ಬೀಜಿಂಗ್: ಕೊರೊನಾ ವೈರಸ್ ಜನ್ಮಸ್ಥಳ ಎಂದು ಪರಿಗಣಿಸಲಾದ ಚೀನಾದಲ್ಲಿ ಕೋವಿಡ್ ಮತ್ತೊಮ್ಮೆ ಆರ್ಭಟಿಸುತ್ತಿದೆ. ಶುಕ್ರವಾರವಷ್ಟೇ ದೇಶದಲ್ಲಿ 10,729 ಹೊಸ ಪ್ರಕರಣಗಳು ಬೆಳಕಿಗೆ ಬಂದಿದೆ. ಆದರೆ ಬಾಧಿತರಲ್ಲಿ ಯಾವುದೇ ರೋಗಲಕ್ಷಣಗಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚೀನಾ ಸರ್ಕಾರವು ವೈರಸ್ ಹರಡುವಿಕೆಯ ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳನ್ನು ವಿಧಿಸಿದ್ದರೂ ಮತ್ತು ಝೀರೋ ಕೋವಿಡ್ ತಂತ್ರವನ್ನು ಸಹ ಜಾರಿಗೊಳಿಸುತ್ತಿದ್ದರೂ ಸಹ ಕೊರೊನಾ ಪ್ರಕರಣಗಳನ್ನು ನಿಯಂತ್ರಿಸಲಾಗುತ್ತಿಲ್ಲ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಕಾರಣ ರಾಜಧಾನಿ ಬೀಜಿಂಗ್‌ನಲ್ಲಿ ಉದ್ಯಾನವನಗಳನ್ನು ಮುಚ್ಚಲಾಗಿದೆ.
ಗುವಾಂಗ್‌ಝೌ ಮತ್ತು ಚಾಂಗ್‌ಕಿಂಗ್ ನಗರಗಳಲ್ಲಿ ಸುಮಾರು 50 ಲಕ್ಷ ಜನರು ಲಾಕ್‌ಡೌನ್ ನಿರ್ಬಂಧಗಳಲ್ಲಿದ್ದಾರೆ. ಬೀಜಿಂಗ್‌ನಲ್ಲಿ 118 ಹೊಸ ಪ್ರಕರಣಗಳು ಬೆಳಕಿಗೆ ಬಂದಿದ್ದು ಅಲ್ಲಿನ 2.10 ಕೋಟಿ ಜನರಿಗೆ ಪ್ರತಿದಿನ ಕೋವಿಡ್ ಪರೀಕ್ಷೆ ನಡೆಸಲಾಗುತ್ತಿದೆ. ಎಲ್ಲಾ ಶಾಲೆಗಳು ಆನ್‌ಲೈನ್ ತರಗತಿಗಳಿಗೆ ಸೀಮಿತವಾಗಿವೆ. ಆಸ್ಪತ್ರೆಗಳು ತುರ್ತು ಸೇವೆಗಳಿಗೆ ಲಭ್ಯವಾಗಿವೆ. ಅಂಗಡಿಗಳು ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚಲಾಗಿದೆ. ಅಷ್ಟೇ ಅಲ್ಲ ಅಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಕಳುಹಿಸಲಾಗಿದೆ.
ಕೆಲವು ಚೀನಾದ ಜನರು ನಿರ್ಬಂಧಗಳನ್ನು ಸಹಿಸಲಾರದೆ ಪೊಲೀಸರು ಮತ್ತು ವೈದ್ಯಕೀಯ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದ ವಿಡಿಯೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗ್ತಿವೆ. ಶೂನ್ಯ ಕೋವಿಡ್ ತಂತ್ರದೊಂದಿಗೆ ಲಕ್ಷಾಂತರ ಜನರು ತಮ್ಮ ಮನೆಗಳಿಗೆ ಸೀಮಿತವಾಗಿರುವುದರಿಂದ ದೇಶದ ಆರ್ಥಿಕತೆಯ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತಿದೆ. ನಿರ್ಬಂಧಗಳ ವಿರುದ್ಧ ಸ್ಥಳೀಯ ಜನರು ವ್ಯಕ್ತಪಡಿಸಿದ ಹತಾಶೆಗೆ ಚೀನಾದ ನಾಯಕರು ಪ್ರತಿಕ್ರಿಯಿಸಿ, ಕೊರೊನಾ ಪ್ರಕರಣಗಳು ಹೆಚ್ಚಾಗಿರುವ ನಗರಗಳನ್ನು ಹೊರತುಪಡಿಸಿ ಇತರ ನಗರಗಳಲ್ಲಿ ಲಾಕ್‌ಡೌನ್ ನಿಯಮಗಳನ್ನು ಸಡಿಲಿಕೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಅಮೆರಿಕ ಮಧ್ಯಂತರ ಚುನಾವಣೆ: ಇತಿಹಾಸ ಸೃಷ್ಟಿಸಿದ ಭಾರತೀಯ ಮೂಲದ ನಬೀಲಾ ಸೈಯದ್!