ಢಾಕಾ(ಬಾಂಗ್ಲಾದೇಶ): ಬಾಂಗ್ಲಾದೇಶದ ಮುಖ್ಯ ಚುನಾವಣಾ ಆಯುಕ್ತ ಕಾಜಿ ಹಬೀಬುಲ್ ಅವಲ್ ಅವರು 12ನೇ ಸಾರ್ವತ್ರಿಕ ಚುನಾವಣೆಯ ದಿನಾಂಕವನ್ನು ಬುಧವಾರ ಪ್ರಕಟಿಸಿದರು. 2024ರ ಜನವರಿ 7 ರಂದು ಚುನಾವಣೆ ನಿಗದಿಯಾಗಿದೆ.
90 ದಿನಗಳಲ್ಲಿ ರಾಷ್ಟ್ರೀಯ ಚುನಾವಣೆ ನಡೆಸುವ ಸಾಂವಿಧಾನಿಕ ಜವಾಬ್ದಾರಿಯನ್ನು ಅವರು ಉಲ್ಲೇಖಿಸಿದರು. ರಾಷ್ಟ್ರೀಯ ಚುನಾವಣೆಯನ್ನು ಮುಕ್ತ, ನ್ಯಾಯಸಮ್ಮತ ಮತ್ತು ನಿಷ್ಪಕ್ಷಪಾತವಾಗಿ ನಡೆಸಲು ಆಯೋಗ ಎಲ್ಲ ರೀತಿಯ ಸಿದ್ಧತೆಗಳನ್ನು ಕೈಗೊಂಡಿದೆ ಎಂದರು.
ನಾಮಪತ್ರ ಸಲ್ಲಿಕೆಗೆ ನವೆಂಬರ್ 30 ಕೊನೆಯ ದಿನಾಂಕವಾಗಿದ್ದು, ಡಿಸೆಂಬರ್ 1 ರಿಂದ 4 ರ ನಡುವೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆಯನ್ನು ಹಿಂಪಡೆಯಲು ಡಿಸೆಂಬರ್ 17 ಕೊನೆಯ ದಿನವಾಗಿದೆ. ಚುನಾವಣಾ ವೇಳಾಪಟ್ಟಿಯನ್ನು ಅನಾವರಣಗೊಳಿಸಿದ ಮುಖ್ಯ ಚುನಾವಣಾ ಆಯುಕ್ತರು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ಖಚಿತಪಡಿಸಿಕೊಳ್ಳಲು ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಪ್ರಸ್ತುತ ಸರ್ಕಾರದ ಅಧಿಕಾರಾವಧಿಯು ಪೂರ್ಣಗೊಳ್ಳುವ ದಿನವಾದ ಜನವರಿ 29, 2024 ರೊಳಗೆ ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಪೂರ್ಣಗೊಳಿಸಲು ಸಾಂವಿಧಾನಿಕ ಬಾಧ್ಯತೆಯನ್ನು ಹೊಂದಿದೆ.
ಸಂಸತ್ನ 350 ಸ್ಥಾನಗಳಿಗೆ ಚುನಾವಣೆ: 'ಜತಿಯಾ ಸಂಸದ್' ಎಂದು ಕರೆಯಲ್ಪಡುವ ಬಾಂಗ್ಲಾದೇಶ ಸಂಸತ್ತು, ಬಾಂಗ್ಲಾದೇಶದ ಸರ್ವೋಚ್ಚ ಶಾಸಕಾಂಗ ಸಂಸ್ಥೆಯಾಗಿದೆ. ಬಾಂಗ್ಲಾದೇಶದ ಪ್ರಸ್ತುತ ಸಂಸತ್ತು 350 ಸ್ಥಾನಗಳನ್ನು ಹೊಂದಿದೆ. ಇದರಲ್ಲಿ ಮಹಿಳೆಯರಿಗೆ ಪ್ರತ್ಯೇಕವಾಗಿ 50 ಸ್ಥಾನಗಳನ್ನು ಮೀಸಲಿಡಲಾಗಿದೆ. ದೇಶದಾದ್ಯಂತ 42,103 ಮತಗಟ್ಟೆಗಳಲ್ಲಿರುವ ಒಟ್ಟು 11,96,91,633 ಮತದಾರರು 12ನೇ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕು ಹೊಂದಿದ್ದಾರೆ. 11ನೇ ಸಂಸತ್ತಿನ ಚುನಾವಣೆ 2018ರ ಡಿಸೆಂಬರ್ 30ರಂದು ನಡೆದಿತ್ತು.
ಇದನ್ನೂ ಓದಿ: ಇಸ್ರೇಲ್ 'ಭಯೋತ್ಪಾದಕ ರಾಷ್ಟ್ರ'ವೆಂದ ಟರ್ಕಿ ಅಧ್ಯಕ್ಷ: ತಿರುಗೇಟು ಕೊಟ್ಟ ಇಸ್ರೇಲ್ ಪ್ರಧಾನಿ