ಬೀಜಿಂಗ್, ಚೀನಾ: ಪದಚ್ಯುತಿ, ಗೃಹಬಂಧನ, ಚೀನಾದಲ್ಲಿ ಕ್ಷಿಪ್ರಕ್ರಾಂತಿ ನಡೆಯುತ್ತಿದೆ ಎಂಬ ವದಂತಿಗಳ ಮಧ್ಯೆಯೇ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಸೆಪ್ಟೆಂಬರ್ 16 ರಂದು ನಡೆದ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯ ನಂತರ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳದೇ ಇರುವುದು ವಿವಿಧ ಊಹಾಪೋಹಗಳಿಗೆ ದಾರಿ ಮಾಡಿಕೊಟ್ಟಿತ್ತು.
ಚೀನಾದಲ್ಲಿ ಭ್ರಷ್ಟಾಚಾರವನ್ನು ಹತ್ತಿಕ್ಕಲು ಕ್ಸಿ ಜಿನ್‌ಪಿಂಗ್ ತನ್ನ ವಿರೋಧಿ ರಾಜಕಾರಣಿಗಳು ಮತ್ತು ಮಂತ್ರಿಗಳಿಗೆ ಗಲ್ಲು ಶಿಕ್ಷ ವಿಧಿಸಿದ್ದರು. ಇದಾದ ಬಳಿಕ ದೇಶದಲ್ಲಿ ಕ್ಷಿಪ್ರಕ್ರಾಂತಿ ನಡೆಯುತ್ತಿದ್ದು, ಅದರ ಭಾಗವಾಗಿ ಜಿನ್ಪಿಂಗ್ರನ್ನು ಗೃಹಬಂಧನಕ್ಕೆ ಒಳಪಡಿಸಲಾಗಿದೆ ಎಂದು ಸುದ್ದಿ ಹರಿದಾಡಿತ್ತು.
ಇದಲ್ಲದೇ, ಜಿನ್‌ಪಿಂಗ್ ಅವರನ್ನು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಅಥವಾ ಪಿಎಲ್‌ಎ ಮುಖ್ಯಸ್ಥ ಸ್ಥಾನದಿಂದ ವಜಾ ಮಾಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತ್ತು. ದಿಢೀರ್ ಆಗಿ ಜಿನ್‌ಪಿಂಗ್ ಟಿವಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅದೆಲ್ಲಾ ಊಹಾಪೋಹಳಿಗೆ ತೆರೆ ಎಳೆದಿದ್ದಾರೆ.
ಜಿನ್‌ಪಿಂಗ್ ಬಗ್ಗೆ ವದಂತಿ ಯಾಕಾಗಿತ್ತು?: ಭ್ರಷ್ಟಾಚಾರದ ಆರೋಪದ ಮೇಲೆ ಇಬ್ಬರು ಮಾಜಿ ಮಂತ್ರಿಗಳಿಗೆ ಮರಣದಂಡನೆ ಮತ್ತು ನಾಲ್ಕು ಅಧಿಕಾರಿಗಳಿಗೆ ಜೀವಾವಧಿ ಶಿಕ್ಷೆಯನ್ನು ಕ್ಸಿ ಸರ್ಕಾರ ವಿಧಿಸಿತು. ಈ ಆರು ಮಂದಿ ಜಿನ್ಪಿಂಗ್ರ ರಾಜಕೀಯ ವಿರೋಧಿ ಬಣದಲ್ಲಿದ್ದರು. ಕಮ್ಯುನಿಸ್ಟ್ ಸರ್ಕಾರ ದೇಶಾದ್ಯಂತ ಭ್ರಷ್ಟಾಚಾರ ವಿರೋಧಿ ಅಭಿಯಾನವನ್ನು ನಡೆಸುತ್ತಿದೆ. ಮಂತ್ರಿಗಳು ಮತ್ತು ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿದ್ದನ್ನು ವಿರೋಧಿ ಬಣ ಬಹುವಾಗಿ ಟೀಕಿಸಿ ಬಳಿಕ ಜಿನ್‌ಪಿಂಗ್ ಗೃಹಬಂಧನದ ಸುದ್ದಿಯನ್ನು ಹಬ್ಬಿಸಿತ್ತು.