ಕೈರೋ(ಈಜಿಪ್ಟ್): ಬಾಸ್ಕೆಟ್‌ಬಾಲ್ ಪಂದ್ಯ ನಡೆಯುತ್ತಿದ್ದಾಗ ಕಾಲ್ತುಳಿತ ಉಂಟಾಗಿ ಪ್ರೇಕ್ಷಕರ ಗ್ಯಾಲರಿ ಕುಸಿದು 27 ಜನರು ಗಾಯಗೊಂಡ ಘಟನೆ ರಾಜಧಾನಿ ಕೈರೋದಲ್ಲಿ ನಡೆದಿದೆ. ಶನಿವಾರ ಆಯೋಜಿಸಲಾಗಿದ್ದ ಸೂಪರ್ ಕಪ್ ಪಂದ್ಯದ ನಡುವೆ ಘಟನೆ ಸಂಭವಿಸಿತು. ಪ್ರೇಕ್ಷಕರ ಗ್ಯಾಲರಿಯ ಒಂದು ಭಾಗ ಕುಸಿದಿದ್ದು, ಯಾವುದೇ ಸಾವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹಸನ್ ಮೌಸ್ತಫಾ ಸ್ಪೋರ್ಟ್ಸ್ ಹಾಲ್ನಲ್ಲಿ ಕೈರೋದ ಅಲ್-ಅಹ್ಲಿ ಮತ್ತು ಅಲೆಕ್ಸಾಂಡ್ರಿಯಾದ ಇತ್ತಿಹಾದ್ ನಡುವಿನ ಸೂಪರ್ ಕಪ್ ಪಂದ್ಯ ಏರ್ಪಾಡಾಗಿತ್ತು. ಈ ಸಂದರ್ಭದಲ್ಲಿ ಪ್ರೇಕ್ಷಕರ ಸ್ಟ್ಯಾಂಡ್‌ನಲ್ಲಿ ಕಾಲ್ತುಳಿತವಾಗಿದೆ. ಪ್ರೇಕ್ಷಕರು ಕುಳಿತಿದ್ದ ಗ್ಯಾಲರಿಯ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದಿದೆ. ಇದರಿಂದಾಗಿ 27 ಜನರಿಗೆ ಮೂಳೆ ಮುರಿತ ಉಂಟಾಗಿದೆ. ಘಟನೆಯ ನಂತರ ಪಂದ್ಯವನ್ನು ರದ್ದು ಮಾಡಲಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಾಯಾಳುಗಳಲ್ಲಿ ಹೆಚ್ಚಿನವರು ಮೂಳೆ ಮುರಿತಕ್ಕೊಳಗಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯದ ವಕ್ತಾರ ಹೊಸಮ್ ಅಬ್ದೆಲ್-ಗಫರ್ ಹೇಳಿದರು. ಇತ್ತಿಹಾದ್ ಬೆಂಬಲಿಗರ ಕಾಲ್ತುಳಿತದಿಂದಾಗಿ ಸ್ಟ್ಯಾಂಡ್ ಕುಸಿದಿದೆ ಎಂದು ಕ್ರೀಡಾ ಸಚಿವಾಲಯದ ವಕ್ತಾರ ಮೊಹಮ್ಮದ್ ಫೌಜಿ ಸ್ಥಳೀಯ ಸುದ್ದಿ ವಾಹಿನಿಗೆ ತಿಳಿಸಿದ್ದಾರೆ.
2021ರಲ್ಲಿ ಈಜಿಪ್ಟ್ ಆತಿಥ್ಯ ವಹಿಸಿದ್ದ ವಿಶ್ವ ಪುರುಷರ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್‌ಗೂ ಮೂರು ವರ್ಷಗಳ ಮೊದಲು ಅಂತಾರಾಷ್ಟ್ರೀಯ ಹ್ಯಾಂಡ್‌ಬಾಲ್ ಫೆಡರೇಶನ್‌ನ ಮುಖ್ಯಸ್ಥ ಹಸನ್ ಮೌಸ್ತಫಾ ಅವರ ಹೆಸರಿನಲ್ಲಿ ಈ ಕ್ರಿಡಾಂಗಣವನ್ನು ತೆರೆಯಲಾಗಿದೆ.
ಈ ಹಿಂದೆ ನಡೆದ ದುರ್ಘಟನೆಗಳು..: 2012ರಲ್ಲಿ ಪೋರ್ಟ್ ಸೈಡ್‌ನಲ್ಲಿ ನಡೆದ ಫುಟ್ಬಾಲ್ ಪಂದ್ಯದ ವೇಳೆ ಉಂಟಾದ ಗಲಭೆಯಲ್ಲಿ 70ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದರು. 2015ರಲ್ಲಿ ಅಭಿಮಾನಿಗಳನ್ನು ಚದುರಿಸಲು ಕೈರೋ ಉಪನಗರದಲ್ಲಿರುವ ಕ್ರೀಡಾಂಗಣದ ಹೊರಗೆ ಪೊಲೀಸರು ಅಶ್ರುವಾಯು ಪ್ರಯೋಗಿಸಿದಾಗ ಉಂಟಾದ ಕಾಲ್ತುಳಿತದಲ್ಲಿ 22 ಮೃತಪಟ್ಟಿದ್ದರು.
ಇದನ್ನೂ ಓದಿ: ರಣಜಿಯಲ್ಲಿ ಮಿಂಚಿದ್ದ ಸಮರ್ಥ್ ವ್ಯಾಸ್ ಹೈದರಾಬಾದ್ ಪಾಲು.. ಇಷ್ಟು ಮೊತ್ತಕ್ಕೆ ಬಿಕರಿ