ಸ್ಯಾನ್ ಫ್ರಾನ್ಸಿಸ್ಕೋ : ಅಮೆರಿಕಾದಲ್ಲಿ ಗರ್ಭಪಾತ ವಿರೋಧಿ ಅಲೆ ಭಾರಿ ಸದ್ದು ಮಾಡುತ್ತಿದೆ. ಅಲ್ಲಿನ ಸುಪ್ರೀಂಕೋರ್ಟ್ ಗರ್ಭಪಾತ ಹಕ್ಕುಗಳ ಮೇಲಿನ ತೀರ್ಪನ್ನು ರದ್ದುಪಡಿಸುವ ಆದೇಶ ಹೊರಡಿಸಿದ ಹಿನ್ನೆಲೆ ಪ್ರತಿಭಟನೆಗಳು ಜೋರಾಗಿವೆ. ಈ ನಡುವೆ ಗರ್ಭಪಾತ ವಿರೋಧಿ ಕಾರ್ಯಕರ್ತನೊಬ್ಬ ಸ್ಯಾನ್ ಫ್ರಾನ್ಸಿಸ್ಕೋದ 60 ಅಂತಸ್ತಿನ ಕಟ್ಟಡವನ್ನು ಯಾವುದೇ ನೆರವಿಲ್ಲದೇ ಹತ್ತಿ ಪ್ರತಿಭಟಿಸಿದ್ದಾನೆ.
ಮೈಸನ್ ಡೆಸ್ ಚಾಂಪ್ಸ್ ಎಂಬ ಈ ಹೋರಾಟಗಾರ ಇನ್ ಸ್ಟಾಗ್ರಾಂನಲ್ಲಿ ಪ್ರತಿಭಟನೆ ವಿಚಾರವನ್ನು ಹಂಚಿಕೊಂಡಿದ್ದಾರೆ. ತನ್ನನ್ನು ತಾನು"ಪ್ರೊ-ಲೈಫ್ ಸ್ಪೈಡರ್‌ಮ್ಯಾನ್" ಎಂದು ಬಣ್ಣಿಸಿಕೊಂಡಿದ್ದಾನೆ. ಗರ್ಭಪಾತಕ್ಕೆ ತನ್ನ ವಿರೋಧ ವ್ಯಕ್ತಪಡಿಸಿದ ಆತ ಸ್ಯಾನ್ ಫ್ರಾನ್ಸಿಸ್ಕೋದ ಸೇಲ್ಸ್ ಫೋರ್ಸ್ ಟವರ್ ಅನ್ನು ಹತ್ತಿ ಎಲ್ಲರಲ್ಲೂ ಆತಂಕ ಉಂಟು ಮಾಡಿದ್ದ. ಅವನ ಈ ಅಪಾಯಕಾರಿ ಪ್ರತಿಭಟನೆಯ ಕಾರಣಕ್ಕೆ ಆತನನ್ನು ಪೊಲೀಸರು ಬಂಧಿಸಿದ್ದಾರೆ.
ನಾನು ಸೇಲ್ಸ್ ಫೋರ್ಸ್ ಟವರ್ನಲ್ಲಿದ್ದೇನೆ. ಗರ್ಭಪಾತಕ್ಕೆ ನನ್ನ ವಿರೋಧ ವ್ಯಕ್ತಪಡಿಸಲು ಈ ಗಗನಚುಂಬಿ ಕಟ್ಟಡವೇರುವ ಮೂಲಕ ಪ್ರತಿಭಟನೆ ನಡೆಸುತ್ತಿದ್ದೇನೆ. ಎಲ್ಲವೂ ಚೆನ್ನಾಗಿದೆ, ನನಗೆ ಸ್ವಲ್ಪ ನೀರು ಇದ್ದರೆ ಸಾಕು ಎಂದು ಆತ ಹೇಳಿಕೊಂಡಿದ್ದಾನೆ. ಸೇಲ್ಸ್ ಫೋರ್ಸ್ ಟವರ್ ಫ್ರಾನ್ಸಿಸ್ಕೋದ ಅತಿ ಎತ್ತರದ ಕಟ್ಟಡವಾಗಿದೆ ಮತ್ತು ಅದರ ಮಾಲೀಕರ ಪ್ರಕಾರ ಯುನೈಟೆಡ್ ಸ್ಟೇಟ್ಸ್‌ನಲ್ಲಿ 12ನೇ ಅತಿ ಎತ್ತರವಾದ ಕಟ್ಟಡ.
ಹಿನ್ನೆಲೆ : ಸುಮಾರು ಅರ್ಧ ಶತಮಾನದವರೆಗೆ ಗರ್ಭಪಾತದ ಹಕ್ಕನ್ನು ಖಾತರಿಪಡಿಸಿದ ಹೆಗ್ಗುರುತಾಗಿರುವ ರೋಯ್ ವರ್ಸಸ್ ವೇಡ್ ತೀರ್ಪನ್ನು ತಳ್ಳಿ ಹಾಕಲು ಯುಎಸ್ ಸುಪ್ರೀಂಕೋರ್ಟ್ ಮತ ಹಾಕಿತು ಮತ್ತು ಪ್ರತಿ ರಾಜ್ಯವು ಗರ್ಭಪಾತವನ್ನು ನಿಷೇಧಿಸಬೇಕೆ ಎಂದು ನಿರ್ಧರಿಸಲು ಅವಕಾಶ ಮಾಡಿಕೊಟ್ಟಿತು. ನ್ಯಾಯಮೂರ್ತಿ ಸ್ಯಾಮ್ಯುಯೆಲ್ ಎ ಅಲಿಟೊ ಜೂನಿಯರ್ ಬರೆದ ಕರಡು ಅಭಿಪ್ರಾಯದ ಪ್ರಕಾರ, ನ್ಯಾಯಾಲಯದ ಬಹುಪಾಲು ಜನರು ರೋಯ್ ವರ್ಸಸ್ ವೇಡ್ ತೀರ್ಪನ್ನು ರದ್ದುಗೊಳಿಸಲು ಮತ ಹಾಕಿದರು.
ಆದರೆ, ನ್ಯಾಯಮೂರ್ತಿ ಅಲಿಟೊ ನಿರ್ಧಾರ ಸರಿಯಲ್ಲ. ಯುಎಸ್ನಲ್ಲಿ ಒಂದು ಪೀಳಿಗೆಗೂ ಹೆಚ್ಚು ಕಾಲ ರಾಜಕೀಯ ಚರ್ಚೆಗಳನ್ನು ಉಂಟು ಮಾಡಿದ ವಿವಾದಾತ್ಮಕ ವಿಷಯವನ್ನು ರಾಜಕಾರಣಿಗಳು ನಿರ್ಧರಿಸಬೇಕು. ನ್ಯಾಯಾಲಯಗಳಲ್ಲ ಎಂದು ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಟ್ವಿಟ್ಟರ್ ಸಾಮಾನ್ಯ ಬಳಕೆದಾರರಿಗೆ ಉಚಿತ; ವಾಣಿಜ್ಯ, ಸರ್ಕಾರದವರಿಗೆ ದುಡ್ಡು ಖಚಿತ!