ಅಮೆರಿಕ: ಪಾಕಿಸ್ತಾನ ಅಪಾಯಕಾರಿ ರಾಷ್ಟ್ರ. ಪರಮಾಣು ಬಾಂಬ್ಗಳ ಮೇಲೆ ಆ ದೇಶ ನಿಯಂತ್ರಣ ಹೊಂದಿಲ್ಲ. ಇದು ಆತಂಕದ ವಿಚಾರ ಎಂದು ಜರಿದಿದ್ದ ಅಮೆರಿಕ, ಈಗ ತನ್ನ ಹೇಳಿಕೆಯನ್ನು ಬದಲಿಸಿದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ನಿಯಂತ್ರಿಸುವ ಪಾಕಿಸ್ತಾನದ ಸಾಮರ್ಥ್ಯದ ಬಗ್ಗೆ ತನಗೆ ವಿಶ್ವಾಸವಿದೆ ಎಂದು ಸೋಮವಾರ ಉಲ್ಟಾ ಹೊಡೆದಿದೆ.
ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರು ಈ ಹಿಂದೆ ಪಾಕಿಸ್ತಾನದಲ್ಲಿನ ಶಸ್ತ್ರಾಸ್ತ್ರಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಇದನ್ನು ವಿರೋಧಿಸಿದ್ದ ಇಸ್ಲಾಂ ರಾಷ್ಟ್ರ, ಅಮೆರಿಕದ ರಾಯಭಾರಿಯನ್ನು ಕರೆಯಿಸಿಕೊಂಡು ತನ್ನ ಆಕ್ಷೇಪಣೆ ಸಲ್ಲಿಸಿತ್ತು. ಬಳಿಕ ಅಮೆರಿಕ ತನ್ನ ಮಾತನ್ನು ಬದಲಿಸಿ ಪಾಕಿಸ್ತಾನದ ಮೇಲೆ ನಂಬಿಕೆ ಇದೆ ಎಂದು ಹೇಳಿಕೆ ನೀಡಿದೆ.
ಪಾಕಿಸ್ತಾನದ ಬದ್ಧತೆ ಮತ್ತು ಅದರ ಪರಮಾಣು ಶಸ್ತ್ರಾಸ್ತ್ರಗಳನ್ನು ಭದ್ರಪಡಿಸಿಕೊಳ್ಳುವ ಸಾಮರ್ಥ್ಯದ ಬಗ್ಗೆ ಯುನೈಟೆಡ್ ಸ್ಟೇಟ್ಸ್ ವಿಶ್ವಾಸ ಹೊಂದಿದೆ. ಸುರಕ್ಷಿತ ಮತ್ತು ಸಮೃದ್ಧ ಪಾಕಿಸ್ತಾನದ ಆಶಯವನ್ನು ಯುಎಸ್ ಹೊಂದಿದೆ. ಆ ದೇಶದೊಂದಿಗಿನ ದೀರ್ಘಕಾಲ ಸಂಬಂಧವನ್ನು ಗೌರವಿಸುತ್ತದೆ ಎಂದು ವಿದೇಶಾಂಗ ಇಲಾಖೆಯ ವಕ್ತಾರ ವೇದಾಂತ್ ಪಟೇಲ್ ತಿಳಿಸಿದರು.
ಕ್ಯಾಲಿಫೋರ್ನಿಯಾದಲ್ಲಿ ಡೆಮಾಕ್ರಟಿಕ್ ಪಕ್ಷದ ನಿಧಿಸಂಗ್ರಹಣೆ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅಮೆರಿಕದ ಅಧ್ಯಕ್ಷ ಜೋ ಬಿಡೆನ್, ಪಾಕಿಸ್ತಾನದ ಪರಮಾಣು ಬಾಂಬ್ಗಳ ಕುರಿತು ಆತಂಕ ವ್ಯಕ್ತಪಡಿಸಿ, ಚೀನಾದ ಬಗ್ಗೆಯೂ ಟೀಕಿಸಿದ್ದರು.
ಪಾಕಿಸ್ತಾನ ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರ. ಅದರ ಪರಮಾಣ ಶಸ್ತ್ರಾಸ್ತ್ರಗಳು ಯಾವುದೇ ನಿಯಂತ್ರಣ ಹೊಂದಿಲ್ಲ. ಇದು ಆ ರಾಷ್ಟ್ರ ಮತ್ತು ವಿಶ್ವಕ್ಕೆ ಆತಂಕಕಾರಿ ಎಂದು ಜೋ ಬಿಡೆನ್ ಹೇಳಿದ್ದರು. ಇದು ಪಾಕಿಸ್ತಾನವನ್ನು ಇರುಸುಮುರುಸುಗೊಳಿಸಿತ್ತು, ಬಳಿಕ ಅಮೆರಿಕ ರಾಯಭಾರಿಯನ್ನು ಇಸ್ಲಾಮಾಬಾದ್ಗೆ ಕರೆಯಿಸಿಕೊಂಡು ಪ್ರತಿಭಟನೆ ವ್ಯಕ್ತಪಡಿಸಿತ್ತು.
ಓದಿ: ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಪಾಕಿಸ್ತಾನವೂ ಒಂದು: ಜೋ ಬೈಡನ್