ಗಾಝಾ : ಗಾಝಾ ಪಟ್ಟಿಯಿಂದ ಸರಕು ರಫ್ತು ಮಾಡುವುದನ್ನು ಮಂಗಳವಾರದಿಂದ ಮತ್ತು ಮುಂದಿನ ಸೂಚನೆಯವರೆಗೆ ಇಸ್ರೇಲ್ ಅಧಿಕಾರಿಗಳು ಸ್ಥಗಿತಗೊಳಿಸಲಿದ್ದಾರೆ ಎಂದು ಪ್ಯಾಲೆಸ್ಟೈನ್ ಮೂಲಗಳು ತಿಳಿಸಿವೆ. "ಪ್ಯಾಲೆಸ್ಟೇನಿಯನ್ ಅಥಾರಿಟಿಯ ಅಡಿಯಲ್ಲಿ ಕೆಲಸ ಮಾಡುವ ಸಮನ್ವಯ ಆಯೋಗಕ್ಕೆ ಇಸ್ರೇಲ್ ಈ ಬಗ್ಗೆ ಮಾಹಿತಿ ನೀಡಿದ್ದು, ಈ ಪ್ರದೇಶದ ಏಕೈಕ ವಾಣಿಜ್ಯ ಸರಕು ಪ್ರವೇಶ ದ್ವಾರವಾಗಿರುವ ಕೆರೆಮ್ ಶಲೋಮ್ ಕ್ರಾಸಿಂಗ್ ಮೂಲಕ ನಡೆಯುತ್ತಿದ್ದ ಎಲ್ಲ ಸರಕುಗಳ ರಫ್ತು ತಡೆಯಲಾಗುವುದು" ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಸರಕು ಸಾಗಣೆ ಕ್ರಾಸಿಂಗ್ ಮೂಲಕ ಇಸ್ರೇಲ್ನೊಳಗೆ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ಪ್ರಯತ್ನವೊಂದನ್ನು ಇಸ್ರೇಲ್ ವಿಫಲಗೊಳಿಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ಯಾಲೆಸ್ಟೈನ್ ಭೂಪ್ರದೇಶಗಳಲ್ಲಿ ಇಸ್ರೇಲಿ ಸರ್ಕಾರದ ಚಟುವಟಿಕೆಗಳ ಸಂಯೋಜಕ ಘಸ್ಸಾನ್ ಅಲ್ಯಾನ್ ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಗಾಝಾದಿಂದ ಬಟ್ಟೆಗಳನ್ನು ಸಾಗಿಸುವ ಟ್ರಕ್ನಲ್ಲಿ ಅಡಗಿಸಿ ಸ್ಫೋಟಕ ವಸ್ತುಗಳನ್ನು ಕಳ್ಳಸಾಗಣೆ ಮಾಡುವ ಪ್ರಯತ್ನವನ್ನು ಕ್ರಾಸಿಂಗ್ನಲ್ಲಿ ವಿಫಲಗೊಳಿಸಲಾಗಿದೆ ಎಂದು ಹೇಳಿದರು.
"ಸ್ಫೋಟಕಗಳ ಕಳ್ಳಸಾಗಣೆಯ ಪ್ರಯತ್ನದ ನಂತರ ಗಾಜಾದಿಂದ ಇಸ್ರೇಲ್ ಮತ್ತು ವೆಸ್ಟ್ ಬ್ಯಾಂಕ್ಗೆ ಸರಕುಗಳ ಸಾಗಣೆ ನಿಲ್ಲಿಸಲು ಇಸ್ರೇಲ್ ಅಧಿಕಾರಿಗಳು ನಿರ್ಧರಿಸಿದ್ದಾರೆ" ಎಂದು ಅವರು ವಿವರಿಸಿದರು. ಸರಕು ಸಾಗಣೆಯ ನಿರ್ಬಂಧವು ಪ್ಯಾಲೆಸ್ಟೈನ್ನ ಆರ್ಥಿಕ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಆದರೆ ಗಾಝಾದಲ್ಲಿನ ನಾಗರಿಕ ಮತ್ತು ಮಾನವೀಯ ಕ್ಷೇತ್ರವನ್ನು ಭಯೋತ್ಪಾದಕರು ದುರ್ಬಳಕೆ ಮಾಡಿಕೊಳ್ಳುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಇಸ್ರೇಲ್ ಕಠಿಣ ಕ್ರಮ ಕೈಗೊಂಡಿದೆ" ಎಂದು ಅಲ್ಯಾನ್ ಹೇಳಿದರು.
ಹಮಾಸ್ ಉಗ್ರಗಾಮಿ ಗುಂಪು ನಡೆಸುತ್ತಿರುವ ಆರ್ಥಿಕ ಸಚಿವಾಲಯವು ಈ ಬಗ್ಗೆ ಪತ್ರಿಕಾ ಹೇಳಿಕೆ ನಿಡಿದ್ದು, ಇಸ್ರೇಲ್ನ ನಿರ್ಧಾರವನ್ನು ಖಂಡಿಸಿದೆ. ಇಸ್ರೇಲ್ನ ಕ್ರಮ ಗಾಝಾದಲ್ಲಿ ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳಿದೆ. ಈ ನಿರ್ಧಾರವು ಪ್ರದೇಶದ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಲಿದೆ ಮತ್ತು ಆರ್ಥಿಕ ಚಟುವಟಿಕೆಗಳಿಗೆ, ವಿಶೇಷವಾಗಿ ಕೈಗಾರಿಕಾ ಮತ್ತು ಕೃಷಿ ಕ್ಷೇತ್ರಗಳಲ್ಲಿ ಹೆಚ್ಚಿನ ಅಡೆತಡೆಗಳನ್ನು ಸೃಷ್ಟಿಸುತ್ತದೆ ಎಂದು ಸಚಿವಾಲಯ ಹೇಳಿದೆ.
ಇಸ್ರೇಲ್ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ಮತ್ತು ಗಡಿಯನ್ನು ಮತ್ತೆ ತೆರೆಯುವಂತೆ ಅದರ ಒತ್ತಡ ಹೇರುವಂತೆ ಹಮಾಸ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದೆ. 2007ರಲ್ಲಿ ಹಮಾಸ್ ಗಾಝಾ ಪ್ರದೇಶವನ್ನು ವಶಪಡಿಸಿಕೊಂಡಾಗಿನಿಂದ ಎರಡು ದಶಲಕ್ಷಕ್ಕೂ ಹೆಚ್ಚು ಜನರಿಗೆ ನೆಲೆಯಾಗಿರುವ ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ಬಿಗಿಯಾದ ದಿಗ್ಬಂಧನವನ್ನು ವಿಧಿಸಿದೆ. ಆಗಿನಿಂದಲೂ ಈ ಪ್ರದೇಶದ ಆರ್ಥಿಕ ಪರಿಸ್ಥಿತಿ ಹಾಳಾಗಿದ್ದು, ಇಲ್ಲಿನ ನಿವಾಸಿಗಳು ದುರ್ಭರ ಪರಿಸ್ಥಿತಿಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ.
ಇದನ್ನೂ ಓದಿ : ಪಾಕಿಸ್ತಾನದಲ್ಲಿ ತಾರಕಕ್ಕೇರಿದ ಹಿಂದೂಗಳ ಮೇಲಿನ ದೌರ್ಜನ್ಯ; ಕಾಶ್ಮೋರ್, ಕರಾಚಿಗಳಲ್ಲಿ ಪ್ರತಿಭಟನೆ