ಟೆಲ್ ಅವೀವ್: ಹಮಾಸ್ ಭಯೋತ್ಪಾದಕರು ಅಪಹರಿಸಿ ಗಾಝಾದಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದ ಮತ್ತೊಬ್ಬ ಇಸ್ರೇಲಿ ಪ್ರಜೆಯ ಶವ ಪತ್ತೆಯಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಶುಕ್ರವಾರ ಪ್ರಕಟಿಸಿದೆ. ಅಕ್ಟೋಬರ್ 7ರಂದು ಸೂಪರ್ ನೋವಾ ಉತ್ಸವ ನಡೆಯುತ್ತಿದ್ದ ಸ್ಥಳದಿಂದ ಈತನನ್ನು ಅಪಹರಿಸಲಾಗಿತ್ತು.
ಐಡಿಎಫ್ ಪ್ರಕಾರ, ಮಿಲಿಟರಿ ಗುಪ್ತಚರ ನಿರ್ದೇಶನಾಲಯದ ಘಟಕ 504 ಮತ್ತು 551ನೇ ಬ್ರಿಗೇಡ್ ನಡೆಸಿದ ಕಾರ್ಯಾಚರಣೆ ಚಟುವಟಿಕೆಯ ಸಮಯದಲ್ಲಿ 28 ವರ್ಷದ ಎಲಿಯಾ ಟೊಲೆಡಾನೊ ಅವರ ಶವವನ್ನು ವಶಪಡಿಸಿಕೊಳ್ಳಲಾಗಿದೆ.
ಟೊಲೆಡಾನೊ ಅವರ ದೇಹವನ್ನು ಇಸ್ರೇಲ್ಗೆ ಮರಳಿ ತಂದು ವೈದ್ಯಕೀಯ ಪರೀಕ್ಷೆ ನಡೆಸಿದ ನಂತರ ಅವರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ. ಆದಾಗ್ಯೂ ಟೊಲೆಡಾನೊ ಸಾವಿಗೆ ಕಾರಣವೇನು ಎಂಬ ಬಗ್ಗೆ ಮಾಹಿತಿ ನೀಡಿಲ್ಲ. ಇಲ್ಲಿಯವರೆಗೆ ಗಾಝಾದಲ್ಲಿ ಟೊಲೆಡಾನೊ ಸೇರಿದಂತೆ ಆರು ಒತ್ತೆಯಾಳುಗಳ ಶವ ಪತ್ತೆಯಾಗಿವೆ.
ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ನಡೆಸಿದ್ದ ಹಮಾಸ್, ಸೂಪರ್ನೋವಾ ಉತ್ಸವ ಸ್ಥಳದಲ್ಲಿದ್ದ ಸುಮಾರು 360 ಜನರನ್ನು ಕೊಲೆಗೈದಿತ್ತು. ಅಲ್ಲದೆ ಉತ್ಸವದ ಸ್ಥಳದಿಂದ ಮೂವತ್ತಾರು ಜನರನ್ನು ಅಪಹರಿಸಿ ಕರೆದೊಯ್ಯಲಾಗಿತ್ತು. ಈವರೆಗೆ ವಿದೇಶಿ ಪ್ರಜೆಗಳು ಸೇರಿದಂತೆ 1,200ಕ್ಕೂ ಹೆಚ್ಚು ಇಸ್ರೇಲಿಗರು ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ಹೇಳಿದೆ.
ಜೆನಿನ್ನಿಂದ ಹಿಂದೆ ಸರಿದ ಇಸ್ರೇಲ್ ಪಡೆಗಳು: ವೆಸ್ಟ್ ಬ್ಯಾಂಕ್ ನಗರ ಜೆನಿನ್ ಮತ್ತು ಅದರ ನಿರಾಶ್ರಿತರ ಶಿಬಿರಗಳಿಂದ ಇಸ್ರೇಲ್ ಪಡೆಗಳು ಹಿಂದೆ ಸರಿದಿದ್ದು, ಮೂರು ದಿನಗಳ ದೊಡ್ಡ ಪ್ರಮಾಣದ ಮಿಲಿಟರಿ ಕಾರ್ಯಾಚರಣೆಯನ್ನು ಕೊನೆಗೊಳಿಸಿವೆ ಎಂದು ಪ್ಯಾಲೆಸ್ಟೈನ್ ಭದ್ರತಾ ಮೂಲಗಳು ತಿಳಿಸಿವೆ. ಕಾರ್ಯಾಚರಣೆಯ ಸಮಯದಲ್ಲಿ ಇಸ್ರೇಲಿ ಪಡೆಗಳು ನೂರಾರು ಮನೆಗಳ ಮೇಲೆ ದಾಳಿ ನಡೆಸಿ ಡಜನ್ಗಟ್ಟಲೆ ಪ್ಯಾಲೆಸ್ಟೈನಿಯರನ್ನು ಬಂಧಿಸಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಮಿಲಿಟರಿ ಕಾರ್ಯಾಚರಣೆಯಲ್ಲಿ 12 ಪ್ಯಾಲೆಸ್ಟೈನಿಯರು ಸಾವನ್ನಪ್ಪಿದ್ದಾರೆ ಎಂದು ಗಾಝಾ ಆರೋಗ್ಯ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಅಕ್ಟೋಬರ್ 7ರಿಂದ ಈಚೆಗೆ ಪೂರ್ವ ಜೆರುಸಲೇಂ ಸೇರಿದಂತೆ ಪಶ್ಚಿಮ ದಂಡೆಯಲ್ಲಿ 70 ಮಕ್ಕಳು ಸೇರಿದಂತೆ 276 ಪ್ಯಾಲೆಸ್ಟೈನಿಯರು ಸಾವನ್ನಪ್ಪಿದ್ದಾರೆ ಎಂದು ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಸಮನ್ವಯ ಕಚೇರಿ (ಒಸಿಎಚ್ಎ) ತಿಳಿಸಿದೆ. ವೆಸ್ಟ್ ಬ್ಯಾಂಕ್ನಲ್ಲಿ ಸಂಭವಿಸಿದ ಒಟ್ಟಾರೆ ಸಾವುನೋವುಗಳಲ್ಲಿ 266 ಮಂದಿ ಇಸ್ರೇಲಿ ಪಡೆಗಳಿಂದ, ಎಂಟು ಮಂದಿ ಇಸ್ರೇಲಿ ವಸಾಹತುಗಾರರಿಂದ ಕೊಲ್ಲಲ್ಪಟ್ಟಿದ್ದಾರೆ.
ಇದನ್ನೂ ಓದಿ: ಹಮಾಸ್ ಸುರಂಗಗಳಲ್ಲಿ ಸಮುದ್ರದ ನೀರು ನುಗ್ಗಿಸಲಾರಂಭಿಸಿದ ಇಸ್ರೇಲ್