ಕೊಲಂಬೊ: ಶ್ರೀಲಂಕಾದ ಅಧ್ಯಕ್ಷರ ಭವನ ಮತ್ತು ಪ್ರಧಾನಮಂತ್ರಿಗಳ ಅಧಿಕೃತ ನಿವಾಸದಲ್ಲಿ ಅಳವಡಿಸಲಾಗಿದ್ದ ಪುರಾತನ ಮತ್ತು ಮೌಲ್ಯವುಳ್ಳ 1 ಸಾವಿರ ಕಲಾಕೃತಿಗಳು ನಾಪತ್ತೆಯಾಗಿವೆ. ಕೆಲ ದಿನಗಳ ಹಿಂದೆ ನಡೆದ ಪ್ರತಿಭಟನೆ ನಡೆದಾಗ ಜನರು ಭವನಕ್ಕೆ ನುಗ್ಗಿದ್ದು ಇವುಗಳನ್ನು ಕೊಂಡೊಯ್ದಿದ್ದಾರೆ ಎಂದು ಅಲ್ಲಿನ ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ತಂಡ ರಚಿಸಿ ತನಿಖೆ ನಡೆಸಲಾಗುತ್ತಿದೆ. ಅಧ್ಯಕ್ಷರ ಭವನ ಮತ್ತು ಪ್ರಧಾನಿ ನಿವಾಸದಲ್ಲಿದ್ದ ಕಲಾಕೃತಿಗಳ ನಿಖರ ಮಾಹಿತಿ ಪುರಾತತ್ವ ಇಲಾಖೆಯ ಬಳಿಯೇ ಇಲ್ಲ. ನಾಪತ್ತೆಯಾದ ಕಲಾಕೃತಿಗಳು ಸಾವಿರಕ್ಕೂ ಅಧಿಕ ಎಂದು ಅಂದಾಜಿಸಲಾಗಿದೆ. ಈ ಎರಡು ಕಟ್ಟಡವನ್ನು "ಪುರಾತತ್ವ ಪ್ರಾಮುಖ್ಯತೆಯ ಸ್ಥಳ"ವೆಂದು ಈ ಹಿಂದೆಯೇ ಘೋಷಿಸಲಾಗಿದೆ.
ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ತಲೆದೋರಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನ ವಿರುದ್ಧ ಜುಲೈ 9 ರಂದು ದಂಗೆ ಎದ್ದ ಜನರು, ರಾಷ್ಟ್ರಪತಿ ಭವನ ಮತ್ತು ಪ್ರಧಾನಿ ನಿವಾಸಗಳಿಗೆ ನುಗ್ಗಿ ದಾಂಧಲೆ ಸೃಷ್ಟಿಸಿದ್ದರು. ಭವನದಲ್ಲಿನ ವಸ್ತುಗಳನ್ನು ಮನಸೋಇಚ್ಛೆ ಬಳಸಿದ್ದಲ್ಲದೇ, ಈಜುಕೊಳದಲ್ಲಿ ನೀರಾಟವಾಡಿ ಮಸ್ತಿ ಮಾಡಿದ್ದರು. ಬಳಿಕ ಪ್ರತಿಭಟನಾಕಾರರು ಅಲ್ಲಿದ್ದ ಮೌಲ್ಯಯುತ ಕಲಾಕೃತಿಗಳನ್ನು ಕೊಂಡೊಯ್ದಿರಬಹುದು ಎಂದು ಪೊಲೀಸರು ಅನುಮಾನಿಸಿದ್ದಾರೆ.
ಜುಲೈ 13 ರಂದು ಅಧ್ಯಕ್ಷ ಗೊಟಬಯ ರಾಜಪಕ್ಸ ಮಾಲ್ಡೀವ್ಸ್‌ಗೆ ಪಲಾಯನ ಮಾಡಿದ್ದರು. ಬಳಿಕ ರಾಜೀನಾಮೆ ನೀಡಿದ್ದರಿಂದ ಜುಲೈ 20 ರಂದು ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ರಾನಿಲ್ ವಿಕ್ರಮ್ಸಿಂಘೆ ಹೊಸ ಅಧ್ಯಕ್ಷರಾಗಿ ಆಯ್ಕೆಯಾದರೆ, ದಿನೇಶ್ ಗುಣವರ್ಧನ ಪ್ರಧಾನಿಯಾಗಿ ನೇಮಕಗೊಂಡಿದ್ದರು.
ಇದನ್ನೂ ಓದಿ: ವಿಶ್ವದ ಅತ್ಯಂತ ಹಳೆಯ, ದೊಡ್ಡ ಗಂಡು ಪಾಂಡಾ ಇನ್ನಿಲ್ಲ.. ಆನ್ ಆನ್ಗೆ ದಯಾಮರಣ ನೀಡಿದ ಉದ್ಯಾನ!