್ಯೂಜಿಲೆಂಡ್‌ನ ಮುಂದಿನ ಸಾರ್ವತ್ರಿಕ ಚುನಾವಣೆ ಇದೇ ವರ್ಷದ ಅಕ್ಟೋಬರ್ 14 ರಂದು ನಡೆಯಲಿದೆ. ಅಲ್ಲಿಯವರೆಗೆ ತಾವು ಸಂಸದೆಯಾಗಿ ಇರುವುದಾಗಿಯೂ ಘೋಷಿಸಿದ್ದರು.
ಇದನ್ನೂ ಓದಿ: ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ರಾಜೀನಾಮೆ: ಇಂಥ ನಾಯಕಿ ಭಾರತಕ್ಕೂ ಬೇಕು- ಜೈರಾಂ ರಮೇಶ್