ವಾಷಿಂಗ್ಟನ್( ಅಮೆರಿಕ): ಇಸ್ರೇಲ್ ಮೇಲಿನ ದಾಳಿಯನ್ನು ದುಷ್ಟತನದಿಂದ ಕೂಡಿದ್ದು ಎಂದು ಖಂಡಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ಭಯೋತ್ಪಾದಕ ಸಂಘಟನೆ ಹಮಾಸ್ ಯಹೂದಿಗಳನ್ನು ಕೊಲ್ಲುವ ಉದ್ದೇಶದಿಂದ ಈ ದಾಳಿ ನಡೆಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಮಾಸ್ ಉಗ್ರರ ದಾಳಿಯಲ್ಲಿ ಕನಿಷ್ಠ 14 ಅಮೆರಿಕನ್ ನಾಗರಿಕರು ಸೇರಿದಂತೆ ಇಸ್ರೇಲ್‌ನಲ್ಲಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅವರು ಹೇಳಿದ್ದಾರೆ. ಇಸ್ರೇಲ್‌ನಲ್ಲಿರುವ ಜನರು "ಹಮಾಸ್ ಎಂಬ ಭಯೋತ್ಪಾದಕ ಸಂಘಟನೆಯ ರಕ್ತಸಿಕ್ತ ಕೈಗಳಿಂದ ಶುದ್ಧ ಕಲಬೆರಕೆಯಿಲ್ಲದ ದುಷ್ಟತನದ ಕರಾಳತೆಯ ಅನುಭವವನ್ನು ಪಡೆದುಕೊಂಡಿದ್ದಾರೆ ಎಂದು ಬೈಡನ್ ಕಳವಳ ವ್ಯಕ್ತಪಡಿಸಿದ್ದಾರೆ. "ಪೋಷಕರು ತಮ್ಮ ಮಕ್ಕಳನ್ನು ರಕ್ಷಿಸಲು ಕೆಲವರು ಪ್ರಾಣವನ್ನೂ ಒತ್ತೆ ಇಡಬೇಕಾಯಿತು ಎಂದು ಕುಟುಕಿದರು. ದಾಳಿ ವೇಳೆ ಶಿಶುಗಳು ಕೊಲ್ಲಲ್ಪಟ್ಟವು. ಶಾಂತಿಗಾಗಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಮೇಲೆ ದಾಳಿ ಮಾಡಿ ಹತ್ಯಾಕಾಂಡವನ್ನೇ ಮಾಡಿದರು ಎಂದು ಅಮೆರಿಕ ಅಧ್ಯಕ್ಷರು ಮರುಗಿದರು.
ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಅಮೆರಿಕ ಅಧ್ಯಕ್ಷ ಬೈಡನ್ ನಾಲ್ಕು ದಿನಗಳಲ್ಲಿ ಮೂರನೇ ಬಾರಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದಾರೆ. ಈ ಮೂಲಕ ಅವರು ನಾವಿದ್ದೇವೆ ಎಂಬ ಅಭಯವನ್ನು ನೀಡಿದ್ದಾರೆ. ಇದೇ ವೇಳೆ ಅವರು, ಇಸ್ರೇಲ್ಗೆ ನೆರವಾಗಲು ಮಿಲಿಟರಿ ನೆರವು ನೀಡಲಾಗಿದೆ ಎಂದು ಘೋಷಿಸಿದ್ದಾರೆ.
ಇನ್ನು ಹಮಾಸ್ ಉಗ್ರರ ಸಾರಿರುವ ಸಮರದ ಬಗ್ಗೆ ಮಾತನಾಡಿರುವ ಇಸ್ರೇಲ್ ಅಧ್ಯಕ್ಷ ಬೆಂಜಮಿನ್ ನೆತನ್ಯಾಹು, "ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸಲಿಲ್ಲ ಆದರೆ ಅದನ್ನು ಸಮಾಪ್ತಿ ಮಾಡುತ್ತದೆ ಎಂದು ನೇರವಾದ ಎಚ್ಚರಿಕೆಯನ್ನು ಹಮಾಸ್ ಹಾಗೂ ಅದರ ಬೆಂಬಲಿಗರಿಗೆ ರವಾನಿಸಿದ್ದಾರೆ. "ಇಸ್ರೇಲ್ ಈಗ ದೇಶದ ರಕ್ಷಣೆಗೆ ಶತ್ರುಗಳ ವಿರುದ್ಧ ಯುದ್ಧ ಘೋಷಿಸಿದೆ. ನಾವು ಈ ಯುದ್ಧವನ್ನು ಬಯಸಿರಲಿಲ್ಲ. ಇದು ಅತ್ಯಂತ ಕ್ರೂರ ಮತ್ತು ಅನಾಗರಿಕ ರೀತಿಯಲ್ಲಿ ನಮ್ಮ ಮೇಲೆ ಬಲವಂತವಾಗಿ ಹೇರಲ್ಪಟ್ಟಿದೆ. ಆದರೆ ಇಸ್ರೇಲ್ ಈ ಯುದ್ಧವನ್ನು ಪ್ರಾರಂಭಿಸದಿದ್ದರೂ, ಅದನ್ನು ಮುಗಿಸುತ್ತದೆ ಎಂದು ಮಂಗಳವಾರ ಇಸ್ರೇಲ್ ಪ್ರಧಾನಿಗಳು ಘೋಷಿಸಿದ್ದರು.
ಈ ನಡುವೆ, ಅಮೆರಿಕದಲ್ಲಿ ಯಹೂದಿಗಳ ಕೇಂದ್ರಗಳ ಸುತ್ತಲೂ ಭದ್ರತೆ ಹೆಚ್ಚಿಸಲಾಗಿದೆ ಎಂದು ಅಧ್ಯಕ್ಷ ಬೈಡನ್ ಹೇಳಿದ್ದಾರೆ ."ನಾವು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಾದ್ಯಂತ ಇಸ್ರೇಲಿಗಳ ರಕ್ಷಣೆ ಮಾಡುತ್ತೇವೆ, ಅವರ ಸುರಕ್ಷತೆಗೆ ಕ್ರಮ ಕೈಗೊಳ್ಳುತ್ತೇವೆ. ಪೊಲೀಸ್ ಇಲಾಖೆಗಳು ಯಹೂದಿಗಳ ಕೇಂದ್ರಗಳ ಸುತ್ತಲೂ ಭದ್ರತೆ ಹೆಚ್ಚಿಸಿವೆ" ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಅಮೆರಿಕದಲ್ಲಿ ದ್ವೇಷಕ್ಕೆ ಯಾವುದೇ ಸ್ಥಳವಿಲ್ಲ ಎಂದು ಹೇಳಿದ್ದಾರೆ.
ಇದನ್ನು ಓದಿ: ಇಸ್ರೇಲ್ ವೃದ್ಧೆಯನ್ನು ಬರ್ಬರವಾಗಿ ಕೊಂದು ಫೇಸ್ಬುಕ್ಗೆ ವಿಡಿಯೋ ಅಪ್ಲೋಡ್; ಹಮಾಸ್ ಉಗ್ರರ ಪೈಶಾಚಿಕ ಕೃತ್ಯ