ಜೆರುಸಲೇಂ: ಲೆಬನಾನ್‌ನ ಹಿಜ್ಬುಲ್ಲಾ ಗುಂಪು ಭಾನುವಾರ ನಡೆಸಿದ ದಾಳಿಯಲ್ಲಿ ಏಳು ಇಸ್ರೇಲಿ ಸೈನಿಕರು ಸೇರಿದಂತೆ 17 ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಇಸ್ರೇಲ್ ಸೇನೆ, ಲೆಬನಾನ್-ಇಸ್ರೇಲ್ ಗಡಿಯಲ್ಲಿ ಇರಾನ್ ಬೆಂಬಲಿತ ಗುಂಪು ಮತ್ತು ಇಸ್ರೇಲ್ ಸೇನೆಯ ನಡುವಿನ ಸಂಘರ್ಷ ತೀವ್ರಗೊಳ್ಳುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದಿದೆ.
ಇಬ್ಬರ ಸ್ಥಿತಿ ಗಂಭೀರ: ಮಧ್ಯಪ್ರಾಚ್ಯದಲ್ಲಿ ಪ್ರಸ್ತುತ ಯುದ್ಧ ನಡೆಯುತ್ತಿದ್ದು, ಇದು ಇನ್ನಷ್ಟು ತೀವ್ರಗೊಳ್ಳುವ ಅಪಾಯವಿದೆ. ಉತ್ತರ ಇಸ್ರೇಲ್‌ನ ಮನರಾ ಪ್ರದೇಶದಲ್ಲಿ ಭಾನುವಾರ ನಡೆದ ಮೋರ್ಟಾರ್ ದಾಳಿಯ ಪರಿಣಾಮವಾಗಿ ಏಳು ಐಡಿಎಫ್ ಸೈನಿಕರು ಗಾಯಗೊಂಡಿದ್ದಾರೆ. ಸ್ಥಳವನ್ನು ಗುರುತಿಸದೆ ನಡೆಸಿರುವ ರಾಕೆಟ್ ದಾಳಿಯಿಂದ 10 ನಾಗರಿಕರು ಸಹ ಗಾಯಗೊಂಡಿದ್ದಾರೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿಕೆಯಲ್ಲಿ ತಿಳಿಸಿದೆ.
ಹಮಾಸ್ನಿಂದ ದಾಳಿ: ಒಂದು ಗಂಟೆಯಲ್ಲಿ ಲೆಬನಾನ್‌ನಿಂದ 15 ರಾಕೆಟ್ ದಾಳಿಗಳು ನಡೆದಿದೆ. ಇದರಲ್ಲಿ ನಾಲ್ಕು ರಾಕೆಟ್ಗಳನ್ನು ನಾಶಪಡಿಸಲಾಗಿದೆ. ಉಳಿದವು ತೆರೆದ ಪ್ರದೇಶಗಳಲ್ಲಿ ಬಿದ್ದಿವೆ. ಉತ್ತರ ಹೈಫಾ ಮತ್ತು ದಕ್ಷಿಣ ಲೆಬನಾನ್‌ನಿಂದ ಇಸ್ರೇಲಿ ಗಡಿ ಪಟ್ಟಣಗಳಾದ ನೌರಾ ಮತ್ತು ಶ್ಲೋಮಿ ಮೇಲೆ ಈ ರಾಕೆಟ್ ದಾಳಿ ನಡೆದಿದ್ದು, ಇದರ ಹೊಣೆಯನ್ನು ಹಮಾಸ್‌ನ ಮಿಲಿಟರಿ ವಿಭಾಗವು ವಹಿಸಿಕೊಂಡಿದೆ ಎಂದು ಇಸ್ರೇಲಿ ಮಿಲಿಟರಿ ಹೇಳಿದೆ.
ಗಾಜಾದ ಅತಿದೊಡ್ಡ ಆಸ್ಪತ್ರೆಯ ಬಳಿ ತನ್ನ ಪಡೆಗಳು ಮತ್ತು ಹಮಾಸ್ ಉಗ್ರಗಾಮಿಗಳ ನಡುವೆ ಭೀಕರ ಕಾದಾಟದ ನಡುವೆ ಇಸ್ರೇಲ್ ಶನಿವಾರ ರಾತ್ರಿ ಮತ್ತು ಭಾನುವಾರ ಬೆಳಗ್ಗೆ ಇಡೀ ಪ್ರದೇಶದಲ್ಲಿ ಭಾರಿ ವೈಮಾನಿಕ ದಾಳಿ ಮತ್ತು ಶೆಲ್ ದಾಳಿ ನಡೆಸಿತು. ಕದನ ವಿರಾಮಕ್ಕಾಗಿ ಹೆಚ್ಚುತ್ತಿರುವ ಅಂತಾರಾಷ್ಟ್ರೀಯ ಮನವಿಯನ್ನು ಇಸ್ರೇಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶನಿವಾರ ತಿರಸ್ಕರಿಸಿರುವುದು ಗೊತ್ತಿರುವ ಸಂಗತಿ. ಗಾಜಾಪಟ್ಟಿಯಲ್ಲಿ ಆಡಳಿತಾರೂಢ ಹಮಾಸ್ ಉಗ್ರರನ್ನು ಹತ್ತಿಕ್ಕಲು ಇಸ್ರೇಲ್‌ನ ಹೋರಾಟ ಪೂರ್ಣ ಬಲದಿಂದ ಮುಂದುವರಿಯಲಿದೆ ಎಂದು ಅವರು ಹೇಳಿದ್ದರು. ಗಾಜಾದಲ್ಲಿ ಹಮಾಸ್ ಒತ್ತೆಯಾಳಾಗಿದ್ದ ಎಲ್ಲಾ 240 ಜನರನ್ನು ಬಿಡುಗಡೆ ಮಾಡಿದರೆ ಮಾತ್ರ ಕದನ ವಿರಾಮ ಘೋಷಿಸಬಹದು ಎಂದು ನೆತನ್ಯಾಹು ಸ್ಪಷ್ಟಪಡಿಸಿದ್ದರು.
ಸಾವಿನ ಸಂಖ್ಯೆ ಏರಿಕೆ: ಯುದ್ಧದಲ್ಲಿ ಈವರೆಗೆ 11 ಸಾವಿರಕ್ಕೂ ಹೆಚ್ಚು ಪ್ಯಾಲೆಸ್ಟೈನಿಯನ್ನರು ಬಲಿಯಾಗಿದ್ದಾರೆ. ಅದರಲ್ಲಿ ಮೂರನೇ ಎರಡರಷ್ಟು ಮಹಿಳೆಯರು ಮತ್ತು ಅಪ್ರಾಪ್ತರು ಇದ್ದಾರೆ. ಸುಮಾರು 2,700 ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ. ಇವರೆಲ್ಲಾ ಅವಶೇಷಗಳಡಿ ಸಿಲುಕಿರುವ ಅಥವಾ ಸಾವಿಗೀಡಾರುವ ಶಂಕೆ ಇದೆ. ಹಮಾಸ್ ದಾಳಿಗೆ ಇಸ್ರೇಲ್‌ನಲ್ಲಿ ಕನಿಷ್ಠ 1,200 ಜನರು ಸಾವನ್ನಪ್ಪಿದ್ದಾರೆ.
ಓದಿ: ಒತ್ತೆಯಾಳುಗಳ ಬಿಡುಗಡೆವರೆಗೆ ಕದನ ವಿರಾಮದ ಮಾತೇ ಇಲ್ಲ: ಬೆಂಜಮಿನ್ ನೆತನ್ಯಾಹು