ರಿಯಾದ್(ಸೌದಿ ಅರೇಬಿಯಾ): ಇಸ್ರೇಲ್-ಹಮಾಸ್ ಸಂಘರ್ಷ ನಿಲ್ಲುವಂತೆ ಕಾಣುತ್ತಿಲ್ಲ. ಈ ಬೆನ್ನಲ್ಲೇ ಇಸ್ರೇಲ್‌ಗೆ ಶಸ್ತ್ರಾಸ್ತ್ರ ರಫ್ತು ಮಾಡುವುದನ್ನು ನಿಲ್ಲಿಸುವಂತೆ ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಮಂಗಳವಾರ ಎಲ್ಲಾ ರಾಷ್ಟ್ರಗಳನ್ನು ಒತ್ತಾಯಿಸಿದ್ದಾರೆ. ಬ್ರಿಕ್ಸ್ ಜಂಟಿ ಸಭೆಯ ಸಂದರ್ಭದಲ್ಲಿ ಈ ವಿನಂತಿ ಮಾಡಿದ್ದಾರೆ.
ಬ್ರಿಕ್ಸ್ ಗುಂಪಿನ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸೌದಿ ಅರೇಬಿಯಾವು ಪ್ಯಾಲೇಸ್ಟಿನಿಯನ್ ರಾಜ್ಯವನ್ನು ಸ್ಥಾಪಿಸಲು ಗಂಭೀರ ಮತ್ತು ಸಮಗ್ರ ಶಾಂತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಒತ್ತಾಯಿಸುತ್ತಿದೆ. ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಎರಡರಲ್ಲೂ ಭದ್ರತೆ ಮತ್ತು ಸ್ಥಿರತೆಯನ್ನು ಸಾಧಿಸಲು ಅಂತರರಾಷ್ಟ್ರೀಯ ನಿರ್ಧಾರಗಳ ಅನುಷ್ಠಾನವನ್ನು ಹೊರತುಪಡಿಸಿ ಬೇರೆ ಮಾರ್ಗವಿಲ್ಲ ಎಂದರು.
ಗಾಜಾ ಸ್ಟ್ರಿಪ್‌ನಲ್ಲಿ ಇಸ್ರೇಲ್‌ನ ಮಿಲಿಟರಿ ಕಾರ್ಯಾಚರಣೆಗಳನ್ನು ದೇಶವು ತಿರಸ್ಕರಿಸಿರುವುದನ್ನು ಅವರು ಪುನರುಚ್ಚರಿಸಿದರು ಮತ್ತು ಅವುಗಳನ್ನು ತಕ್ಷಣವೇ ನಿಲ್ಲಿಸುವಂತೆ ಒತ್ತಾಯಿಸಿದರು. ಬಳಿಕ, ಈ ಪ್ರದೇಶದಲ್ಲಿ ಶಾಶ್ವತ ಶಾಂತಿ ನೆಲೆಸಲು ಎರಡು ರಾಜ್ಯಗಳ ಪರಿಹಾರವೊಂದೇ ದಾರಿ, ಅಂತರರಾಷ್ಟ್ರೀಯ ನಿರ್ಧಾರಗಳ ಅನುಷ್ಠಾನದ ಮೂಲಕ ಪ್ಯಾಲೆಸ್ಟೈನ್‌ನಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಸಾಧಿಸಬೇಕು. ಹಾಗಾಗಿ, ಇಲ್ಲಿ ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಅನುಸರಿಸುವ ಮಹತ್ವವಿದೆ ಎಂದು ಒತ್ತಿ ಹೇಳಿದರು.
ಯುದ್ಧದ ಆರಂಭದಿಂದಲೂ ಸೌದಿ ಅರೇಬಿಯಾ ಗಾಜಾ ಪಟ್ಟಿಯಲ್ಲಿರುವ ನಾಗರಿಕರನ್ನು ರಕ್ಷಿಸಲು ದಣಿವರಿಯದ ಪ್ರಯತ್ನಗಳನ್ನು ಮಾಡಿದೆ. ಗಾಜಾದಲ್ಲಿ ನಡೆಯುತ್ತಿರುವ ಕ್ರೂರ ಅಪರಾಧಗಳನ್ನು ಅಂತ್ಯಗೊಳಿಸಲು ಸಾಮೂಹಿಕ ಪ್ರಯತ್ನ ಮಾಡಲಾಗುತ್ತಿದೆ. ಪ್ಯಾಲೆಸ್ಟೀನಿಯಾದಲ್ಲಿ ನಡೆಯುತ್ತಿರುವ ಬಲವಂತದ ಸ್ಥಳಾಂತರವನ್ನು ಸೌದಿ ಅರೇಬಿಯಾ ತಿರಸ್ಕರಿಸುತ್ತದೆ ಎಂದು ಪುನರುಚ್ಚರಿಸಿದರು.
ಬ್ರಿಕ್ಸ್ ಸಭೆಯನ್ನು ಅಧ್ಯಕ್ಷ ರಾಷ್ಟ್ರ ದಕ್ಷಿಣ ಆಫ್ರಿಕಾ ಆಯೋಜಿಸಿದ್ದು, ಈ ವೇಳೆ ಇಸ್ರೇಲ್ ಯುದ್ಧ ಅಪರಾಧಗಳು ಮತ್ತು ಪ್ಯಾಲೇಸ್ಟಿನಿಯನ್ ಪ್ರದೇಶದಲ್ಲಿ ನಡೆಯುತ್ತಿರುವ ಕೃತ್ಯವನ್ನು "ಜನಾಂಗೀಯ ಹತ್ಯೆ" ಎಂದು ಆರೋಪಿಸಲಾಯಿತು. ಬ್ರಿಕ್ಸ್ ರಾಷ್ಟ್ರಗಳ ಗುಂಪು ಜಂಟಿ ಹೇಳಿಕೆಯಲ್ಲಿ ಗಾಜಾದಲ್ಲಿ ತಕ್ಷಣ ಮಾನವೀಯ ಕದನ ವಿರಾಮಕ್ಕೆ ಕರೆ ನೀಡಿವೆ.
ಇದನ್ನೂ ಓದಿ: ನಾಲ್ಕು ದಿನಗಳ ಕದನ ವಿರಾಮಕ್ಕೆ ಒಪ್ಪಿದ ಇಸ್ರೇಲ್ ; 50 ಒತ್ತೆಯಾಳುಗಳ ಬಿಡುಗಡೆಗೆ ಹಮಾಸ್ ನಿರ್ಧಾರ
BRICS ದೇಶಗಳು: ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ. ಹೊಸದಾಗಿ ಸೇರ್ಪಡೆಗೊಂಡ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಸಹ ವರ್ಚುವಲ್ ಸಭೆಯಲ್ಲಿ ಪಾಲ್ಗೊಂಡಿದ್ದರು. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಕೂಡ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ್ದರು.
ಅಕ್ಟೋಬರ್ 7ರಂದು ಹಮಾಸ್ ಭಯೋತ್ಪಾದಕ ಗುಂಪು ಇಸ್ರೇಲ್ ಮೇಲೆ ವೈಮಾನಿಕ ದಾಳಿ ನಡೆಸಿ ಸುಮಾರು 1,200 ಜನರನ್ನು ಕೊಂದ ನಂತರ ಇಸ್ರೇಲ್-ಹಮಾಸ್ ಯುದ್ಧವು ಉಲ್ಬಣಗೊಂಡಿತು. ಇಸ್ರೇಲ್ ಇತಿಹಾಸದಲ್ಲೇ ಇದನ್ನು ಅತ್ಯಂತ ಭೀಕರ ದಾಳಿ ಗುರುತಿಸಲಾಗಿದೆ. ವೈಮಾನಿಕ ದಾಳಿಗೆ ಪ್ರತಿಕಾರವಾಗಿ ಇಸ್ರೇಲ್, ಗಾಜಾದಲ್ಲಿ ಬಾಂಬ್ ದಾಳಿ ನಡೆಸುವ ಮೂಲಕ ಸೇಡು ತೀರಿಸಿಕೊಳ್ಳುತ್ತಿದೆ. ಗಾಜಾದ ಅಧಿಕಾರಿಗಳ ಪ್ರಕಾರ, ಯುದ್ಧದಲ್ಲಿ ಸಾವಿರಾರು ಮಕ್ಕಳು ಸೇರಿದಂತೆ 13,300ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.