ಹಾಂಗ್ಕಾಂಗ್: ಚೀನಾದ ಪರ ಒಲವಿರುವ ಜಾನ್ ಲೀ ಅವರನ್ನು ಹಾಂಗ್ಕಾಂಗ್ನ ಮುಂದಿನ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಹೆಚ್ಚಿನ ಚೀನಾ ಪರವಾದ ಸದಸ್ಯರಿರುವ ಚುನಾವಣಾ ಸಮಿತಿಯಲ್ಲಿ ಒಟ್ಟು 1,500 ಸದಸ್ಯರಿದ್ದು, ಇದರಲ್ಲಿ ಸುಮಾರು 1,416 ಮತಗಳನ್ನು ಜಾನ್ ಲೀ ಪಡೆದಿದ್ದು, ಅವರು ಗೆಲ್ಲಲು ಕೇವಲ 751 ಮತಗಳ ಅವಶ್ಯಕತೆ ಇತ್ತು ಎಂಬುದು ಗಮನಿಸಬೇಕಾದ ವಿಚಾರ.
ಜಾನ್ ಲೀ ಹಾಂಗ್ ಕಾಂಗ್‌ನ ಭದ್ರತಾ ವಿಭಾಗದ ಮಾಜಿ ಮುಖ್ಯಸ್ಥರಾಗಿದ್ದು, ಈಗ ಮುಖ್ಯ ಕಾರ್ಯನಿರ್ವಾಹಕರಾಗಿ ಆಯ್ಕೆಯಾಗಿದ್ದಾರೆ. ಚೀನಾಗೆ ತೋರುವ ನಿಷ್ಠೆಯ ಕಾರಣಕ್ಕೆ ಅವರು ಹೆಸರುವಾಸಿಯಾಗಿದ್ದಾರೆ. ಹಾಂಗ್ ಕಾಂಗ್ ಫ್ರೀ ಪ್ರೆಸ್ (HKFP) ಪ್ರಕಾರ, ಜುಲೈ 1ರಂದು ಅವರು ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ. ಈಗ ಸದ್ಯಕ್ಕೆ ಕ್ಯಾರಿ ಲ್ಯಾಮ್ ಅವರು ಹಾಂಗ್ಕಾಂಗ್ನ ಮುಖ್ಯ ಕಾರ್ಯನಿರ್ವಾಹಕ ಹುದ್ದೆಯಲ್ಲಿದ್ದಾರೆ.
64 ವರ್ಷ ವಯಸ್ಸಿನವರಾದ ಜಾನ್ ಲೀ ಹಾಂಗ್ಕಾಂಗ್ನ ಎರಡನೇ ಅತ್ಯಂತ ಉನ್ನತ ಸ್ಥಾನವಾದ ಭದ್ರತಾ ಮುಖ್ಯಸ್ಥರ ಹುದ್ದೆಯಲ್ಲಿದ್ದರು. ನಾಲ್ಕು ವರ್ಷಗಳ ಕಾಲ ಈ ಹುದ್ದೆಯಲ್ಲಿದ್ದ ಅವರು ರಾಜಕೀಯ ವಿರೋಧವನ್ನು ಕೊನೆಗೊಳಿಸುವಲ್ಲಿ ಹಾಂಗ್ ಕಾಂಗ್ ಸರ್ಕಾರಕ್ಕೆ ಸಹಾಯ ಮಾಡಿದ್ದರು. ಸರ್ಕಾರದ ವಿರುದ್ಧ ಮಾತನಾಡುವವರನ್ನು ಜೈಲಿಗೆ ಕಳುಹಿಸುವಲ್ಲಿ ಮತ್ತು ಗಡಿಪಾರು ಮಾಡುವ ಮೂಲಕ ಸರ್ಕಾರದ ವಿರೋಧಿಗಳನ್ನು ಮಣಿಸುತ್ತಿದ್ದರು.
ಇದನ್ನೂ ಓದಿ: ಮಹಿಳೆಯರಿಗೆ 'ಅಡಿಯಿಂದ ಮುಡಿವರೆಗೆ ಬುರ್ಖಾ' ಕಡ್ಡಾಯ ಮಾಡಿದ ತಾಲಿಬಾನ್