ವಾಷಿಂಗ್ಟನ್(ಅಮೆರಿಕ): ಉಕ್ರೇನ್ ಮೇಲೆ ಆಕ್ರಮಣ ಮಾಡುವುದರೊಂದಿಗೆ ಹಿಂಸಾಚಾರದಲ್ಲಿ ತೊಡಗಿರುವ ರಷ್ಯಾದೊಂದಿಗೆ ಪ್ರಮುಖ ಶಸ್ತ್ರಾಸ್ತ್ರ ವಹಿವಾಟುಗಳನ್ನು ನಡೆಸದಂತೆ ಅಮೆರಿಕ ಎಲ್ಲಾ ರಾಷ್ಟ್ರಗಳಿಗೆ ಕರೆ ನೀಡುತ್ತಿದೆ ಎಂದು ಯುಎಸ್ ವಿದೇಶಾಂಗ ಕಾರ್ಯದರ್ಶಿ ಆ್ಯಂಟನಿ ಬ್ಲಿಂಕೆನ್ ಹೇಳಿದ್ದಾರೆ. ಭಾರತ ಮತ್ತು ಅಮೆರಿಕದ ರಕ್ಷಣಾ ಮತ್ತು ವಿದೇಶಾಂಗ ಸಚಿವರ ನಡುವಿನ 2+2 ಸಚಿವರ ಮಾತುಕತೆ ನಂತರ ಮಾತನಾಡಿದ ಅವರು ರಷ್ಯಾದೊಂದಿಗೆ ಶಸ್ತ್ರಾಸ್ತ್ರಗಳ ಒಪ್ಪಂದ ಮಾಡಿಕೊಳ್ಳದಂತೆ ಮನವಿ ಮಾಡಿದ್ದಾರೆ.
ಭಾರತ ಈಗಾಗಲೇ ರಷ್ಯಾದ ಕೆಲವು ಶಸ್ತ್ರಗಳನ್ನು ಖರೀದಿ ಮಾಡಿದೆ. ಭಾರತದ ಮೇಲೆ ನಿರ್ಬಂಧಗಳನ್ನು ವಿಧಿಸಲಾಗುತ್ತದೆಯೇ ಎಂದು ಮಾಧ್ಯಮಗಳು ಬ್ಲಿಂಕನ್ ಅವರನ್ನು ಪ್ರಶ್ನಿಸಿದ್ದು, ಈ ಕುರಿತು ಪ್ರತಿಕ್ರಿಯೆ ನೀಡಿದ ಅವರು ರಷ್ಯಾದೊಂದಿಗೆ ಶಸ್ತ್ರಾಸ್ತ್ರಗಳಿಗೆ ಸಂಬಂಧಿಸಿದ ಹೊಸ ವಹಿವಾಟುಗಳನ್ನು ನಡೆಸದಂತೆ ನಾವು ಎಲ್ಲಾ ದೇಶಗಳನ್ನು ಒತ್ತಾಯಿಸುತ್ತೇವೆ. ಎಸ್ 400 ಆ್ಯಂಟಿ ಮಿಸೈಲ್ ಸಿಸ್ಟಂ ಅನ್ನು ಭಾರತ ಖರೀದಿಸಿದ್ದು, ಈ ಕುರಿತು ಇನ್ನೂ ನಿರ್ಣಯ ಮಾಡಿಲ್ಲ ಎಂದಿದ್ದಾರೆ.
ಜೊತೆಗೆ ಮಿಲಿಟರಿ ಉಪಕರಣಗಳ ವ್ಯಾಪಾರದಲ್ಲಿ ಭಾರತ ಮತ್ತು ರಷ್ಯಾ ನಡುವೆ ಸುದೀರ್ಘ ಇತಿಹಾಸವಿದೆ. ನಾವು ಭಾರತಕ್ಕೆ ರಕ್ಷಣಾ ಉಪಕರಣಗಳನ್ನು ಪೂರೈಸಲು ಸಾಧ್ಯವಾಗದ ಸಂದರ್ಭದಲ್ಲಿ ರಷ್ಯಾ ಭಾರತವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿತು. ಈಗ ನಾವು ಭಾರತದ ಪಾಲುದಾರರಾಗಲು ಸಮರ್ಥರಾಗಿದ್ದೇವೆ ಮತ್ತು ಸಿದ್ಧರಿದ್ದೇವೆ ಎಂದು ಬ್ಲಿಂಕನ್ ಭರವಸೆ ನೀಡಿದರು. ಇದರ ಜೊತೆಗೆ ಮಾತನಾಡಿದ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್, ಅಮೆರಿಕ ಭಾರತದೊಂದಿಗೆ ಮಿಲಿಟರಿ ಆಧುನೀಕರಣದ ಬಗ್ಗೆ ಚರ್ಚಿಸುತ್ತಿದೆ. ಭಾರತಕ್ಕೆ ಶಸ್ತ್ರಗಳನ್ನು ಹೆಚ್ಚು ಸಿಗುವಂತೆ ಮಾಡಲು ಅಮೆರಿಕ ಸಿದ್ಧವಾಗಿದೆ ಎಂದು ಹೇಳಿದ್ದಾರೆ.
ಭಾರತವು ಈಗಾಗಲೇ ರಷ್ಯಾ ನಿರ್ಮಿತ ಟ್ಯಾಂಕ್‌ಗಳು ಮತ್ತು ಕ್ಷಿಪಣಿ ವ್ಯವಸ್ಥೆಗಳನ್ನು ಒಳಗೊಂಡಂತೆ ಹಲವಾರು ಶಸ್ತ್ರಾಸ್ತ್ರಗಳನ್ನು ಬಳಸುತ್ತಿದೆ. ಅದರೊಂದಿಗೆ ರಷ್ಯಾದ ಎಸ್-400 ಕ್ಷಿಪಣಿ ವಿರೋಧಿ ವ್ಯವಸ್ಥೆ ಖರೀದಿ ಮಾಡಿದ್ದು, ಇನ್ನೂ ಹಲವು ಭಾರತಕ್ಕೆ ಬರಬೇಕಿದೆ. ಈ ಹಿನ್ನೆಲೆಯಲ್ಲಿ ರಷ್ಯಾದ ಸಮೀಪಕ್ಕೆ ಭಾರತ ಬರುತ್ತಿದ್ದು, ಈ ಮೊದಲು ಅಮೆರಿಕ ನಿರ್ಬಂಧ ವಿಧಿಸುವ ಎಚ್ಚರಿಕೆ ನೀಡಿತ್ತು. ಈಗ ಉಕ್ರೇನ್ ರಷ್ಯಾ ಯುದ್ಧದ ವೇಳೆ ರಷ್ಯಾ ಮತ್ತು ಅಮೆರಿಕ ಮತ್ತಷ್ಟು ಹತ್ತಿರವಾಗಿದ್ದು, ಈ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಭಾರತದ ಸಚಿವರ ಮಾತುಕತೆ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು: 'ಪ್ರತಿಭಟನೆ ಕೈ ಬಿಡಿ, ಸರ್ಕಾರದಿಂದ ಸರ್ವಪ್ರಯತ್ನ': ಮಹಿಂದಾ ಮನವಿ